ವಿಜ್ಞಾನವು ಜನಹಿತಕ್ಕೆ ಬಳಕೆಯಾಗಬೇಕೆ ವಿನಃ ಮಾನವ ಕುಲದ ವಿನಾಶಕ್ಕಲ್ಲ. ವಿಜ್ಞಾನದ ಸಂಶೋಧನೆಗಳು ಜನಸಾಮಾನ್ಯರಿಗೂ ತಲುಪುವಂತಾಗಬೇಕು.

ಧಾರವಾಡ:

ಪ್ರೊ. ಎಸ್.ಪಿ. ಹಿರೇಮಠ ಹೆಸರಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಯುವ ವಿಜ್ಞಾನಿ ಪ್ರಶಸ್ತಿಯನ್ನು ಕುವೆಂಪು ವಿಶ್ವವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ವಿದ್ಯಾರ್ಥಿ ಯೋಗಾನಂದ ಕೆ.ಕೆ. ಸ್ವೀಕರಿಸಿದರು.

ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದರೆ ಆತ್ಮವಿಶ್ವಾಸ, ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ಸಕಾರಾತ್ಮಕ ಚಿಂತನೆ ಅಗತ್ಯ ಎಂದರು.

ಪ್ರಶಸ್ತಿ ಪ್ರದಾನ ಮಾಡಿದ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ಡಿ. ಬೋಳಿಶೆಟ್ಟಿ, ವಿಜ್ಞಾನವು ಜನಹಿತಕ್ಕೆ ಬಳಕೆಯಾಗಬೇಕೆ ವಿನಃ ಮಾನವ ಕುಲದ ವಿನಾಶಕ್ಕಲ್ಲ. ವಿಜ್ಞಾನದ ಸಂಶೋಧನೆಗಳು ಜನಸಾಮಾನ್ಯರಿಗೂ ತಲುಪುವಂತಾಗಬೇಕು. ವಿಜ್ಞಾನ ವಿಷಯ ಬೋಧನೆ ಕೇವಲ ಪಠ್ಯ ಪುಸ್ತಕಕ್ಕೆ ಸೀಮಿತವಾಗಬಾರದು. ಬೋಧನೆಯ ಪ್ರಾಯೋಗಿಕ ಜ್ಞಾನ ನೀಡುವಂತಿರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ಮಹಾದೇವಪ್ಪ ಕರಿದುರಗನವರ, ಪ್ರೊ. ಎಸ್.ಪಿ. ಹಿರೇಮಠ ಸರ್ವಶ್ರೇಷ್ಠ ಉತ್ಕೃಷ್ಟ ಗುಣಮಟ್ಟದ ವಿಜ್ಞಾನಿ, ಸಂಶೋಧಕರು ಹಾಗೂ ಶಿಕ್ಷಣ ತಜ್ಞರು. ಯುಎಸ್‌ಎ ಹಾಗೂ ಯುಕೆಗಳಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಅನುಪಮ ಸೇವೆ ಸಲ್ಲಿಸಿದ ಕೀರ್ತಿ ಅವರದು. ಶಿಸ್ತು, ಸಮಯ ಪ್ರಜ್ಞೆ, ಕಿರಿಯರನ್ನು ಪ್ರೋತ್ಸಾಹಿಸುವ, ಹಿರಿಯರನ್ನು ಗೌರವಿಸುವ ಅವರ ಗುಣ ಮೆಚ್ಚುವಂತಹುದು. ಗುಲ್ಬರ್ಗಾ ವಿಶ್ವವಿದ್ಯಾಲಯ ಹಾಗೂ ಕುವೆಂಪು ವಿಶ್ವವಿದ್ಯಾಲಯಗಳನ್ನು ಉತ್ಕೃಷ್ಟ ಮಟ್ಟಕ್ಕೆ ಬೆಳೆಸಿದವರು. ಕುವೆಂಪು ವಿವಿ ತನ್ನ ವಿವಿಯ ಸಭಾಗೃಹಕ್ಕೆ ಅವರ ಹೆಸರನ್ನಿಟ್ಟು ಸ್ಮರಿಸಿದೆ. ವಿದ್ಯಾವರ್ಧಕ ಸಂಘದಲ್ಲಿಯೂ ಅವರ ಭಾವಚಿತ್ರ ಅನಾವರಣ ಮಾಡಲು ಸಲಹೆ ನೀಡಿದರು.

ದತ್ತಿದಾನಿ ಡಾ. ಉಜ್ವಲಾ ಹಿರೇಮಠ ಮಾತನಾಡಿದರು. ವೀರಣ್ಣ ಒಡ್ಡೀನ, ಶಿವಾನಂದ ಭಾವಿಕಟ್ಟಿ, ಪ್ರೊ. ಸಿ.ಆರ್. ಯರವಿನತೆಲಿಮಠ, ಸುರೇಶ ಹಾಲಭಾವಿ, ಪಾರ್ವತಿ ಹಾಲಭಾವಿ, ಲೀಲಾ ಕಲಕೋಟಿ, ಡಾ. ಪ್ರಭಾಕರ ನೀರಲಗಿ ಇದ್ದರು.