ಭದ್ರಾವತಿ: ಮಕ್ಕಳು ಚಿತ್ರಕಲೆಯ ಮೂಲಕ ತಮ್ಮ ಪ್ರತಿಭೆಯನ್ನು ಹೊರಹಾಕುವ ಮೂಲಕ ಭವಿಷ್ಯದಲ್ಲಿ ಉತ್ತಮ ಕಲಾಕಾರರಾಗಿ ರೂಪುಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಹಾಗೂ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಸಿದ್ದಬಸಪ್ಪ ಹೇಳಿದರು.
ಮಕ್ಕಳು ಅರಣ್ಯ ಮತ್ತು ವನ್ಯಜೀವಿಗಳ ಮೇಲೆ ಹೊಂದಿರುವ ಭಾವನೆಗಳನ್ನು ವ್ಯಕ್ತಪಡಿಸಲು ಈ ಸ್ಪರ್ಧೆ ಸಹಕಾರಿಯಾಗಿದೆ. ಅಲ್ಲದೆ ತಮ್ಮ ಪ್ರತಿಭೆಯನ್ನು ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಅನಾವರಣಗೊಳಿಸಬಹುದಾಗಿದೆ. ಇಂತಹ ಕಾರ್ಯಕ್ರಮ ನಮ್ಮ ವಿದ್ಯಾಸಂಸ್ಥೆಯಲ್ಲಿ ಆಯೋಜನೆ ಮಾಡಿರುವುದು ತುಂಬಾ ಸಂತಸ ತಂದಿದೆ ಎಂದರು.
ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್ ಮಾತನಾಡಿ, ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜನೆ ಮಾಡಿರುವುದು ತುಂಬಾ ಉತ್ತಮ ಬೆಳವಣಿಗೆಯಾಗಿದೆ ಎಂದರು.ಪತ್ರಿಕಾ ಸಂಪಾದಕ ಸುಭಾಷ್‌ರಾವ್ ಸಿಂಧ್ಯಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಆಯೋಜಿಸಿರುವ ಇಂತಹ ಕಾರ್ಯಕ್ರಮಗಳಿಗೆ ಸಮಾಜದ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದರು.
ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ.ರಾಕೇಶ್, ಸಮಾಜ ಸೇವಕಿ ಸೌಮ್ಯ ವೈ.ನಟರಾಜ್ ಹಾಜರಿದ್ದರು.ತೀರ್ಪುಗಾರರಾಗಿ ಹಿರಿಯ ಚಿತ್ರಕಲಾ ಶಿಕ್ಷಕರಾದ ಡಿ.ಆರ್ ಗಣೇಶ್, ಲಿಮ್ಕಾ ದಾಖಲೆ ಪ್ರಶಸ್ತಿ ಪುರಸ್ಕೃತ ಭದ್ರಾವತಿ ಗುರು ಕಾರ್ಯನಿರ್ವಹಿಸಿದರು. ಜಾನಪದ ಕಲಾವಿದ ತಮಟೆ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು. ಜಾನಪದ ಕಲಾವಿದ ದಿವಾಕರ್ ಪ್ರಾರ್ಥಿಸಿದರು. ಪತ್ರಕರ್ತ ಅನಂತಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ತಾಲೂಕಿನ ೮,೯ ಮತ್ತು ೧೦ನೇ ತರಗತಿಯ ಶ್ರೀ ಸತ್ಯಸಾಯಿ ಬಾಬಾ ಸಮಗ್ರ ಶಿಕ್ಷಣ ಸಂಸ್ಥೆ, ವಿಶ್ವೇಶ್ವರಾಯ ವಿದ್ಯಾಸಂಸ್ಥೆ, ಶ್ರೀ ಕನಕ ವಿದ್ಯಾಸಂಸ್ಥೆ, ತರಂಗ ಕಿವುಡು ಮಕ್ಕಳ ಪ್ರೌಢಶಾಲೆ, ಕಾಗದನಗರ ಪೇಪರ್‌ಟೌನ್ ಆಂಗ್ಲ ಪ್ರೌಢಶಾಲೆ, ಜವಾಹರಲಾಲ್ ನೆಹರು ಪ್ರೌಢಶಾಲೆ ಒಟ್ಟು ೪೫ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆ, ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಸಮಾಜ ಸೇವಕ ವೈ. ನಟರಾಜ್, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್.ರವಿಕುಮಾರ್, ಜಾನಪದ ಕಲಾವಿದ ತಮಟೆ ಜಗದೀಶ್ ಇತರರು ಸಹಕರಿಸಿದರು.
ಪ್ರಶಸ್ತಿ ವಿಜೇತರು:ಪೇಪರ್‌ಟೌನ್ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿಗಳಾದ ಉಲ್ಲಾಸ್ ಪ್ರಥಮ, ವಿಶ್ವಾಸ್ ದ್ವಿತೀಯ ಹಾಗೂ ಹರ್ಷಿತ್ ಯೋಹಾನ್ ಸಮಾಧಾನಕರ ಬಹುಮಾನ ಮತ್ತು ವಿಶ್ವೇಶ್ವರಾಯ ಕನ್ನಡ ಹಿರಿಯ ಪ್ರೌಢಶಾಲೆ ವಿದ್ಯಾರ್ಥಿನಿ ಸೈಯದಾ ಶಾಫಿಯಾ ತೃತೀಯ, ಕನಕ ವಿದ್ಯಾಸಂಸ್ಥೆ ವಿದ್ಯಾರ್ಥಿ ಸಯ್ಯದ್ ಉಜೈರ್ ಸಮಾಧಾನಕರ ಬಹುಮಾನ ಪಡೆದರು.