ಧ.ಗ್ರಾ.ಯೋಜನೆ, ಜಿಲ್ಲಾ ಜನ ಜಾಗೃತಿ ವೇದಿಕೆಯಿಂದ ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮನೆಯಲ್ಲಿ ಹಿರಿಯರು ದುಶ್ಚಟ ಕಲಿತರೆ ಮಕ್ಕಳು, ಕುಟುಂಭದ ಸದಸ್ಯರು ಸಹ ಅದನ್ನೇ ಮುಂದುವರಿಸುತ್ತಾರೆ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆಯ ಉಪಾಧ್ಯಕ್ಷ ಎಚ್.ಎಸ್.ಬಾಲಕೃಷ್ಣ ಭಟ್ ತಿಳಿಸಿದರು.
ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಸ್ತಿಮಠದ ಕಾರ್ಯಕ್ಷೇತ್ರದ ವ್ಯಾಪ್ತಿಯ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಜನ ಜಾಗೃತಿ ವೇದಿಕೆ ಹಾಗೂ ಧ.ಗ್ರಾ.ಯೋಜನೆಯಿಂದ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಅನೇಕ ಶಾಲೆ ಗಳ ಮಕ್ಕಳು ರಜಾ ದಿನಗಳಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಆ ಸಂದರ್ಭದಲ್ಲಿ ಅಲ್ಲಿನ ಕೆಲಸಗಾರರ ದುರಭ್ಯಾಸವನ್ನು ಮಕ್ಕಳು ಕಲಿಯುತ್ತಾರೆ. ದ್ವಿತೀಯ ಪಿಯುಸಿ ಓದುತ್ತಿರುವ ಮಕ್ಕಳು ಗುಟ್ಕಾ, ವಿಮಲ್, ಮದ್ಯಪಾನ ಮಾಡುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಮಕ್ಕಳು ಬೇರೆ ನಗರಗಳಿಗೆ ಶಿಕ್ಷಣ ಪಡೆಯಲು ಹೋದಾಗ ಸಹ ದುರಭ್ಯಾಸಕ್ಕೆ ಬೀಳುವ ಸಂದರ್ಭವಿದೆ. ಈ ಬಗ್ಗೆ ಪೋಷಕರು ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.ದುಶ್ಚಟಕ್ಕೆ ಬೀಳದೆ ಉತ್ತಮ ನಾಗರಿಕರಾಗಿ ಬದುಕಿದರೆ ಸಮಾಜದಲ್ಲಿ ಅವರಿಗೆ ಗೌರವ ಸಿಗಲಿದೆ. ದೇಶದಲ್ಲಿ, ರಾಜ್ಯದಲ್ಲಿ ಅನೇಕರು ಜೀವನ ದಲ್ಲಿ ಸಾಧನೆ ಮಾಡಿದ್ದಾರೆ. ದೇಶಕ್ಕೆ ಗೌರವ, ಕೀರ್ತಿ ತಂದು ಕೊಟ್ಟ ಅನೇಕ ಮಹನೀಯರಿದ್ದಾರೆ. ಅಂತಹ ಗೌರವ ವ್ಯಕ್ತಿಗಳನ್ನು ಆದರ್ಶ ವಾಗಿಟ್ಟುಕೊಂಡು ಬದುಕಬೇಕು ಎಂದು ಸಲಹೆ ನೀಡಿದರು.
ಅತಿಥಿಯಾಗಿದ್ದ ಶೃಂಗೇರಿ ವಲಯ ಅರಣ್ಯಾಧಿಕಾರಿ ಮಧುಕರ ಮಾತನಾಡಿ, ಮಕ್ಕಳು ಬಾಲ್ಯದಿಂದಲೇ ಗುರು ಹಿರಿಯರಿಗೆ ಗೌರವ ನೀಡುವುದನ್ನು ಕಲಿಯಬೇಕು. ಉತ್ತಮ ಸಂಸ್ಕಾರವಂತರಾಗಿ ಬಾಳಬೇಕು. ಶಿಸ್ತನ್ನು ರೂಡಿಸಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ಶಾಲೆಗಳಲ್ಲಿ ವನಮಹೋತ್ಸವ ಮಾಡುತ್ತಿದ್ದೆವು. ಈಗ ದುಶ್ಚಟಗಳಿಂದ ದೂರವಿರಿ ಎಂದು ಉಪನ್ಯಾಸ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರು.ಧ.ಗ್ರಾ.ಯೋಜನೆ ಆಂತರಿಕ ಲೆಕ್ಕ ಪರಿಶೋಧಕ ಪ್ರದೀಪ್ ಮಾತನಾಡಿದರು. ಸಭೆಯಲ್ಲಿ ಎನ್.ಆರ್.ಪುರ ವಲಯ ಮೇಲ್ವಿಚಾರಕ ಸಿದ್ದಲಿಂಗಪ್ಪ, ಸೇವಾ ಪ್ರತಿನಿಧಿಗಳಾದ ವೀಣಾ, ವಿಮಲ, ಶಾಲೆಯ ಶಿಕ್ಷಕರಾದ ಸರಳ, ರೇಣುಕ ಇದ್ದರು.