ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಲಿಂಗಾಯತ ಧರ್ಮ 12ನೇ ಶತಮಾನದಲ್ಲಿ ಸ್ವತಂತ್ರ ಧರ್ಮವಾಗಿ ಸ್ಥಾಪನೆಗೊಂಡಿದ್ದು ಇದಕ್ಕೆ ಸಂವಿಧಾನ ಮಾನ್ಯತೆ ಬೇಕು ಇದನ್ನು ಕೇಳುವುದು ನಮ್ಮ ಹಕ್ಕಾಗಿದೆ. ಹಾಗಾಗಿ ಲಿಂಗಾಯತರು ಜಾಗೃತರಾಗುವ ಮೂಲಕ ಜನಗಣತಿಯ ವೇಳೆ ಲಿಂಗಾಯತ ಧರ್ಮ ಎಂದು ಬರೆಸುವ ಮೂಲಕ ನಮ್ಮ ಜನ ಸಂಖ್ಯೆ ಎಷ್ಟಿದೆ ಎಂಬುದನ್ನು ದಾಖಲಿಸಬೇಕಿದೆ ಎಂದು ಮರಿಯಾಲ ಮಠದ ಹಿಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು. ತಾಲೂಕಿನ ತೇರಂಬಳ್ಳಿ ಗ್ರಾಮದ ಬಸವ ಭವನದಲ್ಲಿ ಜಾಗತಿಕ ಮಹಾಸಭಾ ತಾಲೂಕು ಘಟಕ ಹಮ್ಮಿಕೊಂಡಿದ್ದ ಲಿಂಗಾಯತ ಧರ್ಮ ಜಾಗೃತಿ ಹಾಗೂ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಲಿಂಗಾಯತ ಧರ್ಮ ಬಸವಣ್ಣ ಸ್ಥಾಪಿಸಿದ ಶ್ರೇಷ್ಠ ಧರ್ಮವಾಗಿದ್ದು ನಾವು ಹಿಂದೂ ಎಂದು ಒಪ್ಪಿಕೊಂಡರೆ ಚಾತುರ್ವರ್ಣದ ಕೊನೆಯ ವರ್ಗ ಶೂದ್ರ ಎಂದು ಒಪ್ಪಿಕೊಂಡಂತಾಗುತ್ತೆ. ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಆಗಬೇಕು ಎಂಬುದು ಎಲ್ಲರ ಆಶಯ ಹಾಗೂ ಅಪೇಕ್ಷೆಯಾಗಿದೆ. ನಾವು ಹಿಂದೂಗಳಲ್ಲ ಹಿಂದೂ ಎಂದು ಒಪ್ಪಿಕೊಂಡರೆ ಶೂದ್ರರಾಗಿ ಉಳಿಯುತ್ತೇವೆ.ಧರ್ಮ ಆಗಬೇಕು ಎಂಬ ಕೂಗು ಇಂದು ನೆನ್ನೆಯದಲ್ಲ, ನೂರಾರು ವರ್ಷಗಳಿಂದ ಇದೆ. ನಮ್ಮ ಧರ್ಮ 12ನೇ ಶತಮಾನದಲ್ಲಿ ಸ್ವತಂತ್ರ ಧರ್ಮವಾಗಿ ಸ್ಥಾಪನೆಗೊಂಡಿರುವುದವನ್ನು ನಾವೆಲ್ಲರೂ ಅರ್ಥೈಸಿಕೊಂಡು ಇದಕ್ಕೆ ಸಂವಿಧಾನ ಮಾನ್ಯತೆ ಬೇಕು ಎಂದ ಕೇಳುವುದು ನಮ್ಮೆಲ್ಲರ ಹಕ್ಕು ಎಂದರು. ಧರ್ಮಾಭಿಮಾನ ಬೆಳೆಯಬೇಕು. ಆದರೆ ಲಿಂಗಾಯತರು ಆಚರಣೆಯನ್ನು ಪಾಲಿಸದೆ ಇರುವುದು ಇದಕ್ಕೆ ಹಿನ್ನಡೆಯಾಗುತ್ತಿದೆ.
ನಮ್ಮ ಧರ್ಮ ಬೋಧನೆಗೆ ಸೀಮಿತವಾದುದ್ದಲ್ಲ ಆಚರಣೆ ಮಾಡುವ ಧರ್ಮ, ತಮ್ಮ ಹಕ್ಕುಗಳನ್ನು ಪಡೆಯಲು ಎಲ್ಲರೂ ಹೋರಾಡಬೇಕು, ಕಾಯಕ ನಿಷ್ಟರಾಗಿರಬೇಕು ಎಂದರು.ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಕಾಳನಹುಂಡಿ ವಿರೂಪಾಕ್ಷ ಮಾತನಾಡಿ, ಲಿಂಗಾಯತರು ಹಿಂದೂಗಳು ಅಲ್ಲ, ವೀರಶೈವರು ಅಲ್ಲ ಎಂಬುದನು ಮನಗಂಡು ನಮ್ಮ ಧರ್ಮ ಲಿಂಗಾಯತ ಧರ್ಮ, 12ನೇ ಶತಮಾನದಲ್ಲಿ ಬಸವಣ್ಣನವರು ವೈದಿಕ ಆಚರಣೆಗಳು, ವೇದ ಆಗಮನಗಳನ್ನು ಧಿಕ್ಕರಿಸಿ ಸ್ಥಾಪಿಸಿದ ಶ್ರೇಷ್ಠ ಧರ್ಮ. ನಮ್ಮ ಧರ್ಮಗುರು ಬಸವಣ್ಣ, ನಮ್ಮ ಧರ್ಮಗ್ರಂಥ ವಚನ ಸಾಹಿತ್ಯ. ನಾವು ಲಿಂಗಾಯತರು ಎಂದು ಎದೆ ತಟ್ಟಿ ಹೇಳುವ ಶಕ್ತಿಯನ್ನು ಬೆಳೆಸಿಕೊಳ್ಳಿ. ನೀವು ಯಾವುದೇ ರಾಜಕೀಯ ಪಕ್ಷದಲ್ಲಾದರು ಇರಿ, ಅಲ್ಲಿ ನೀವು ಬೆಳೆಯಿರಿ ಆದರೆ ಧರ್ಮದ ವಿಚಾರ ಬಂದಾಗ ಒಂದಾಗಿ ನಿಲ್ಲಿ. ಮಠದೊಳಗೆ ರಾಜಕೀಯ ತರಬೇಡಿ. ಲಿಂಗಾಯತ ಧರ್ಮ ಸ್ವತಂತ್ರ ಮಾನ್ಯತೆ ಪಡೆಯುವುದು ನಮ್ಮ ಸಂವಿಧಾನ ಬದ್ದ ಹಕ್ಕು ಎಂದರು. ಮಠಾಧೀಶರಲ್ಲಿ ಒಗ್ಗಟ್ಟಿನ ಸಮಸ್ಯೆಮುಡಿಗುಂಡ ವಿರಕ್ತ ಮಠ ಹಾಗೂ ಮೈಸೂರು ಅರಮನೆ ಗವಿ ಮಠದ ಶ್ರೀ ಶ್ರೀಕಂಠಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ ಲಿಂಗಾಯತರು ಪ್ರತಿನಿಧಿಸುವ ಜನ ಪ್ರತಿನಿಧಿಗಳಾರು ಲಿಂಗಾಯತ ಎಂದು ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲದಿರುವುದು ದುರಾದೃಷ್ಟಕರ ಸಂಗತಿ. ಮಠಾಧೀಶರಲ್ಲಿಯು ಒಗ್ಗಟ್ಟು ಇಲ್ಲದಿರುವುದು ಸಮಸ್ಯೆಯಾಗಿದೆ. ಸತ್ಯವನ್ನು ಹೇಳುವಂತಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಪ್ರಕಾರ ಅವಕಾಶಗಳನ್ನು ಕೊಡಿಸಬೇಕಾದವರು ಧ್ವನಿಎತ್ತುತ್ತಿಲ್ಲ. ಯಾರು ಲಿಂಗಾಯತ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು ಅವರು ಅಧಿಕಾರ ಅನುಭವಿಸಿಕೊಂಡು ಆರಾಮವಾಗಿ ಕುಳಿತಿದ್ದಾರೆ. ಯುವ ಪೀಳಿಗೆ ದುಶ್ಚಟಗಳಿಂದ ದೂರ ಉಳಿದು ಧರ್ಮ ಪಾಲನೆ ಮಾಡಬೇಕು. ನಮ್ಮ ಮುಂದಿನ ಪೀಳಿಗೆಯ ಉಳುವಿಗಾಗಿ ಸ್ವತಂತ್ರ ಧರ್ಮ ಮಾನ್ಯತೆ ಪಡೆಯುವುದು ಅವಶ್ಯಕ ಎಂದರು. ಮಹಾಸಭಾ ಜಿಲ್ಲಾ ಕೋಶಾಧ್ಯಕ್ಷ ಶಿವಪ್ರಸಾದ್, ಮುಮ್ಮಡಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕುಂತೂರು ಮಠದ ಶಿವಪ್ರಭುಸ್ವಾಮೀಜಿ, ಚಿಕ್ಕಂದ ವಾಡಿ ಮಠದ ಬಾಲ ಷಡಕ್ಷರ ಸ್ವಾಮೀಜಿ, ಚಿಲಕವಾಡಿ ಮಠದ ಇಮ್ಮಡಿ ಗುರುಲಿಂಗ ಸ್ವಾಮೀಜಿ, ಹೊಂಡರಬಾಳು ಮಠಾಧ್ಯಕ್ಷ ಪ್ರಸನ್ನ ಮಲ್ಲಿಕಾರ್ಜುನ ಸ್ವಾಮಿಗಳು, ತೇರಂಬಳ್ಳಿ ಮಠದ ಲಿಂಗರಾಜ ಸ್ವಾಮೀಜಿ, ತಾಲೂಕು ಘಟಕದ ಅಧ್ಯಕ್ಷ ಲೋಕೇಶ್(ಬಿಂದು), ಜಿಲ್ಲಾ ಉಪಾಧ್ಯಕ್ಷ ಸುಂದರಪ್ಪ, ತೇರಂಬಳ್ಳಿ ಗ್ರಾಮದ ಗೌಡರ ಶಿವಕುಮಾರಸ್ವಾಮಿ, ಮಹದೇವಪ್ರಭು, ಗುರುಮಲ್ಲೇಶ್ವರ ಬಳಗದ ಕುಮಾರ್, ಲೋಕೇಶ್, ಗ್ರಾಪಂ ಸದಸ್ಯ ರವಿಕುಮಾರ್ ಇನ್ನಿತರರಿದ್ದರು.