ಯಲ್ಲಾಪುರ: ಸಾತ್ವಿಕ ಸುಜ್ಞಾನಿ ಗುರುವು ಸಿಗುವುದು ವಿದ್ಯಾರ್ಥಿಗಳ ಅದೃಷ್ಟ. ನಿಷ್ಠೆ, ಶ್ರದ್ಧೆಯಿಂದ ನಿರಂತರ ಪ್ರಯತ್ನಪಟ್ಟಾಗ ಮಾತ್ರ ಕಲಾಸರಸ್ವತಿ ಒಲಿಯುತ್ತಾಳೆ ಎಂದು ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಹೇಳಿದರು.
ಇಲ್ಲಿಯ ನೂತನ ನಗರದ ಡಿ.ಎನ್. ಗಾಂವ್ಕರ ನಿವಾಸದ ಸಭಾಭವನದಲ್ಲಿ ರಂಗ ಸಹ್ಯಾದ್ರಿ ಸಹಯೋಗದಲ್ಲಿ ಬುಧವಾರ ನಡೆದ ಪ್ರತಿಭಾ ಪ್ರದರ್ಶನ ಮತ್ತು ಸರಸ್ವತಿ ಸಂಗೀತ ವಿದ್ಯಾಲಯ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಲಾ ಪೋಷಕರು ಸೃಷ್ಟಿಯಾಗುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕಿದೆ. ಸಂಗೀತ, ಸಾಹಿತ್ಯ, ಕಲೆಗಳ ಆರಾಧನೆಯಲ್ಲಿ ಸದಾ ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.ರಂಗ ಸಹ್ಯಾದ್ರಿ ಸಂಸ್ಥೆಯ ಅಧ್ಯಕ್ಷ ಡಿ.ಎನ್. ಗಾಂವ್ಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆ, ಸಂಗೀತ ನಮಗೆ ಸಂಸ್ಕಾರ ನೀಡುತ್ತದೆ. ಮಾನಸಿಕ ನೆಮ್ಮದಿಯೂ ದೊರೆಯುತ್ತದೆ. ಅಲ್ಪ ಕಾಲದಲ್ಲಿ ಮಕ್ಕಳು ಸಂಗೀತ ಕಲಿತು ವೇದಿಕೆಯಲ್ಲಿ ಹಾಡಬೇಕು ಎಂದು ಪಾಲಕರು ಬಯಸುತ್ತಾರೆ. ನಿಜವಾಗಿ ಸಂಗೀತದಲ್ಲಿ ಶ್ರೇಷ್ಠತೆ ಪಡೆಯಬೇಕಾದರೆ ನಿರಂತರ ಅಧ್ಯಯನ ಅಗತ್ಯ. ಪಾಲಕರು ಮಕ್ಕಳ ಮೇಲೆ ಒತ್ತಡ ಹೇರಬಾರದು ಎಂದರು.
ರಾಜ್ಯ ಮಟ್ಟದ ಕಲಾಶ್ರೀ ಪ್ರಶಸ್ತಿ ಪುರಸ್ಕೃತೆ ಸಮೃದ್ಧಿ ಭಾಗ್ವತ ಅವಳನ್ನು ಸನ್ಮಾನಿಸಿದ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಶಿಕ್ಷಣದ ಜತೆ ಜತೆಗೆ ಜೀವನ ಶಿಕ್ಷಣವು ಮುಖ್ಯ. ಕಲೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಸಂಗೀತದಲ್ಲಿ ತೊಡಗಿಸಿಕೊಂಡರೆ ಏಕಾಗ್ರತೆಯೂ ಸಿದ್ಧಿಸುತ್ತದೆ ಎಂದರು.ಸಂಗೀತ ಗುರು ದತ್ತಾತ್ರೇಯ ಚಿಟ್ಟೆಪಾಲ ಮಕ್ಕಳ ಹಾಡುಗಾರಿಕೆಗೆ ಮಾರ್ಗದರ್ಶನ ಮಾಡಿದರು. ರಾಜೇಂದ್ರ ಭಾಗ್ವತ (ತಬಲಾ), ಸುದೇಶ ಭಟ್ಟ ಮಣ್ಮನೆ (ಹಾರ್ಮೋನಿಯಂ) ಸಾತ್ ನೀಡಿದರು. ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಶಾನಭಾಗ ಉಪಸ್ಥಿತರಿದ್ದರು. ಶಿಕ್ಷಕರಾದ ಸಣ್ಣಪ್ಪ ಭಾಗ್ವತ ಸ್ವಾಗತಿಸಿ, ನಿರ್ವಹಿಸಿದರು. ಎನ್.ಐ. ಕೋಮಾರ ವಂದಿಸಿದರು.