ಕನ್ನಡಪ್ರಭ ವಾರ್ತೆ ತುಮಕೂರುಶಿಕ್ಷಣ ಭೀಷ್ಮ ದಿವಂಗತ ಡಾ. ಎಚ್.ಎಂ. ಗಂಗಾಧರಯ್ಯನವರ 37ನೇ ವರ್ಷದ ಸ್ಮರಣಾರ್ಥ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಆಯೋಜಿಸಿದ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಹಾಸನ ಮಲೆನಾಡು ಕಾಲೇಜಿನ ಪ್ರಾಧ್ಯಾಪಕರು ಹಾಗೂ ಚಿತ್ರಕಲಾವಿದ ಡಾ. ಸುರೇಶ್ ಬಾಬು ಅವರು ಸ್ಥಳದಲ್ಲಿಯೇ ದಿವಂಗತ ಸಾಲು ಮರದ ತಿಮ್ಮಕ್ಕ ಅವರ ಚಿತ್ರ ಬಿಡಿಸಿ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಭಾಷೆ ಭಾವನೆಗಳನ್ನು ವ್ಯಕ್ತಪಡಿಸುವಂತಹ ಸಾಧನ ಕಲೆಯಾಗಿರುತ್ತದೆ. ಪದಗಳಿಂದ ವರ್ಣಿಸಲು ಸಾಧ್ಯವಾಗದ್ದನ್ನು ಚಿತ್ರಕಲೆ ವರ್ಣಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಯಾರಿಗೂ ಸುಂದರ ಕ್ಷಣಗಳನ್ನು ಆಸ್ವಾದಿಸುವಂತಹ ತಾಳ್ಮೆಯಿಲ್ಲ, ಇಂತಹ ಧಾವಂತದ ಜೀವನದಲ್ಲಿ ಕಲೆ ಎಂಬುದು ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಮಕ್ಕಳಲ್ಲಿ ಕಲ್ಪನೆಯ ಶಕ್ತಿ ಹೆಚ್ಚಾಗಿರುತ್ತದೆ. ಆದರೆ ಅದನ್ನು ಚಿತ್ರಿಸುವ ಸಾಮರ್ಥ್ಯ ಹೆಚ್ಚಾಗಿ ಇರುವುದಿಲ್ಲ ಆದರೆ ಯುಜಿ (ಪದವಿ ವಿದ್ಯಾರ್ಥಿಗಳು) ಮಕ್ಕಳಲ್ಲಿ ಕಲ್ಪನೆಗೆ ಉಸಿರುಕೊಡುವ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಹಾಗಾಗಿ ಕಲ್ಪನೆಯ ಗೂಡಿನಿಂದ ಉಸಿರು ಕೊಡುವ ಗೂಡಿನ ತನಕ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಇಂತಹ ಅವಕಾಶವನ್ನು ಎಲ್ಲಾ ಮಕ್ಕಳು ಬಳಸಿಕೊಳ್ಳಬೇಕು ಎಂದು ಹೇಳಿದರು. ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ನಂಜುಡಪ್ಪ ಮಾತನಾಡಿ, ಚಿತ್ರಕಲೆ ಎಂಬುದು ನಾಗರೀಕ ಮಾನವನ ಜೊತೆಗೆ ಅವಿನಾಭಾವವಾಗಿ ಬಂದ ಕಲೆಯಾಗಿದೆ. ಈ ಚಿತ್ರಕಲೆ ಲಲಿತ ಕಲೆಗಳಲ್ಲಿ ಒಂದಾಗಿದೆ, ಮನುಷ್ಯ ಭಾಷೆಯನ್ನು ಕಲಿಯುವುದಕ್ಕೂ ಮೊದಲು ಚಿತ್ರಗಳ ಮೂಲಕವೇ ಹೆಚ್ಚಾಗಿ ಸಂವಹನವನ್ನು ನಡೆಸಿ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಭಾಷೆಯಲ್ಲಿ ಒಂದು ರೀತಿ ಸಂವಹನ ಸಾಧ್ಯವಾದರೆ, ಚಿತ್ರಕಲೆಯ ಮೂಲಕ ಹಲವು ರೀತಿಯಲ್ಲಿ ಸಂವಹನ ಸಾಧ್ಯವಾಗುತ್ತದೆ. ಚಿತ್ರಕಲೆ ಒಂದು ಶಾಶ್ವತ ಸಂವಹನ ಕಲೆಯಾಗಿದೆ ಇಂತಹ ಒಂದು ಸ್ಪರ್ಧೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕಲ್ಪನೆಯ ಚಿತ್ರಗಳನ್ನು ಬಿಡಿಸಿ, ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಸ್. ರವಿಪ್ರಕಾಶ ಅವರು, ಚಿತ್ರಕಲೆ ಮಕ್ಕಳ ಬುದ್ದಿವಿಕಸನಕ್ಕೆ ಪೂರಕವಾಗಿದೆ. ಚಿತ್ರ ಬಿಡಿಸುವ ಮೂಲಕ ಮನೋಲ್ಲಾಸದಲ್ಲಿ ತೊಡಗುವ ಮಕ್ಕಳು ಹೆಚ್ಚು ಕ್ರಿಯಾಶೀಲರಾಗುತ್ತಾರೆ ಎಂದರು.