ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಬನ್ನೇರುಘಟ್ಟ ಪಾರ್ಕ್‌ಗೆ ಬಿಳಿ ಹುಲಿ,ಕಾಡು ಬೆಕ್ಕು, 3 ಮೊಸಳೆ ಆಗಮನ

KannadaprabhaNewsNetwork |  
Published : Oct 19, 2024, 01:32 AM ISTUpdated : Oct 19, 2024, 11:00 AM IST
ಬನ್ನೇರುಘಟ್ಟ ಉದ್ಯಾನವನಕ್ಕೆ ಬಿಹಾರದಿಂದ ತರಲಾಗಿರುವ ಬಿಳಿ ಹುಲಿ, ಕಾಡುಬೆಕ್ಕು, ಮೊಸಳೆ. | Kannada Prabha

ಸಾರಾಂಶ

ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನ ಮತ್ತು ಬಿಹಾರದ ಪಾಟ್ನಾದ ಸಂಜಯ್ ಗಾಂಧಿ ಜೈವಿಕ ಉದ್ಯಾನವನಗಳ ನಡುವೆ ಯಶಸ್ವಿ ಪ್ರಾಣಿ ವಿನಿಮಯ ನಡೆದಿದೆ.

 ಬೆಂಗಳೂರು ದಕ್ಷಿಣ :  ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನ ಮತ್ತು ಬಿಹಾರದ ಪಾಟ್ನಾದ ಸಂಜಯ್ ಗಾಂಧಿ ಜೈವಿಕ ಉದ್ಯಾನವನಗಳ ನಡುವೆ ಯಶಸ್ವಿ ಪ್ರಾಣಿ ವಿನಿಮಯ ನಡೆದಿದೆ.

ಪ್ರತಿಯಾಗಿ ಅಳಿವಿನಂಚಿನಲ್ಲಿರುವ ಎರಡು ಗಂಡು ಒಂದು ಹೆಣ್ಣು ಮೊಸಳೆ (ಘಾರಿಯಲ್), 6 ವರ್ಷದ ಒಂದು ಹೆಣ್ಣು ಬಿಳಿ ಹುಲಿ ಹಾಗೂ ಒಂದು ಹೆಣ್ಣು ಕಾಡು ಬೆಕ್ಕನ್ನು ಬನ್ನೇರುಘಟ್ಟಕ್ಕೆ ತರಲಾಗಿದೆ. ವಿನಿಮಯದಡಿಯಲ್ಲಿ ಐದು ದಿನ ಟ್ರಕ್ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಕರೆತರಲಾಗಿದೆ.

ಇನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಒಂದು ಗಂಡು ಜೀಬ್ರಾ ಮತ್ತು ಎರಡು ಗಂಡು ಥಮಿನ್ ಜಿಂಕೆಗಳನ್ನು ಪಾಟ್ನಾ ಮೃಗಾಲಯಕ್ಕೆ ಕಳುಹಿಸಲಾಗಿದೆ. ಈ ಪ್ರಾಣಿ ವಿನಿಮಯಕ್ಕೆ ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆ ನೀಡಿತ್ತು.

ಪಾಟ್ನಾ ಮೃಗಾಲಯದಿಂದ ಕರೆತರುವ ವೇಳೆಯಲ್ಲಿ ತೆಲಂಗಾಣ ರಾಜ್ಯದ ನಿರ್ಮಲ್ ಜಿಲ್ಲೆಯ ಹೈವೆಯಲ್ಲಿ ಪ್ರಾಣಿಗಳನ್ನು ಸಾಗಿಸುತ್ತಿದ್ದ ಲಾರಿ ಅಪಘಾತಕ್ಕೀಡಾಗಿತ್ತು. ಪ್ರಾಣಿಪಾಲಕ ಹರಿಶ್ಚಂದ್ರ, ಪಶು ವೈದ್ಯಾಧಿಕಾರಿ ಆನಂದ್ ಮತ್ತು ಪ್ರಾಣಿಗಳಿಗೆ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯ ಅರಣ್ಯ ಇಲಾಖೆಯ ಸಿಎಫ್ ಮತ್ತು ಡಿಸಿಎಫ್ ಅಧಿಕಾರಿಗಳ ನೆರವಿನೊಂದಿಗೆ ಸುರಕ್ಷಿತವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಶುಕ್ರವಾರ ಕರೆತರಲಾಗಿದೆ.

ಹೊಸ ಅತಿಥಿಗಳ ಆಗಮನದಿಂದ ಜೈವಿಕ ಉದ್ಯಾನದ ಸಿಬ್ಬಂದಿ ಹಾಗೂ ಪ್ರವಾಸಿಗರಲ್ಲಿ ಸಂತೋಷ ಹಿಮ್ಮಡಿಗೊಂಡಿದೆ. ಪ್ರಾಣಿ ವಿನಿಮಯ ಕಾರ್ಯಕ್ರಮದಿಂದ ಎರಡೂ ಮೃಗಾಲಯಗಳಲ್ಲಿನ ಪ್ರಾಣಿಗಳ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ವೃದ್ಧಿಪಡಿಸಲು ಸಹಕಾರಿಯಾಗಲಿದೆ.

-ವಿಶಾಲ್ ಸೂರ್ಯ ಸೇನ್, ಕಾರ್ಯವಾಹಕ ನಿರ್ದೇಶಕ, ಬನ್ನೇರುಘಟ್ಟ ಪಾರ್ಕ್‌.

ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ತಂದಿರುವ ಎಲ್ಲಾ ಪ್ರಾಣಿಗಳು ಆರೋಗ್ಯಕರವಾಗಿದ್ದು, ಮುಂಜಾಗ್ರತಾ ಕ್ರಮವಾಗಿ 45 ದಿನ ಕ್ವಾರೆಂಟೈನ್‌ನಲ್ಲಿ ಇರಿಸಲಾಗುವುದು. ಇಲ್ಲಿನ ಪರಿಸರಕ್ಕೆ ಪ್ರಾಣಿಗಳು ಹೊಂದಿಕೊಂಡ ಬಳಿಕ ನಂತರ ಪ್ರವಾಸಿಗರು ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ.

-ಡಾ। ಕಿರಣ್, ಪಶು ವೈದ್ಯ.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ