ಕನ್ನಡಪ್ರಭ ವಾರ್ತೆ ಬೆಳಗಾವಿ

ಮಧ್ಯಪ್ರಾಚ್ಯ ದೇಶದಲ್ಲಿ ನಡೆಯುತ್ತಿರುವ ಯುದ್ಧ ಇನ್ನೂ ನಿಲ್ಲುವಂತೆ ಕಾಣುತ್ತಿಲ್ಲ. ಆದರೆ, ಯುದ್ಧದ ಪರಿಣಾಮ ಮಾತ್ರ ನಮ್ಮ ಭಾಗಕ್ಕೂ ತಟ್ಟಿದೆ. ಅಡುಗೆ ಅನಿಲ ಸಿಲಿಂಡರ್ ಕೊರತೆಯಿಂದ ಗ್ರಾಮೀಣ ಭಾಗದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಶೇಷವಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರ, ರಾಯಬಾಗ ಸೇರಿದಂತೆ ಹಲವು ಗ್ರಾಮಗಳಲ್ಲಿ ಗ್ಯಾಸ್ ಸಿಲಿಂಡರ್ ಸಿಗದೇ ಜನರು ಏಜೆನ್ಸಿಗಳ ಮುಂದೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮೂಲಕ ಗ್ಯಾಸ್‌ ಟ್ರಬಲ್‌ ಮತ್ತಷ್ಟು ಹೆಚ್ಚಳವಾಗಿದೆ. ಅಡುಗೆಗೆ ಸೌದೆಯನ್ನು ಬಳಸುವ ಪರಿಸ್ಥಿತಿಯಲ್ಲಿ ಜನರು ಕೂಡ ಇಲ್ಲದ್ದರಿಂದ ಮುಂದೇನು ಎಂಬ ಪ್ರಶ್ನೆ ಎಲ್ಲರನ್ನು ಕಾಡ ತೊಡಗಿದೆ.

ಬಹುತೇಕ ಗ್ಯಾಸ್ ಏಜೆನ್ಸಿಗಳ ಮುಂದೆ ನೋ ಸ್ಟಾಕ್ ಎಂಬ ಫಲಕಗಳು ಕಾಣಿಸುತ್ತಿವೆ. ಸಿಲಿಂಡರ್ ಕೇಳಿ ಬರುವ ಗ್ರಾಹಕರಿಗೆ ಎರಡು ದಿನಗಳ ನಂತರ ಬನ್ನಿ ಎಂದು ಹೇಳಲಾಗುತ್ತಿದೆ. ಕೆಲವರಿಗೆ ಮನೆಯಲ್ಲಿ ಮದುವೆ, ಸಮಾರಂಭ ಹಾಗೂ ಪೂಜೆ ಕಾರ್ಯಕ್ರಮಗಳಿದ್ದರೂ ತುರ್ತಾಗಿ ಸಿಲಿಂಡರ್ ಸಿಗದೇ ನಿರಾಶೆಯಿಂದ ಹಿಂದಿರುಗುತ್ತಿರುವ ಸ್ಥಿತಿ ನಿರ್ಮಾಣವಾಗಿದೆ.

ಕೆಲವೆಡೆ ಗ್ರಾಹಕರು ಖಾಲಿ ಸಿಲಿಂಡರ್ ಹಿಡಿದು ಏಜೆನ್ಸಿಗಳ ಕಚೇರಿ ಮುಂದೆ ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುತ್ತಿರುವ ದೃಶ್ಯಗಳು ಕೂಡ ಕಂಡುಬಂದಿವೆ. ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಲು ಪ್ರಯತ್ನಿಸಿದರೂ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗ್ರಾಹಕರ ಸೇವಾ ಸಂಖ್ಯೆಗೆ ಕರೆ ಮಾಡಿದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.

ಬೆಳಗಾವಿ ತಾಲೂಕಿನ ಸಾಂಬ್ರಾ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಜನರು ತಮ್ಮ ದೈನಂದಿನ ಕೆಲಸಗಳನ್ನು ಬಿಟ್ಟು ಸಿಲಿಂಡರ್ ಪಡೆಯಲು ಏಜೆನ್ಸಿಗಳ ಬಳಿ ಬರುತ್ತಿದ್ದಾರೆ. ಆದರೆ ಸಮರ್ಪಕ ಮಾಹಿತಿ ನೀಡದೇ ಗ್ರಾಹಕರನ್ನು ಬಿಸಿಲಿನಲ್ಲಿಯೇ ಕಾಯಿಸುತ್ತಿರುವುದು ಬಿಸಿ ಮತ್ತಷ್ಟು ಹೆಚ್ಚಿದೆ.


ಕಾಳಸಂತೆಯಲ್ಲಿ ಸಿಲಿಂಡರ್‌ ಸಿಗದಂತೆ ಖಾಕಿ ಎಚ್ಚರ: ಸಿಲಿಂಡರ್ ಕೊರತೆ ಹೆಚ್ಚಾದಂತೆ ಕೆಲವೆಡೆ ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟವಾಗುವ ಸಾಧ್ಯತೆಯೂ ಇದೆ. ಅಲ್ಲದೆ, ಮಾರಾಟದ ಶಂಕೆಯೂ ವ್ಯಕ್ತವಾಗುತ್ತಿದೆ. ಸಾಮಾನ್ಯ ದರಕ್ಕಿಂತ ಎರಡು ಮೂರು ಪಟ್ಟು ಹೆಚ್ಚು ಹಣ ನೀಡುವವರಿಗೆ ಮಾತ್ರ ಸಿಲಿಂಡರ್ ನೀಡಲಾಗುತ್ತಿದೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ. ಬುಕ್ಕಿಂಗ್ ಪ್ರಕ್ರಿಯೆಯನ್ನು ತಡೆಹಿಡಿದು ಕೆಲವು ಏಜೆನ್ಸಿಗಳು ಗ್ರಾಹಕರಿಗೆ ಅನ್ಯಾಯ ಮಾಡುತ್ತಿವೆ ಎಂಬ ದೂರುಗಳು ಸಹ ವ್ಯಕ್ತವಾಗಿವೆ.

ನಗರ ಪ್ರದೇಶಗಳಲ್ಲಿ ಗ್ಯಾಸ್ ಪೂರೈಕೆ ಸಾಮಾನ್ಯವಾಗಿ ನಡೆಯುತ್ತಿರುವುದಾಗಿ ತಿಳಿದುಬಂದಿದ್ದರೂ, ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ತೀವ್ರವಾಗಿದೆ. ಬುಕ್ಕಿಂಗ್ ಆಗದೇ ಇರುವುದರಿಂದ ಗ್ರಾಹಕರು ಖಾಲಿ ಸಿಲಿಂಡರ್ ಹಿಡಿದು ಗ್ಯಾಸ್ ವಾಹನ ಬರುವ ನಿರೀಕ್ಷೆಯಲ್ಲಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಿಯಮದ ಪ್ರಕಾರ ನಗರ ಪ್ರದೇಶದ ಗ್ರಾಹಕರು 25 ದಿನಗಳ ನಂತರ ಹಾಗೂ ಗ್ರಾಮೀಣ ಪ್ರದೇಶದ ಗ್ರಾಹಕರು 45 ದಿನಗಳ ನಂತರವೇ ಮತ್ತೆ ಸಿಲಿಂಡರ್ ಬುಕ್ಕಿಂಗ್ ಮಾಡಲು ಅವಕಾಶವಿದೆ. ಈ ಅವಧಿಯಲ್ಲಿ ಸಿಲಿಂಡರ್ ಮುಗಿದರೆ ಪರ್ಯಾಯ ವ್ಯವಸ್ಥೆ ಇಲ್ಲದೆ ಜನರು ಸಂಕಷ್ಟ ಅನುಭವಿಸುವಂತಾಗಿದೆ.

ಸಿಲಿಂಡರ್ ಪೂರೈಕೆಯನ್ನು ತಕ್ಷಣ ಸುಧಾರಿಸಬೇಕು. ಬುಕ್ಕಿಂಗ್ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು. ಕಾಳಸಂತೆ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಸೌದೆಗೆ ಮೊರೆ ಹೋದ ಮಹಿಳೆಯರು: ಗ್ಯಾಸ್ ಸಿಲಿಂಡರ್ ಕೊರತೆಯಿಂದ ಗ್ರಾಮೀಣ ಭಾಗದ ಜನರು ಮತ್ತೆ ಹಳೆಯ ಕಾಲದ ಇಂಧನದತ್ತ ಮುಖ ಮಾಡಿದ್ದಾರೆ. ಅನಿಲ ಪೂರೈಕೆ ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಅಡುಗೆ ಗ್ಯಾಸ್ ಸಿಗದೇ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಮಹಿಳೆಯರು ಕಾಡು ಹಾಗೂ ಹೊಲಗಳ ಕಡೆಗೆ ತೆರಳಿ ಸೌದೆ ಸಂಗ್ರಹಿಸಿ ಮನೆಗೆ ತರುತ್ತಿರುವ ದೃಶ್ಯಗಳು ಕಾಣಿಸುತ್ತಿವೆ. ತಲೆಯ ಮೇಲೆ ಸೌದೆ ಹೊತ್ತು ಮನೆ ಕಡೆ ಸಾಗುತ್ತಿರುವ ಮಹಿಳೆಯರ ದೃಶ್ಯಗಳು ಮತ್ತೆ ಸಾಮಾನ್ಯವಾಗುತ್ತಿವೆ.

ಗ್ಯಾಸ್ ಸಿಲಿಂಡರ್ ದೊರೆಯದ ಕಾರಣ ಅನೇಕ ಮನೆಗಳಲ್ಲಿ ಅಡುಗೆ ಮಾಡಲು ಸೌದೆ ಒಲೆಗಳನ್ನೇ ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಹಿಳೆಯರಿಗೆ ಹೆಚ್ಚಿನ ಶ್ರಮ ಹಾಗೂ ಸಮಯ ವ್ಯಯವಾಗುತ್ತಿದೆ. ಗ್ಯಾಸ್ ಪೂರೈಕೆ ಶೀಘ್ರವಾಗಿ ಸಾಮಾನ್ಯ ಸ್ಥಿತಿಗೆ ಬರಬೇಕು. ಇಲ್ಲದಿದ್ದರೆ ಗ್ರಾಮೀಣ ಭಾಗದ ಜನರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.