ಡಾ.ಬಿ.ಆರ್.ಅಂಬೇಡ್ಕರ್ ರವರು ಭಾರತೀಯರ ಸ್ವಾಭಿಮಾನದ ಸಂಕೇತ ಹಾಗೂ ಯುವಜನರ ಸ್ಪೂರ್ತಿಯಸೆಲೆಯಾಗಿದ್ಧಾರೆಂದು ಅಡಿಷನಲ್ ಎಸ್.ಪಿ. ಗೋಪಾಲ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು ಡಾ.ಬಿ.ಆರ್.ಅಂಬೇಡ್ಕರ್ ರವರು ಭಾರತೀಯರ ಸ್ವಾಭಿಮಾನದ ಸಂಕೇತ ಹಾಗೂ ಯುವಜನರ ಸ್ಪೂರ್ತಿಯಸೆಲೆಯಾಗಿದ್ಧಾರೆಂದು ಅಡಿಷನಲ್ ಎಸ್.ಪಿ. ಗೋಪಾಲ್ ತಿಳಿಸಿದರು. ಅವರು ತುಮಕೂರು ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ, ವರ್ಗಗಳ ಸ್ನಾತಕೋತ್ತರ ವಿದ್ಯಾರ್ಥಿನಿಲಯದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರ ಪರಿನಿಬ್ಬಾಣ ದಿನ ಆಚರಣೆಯ ಸಮಾರಂಭ ಉದ್ಘಾಟಿಸಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ರವರು ಚಿಂತನೆಗಳು, ಬರಹಗಳು ಸರ್ವಕಾಲಿಕ ಮಹತ್ವಗಳಿಸಿವೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಪ್ರಾಧ್ಯಾಪಕ ಪ್ರೊ.ಮಹಾಲಿಂಗ ಮಾತನಾಡಿ, ಇತಿಹಾಸ ಅರಿಯದವರು ಇತಿಹಾಸ ನಿರ್ಮಿಸಲಾರರು ಎಂಬ ಡಾ.ಬಿ.ಆರ್.ಅಂಬೇಡ್ಕರ್ ರವರ ನಾಣ್ಣುಡಿಯಂತೆ ಅಂಬೇಡ್ಕರ್ ಅವರು ಎದುರಿಸಿದ ಶೋಷಣೆಗಳು, ಅವಮಾನಗಳಿಗೆ ದಿಟ್ಟ ಉತ್ತರವನ್ನು ನೀಡಿದ್ದಾರೆ. ಶೋಷಿತ ಸಮುದಾಯದ ಏಳ್ಗೆ ಶಿಕ್ಷಣದಿಂದ ಮಾತ್ರ ಸಾಧ್ಯವೆಂದು ಮನಗಂಡು ಎಲ್ಲರೂ ಉನ್ನತ ಶಿಕ್ಷಣ ಪಡೆಯುವ ಮೂಲಕ ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆಯಬೇಕೆಂದು ಬಯಸಿದ್ದರು. ವಿದ್ಯಾರ್ಥಿಗಳು ಸರ್ಕಾರ ನೀಡುತ್ತಿರುವ ಸವಲತ್ತು ಬಳಸಿ ಡಾ.ಬಿ.ಆರ್.ಅಂಬೇಡ್ಕರ್ ರವರ ರೀತಿಯಲ್ಲಿ ಮೇರು ಸಾಧನೆ ಮಾಡಬೇಕೆಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ, ಪ್ರೊ.ಬಿ.ಶೇಖರ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ರವರ ಪರಿನಿಬ್ಬಾಣ ದಿನವು ಎಲ್ಲರಿಗೂ ಸ್ಪೂರ್ತಿಯ ದಿನವಾಗಬೇಕು. ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ, ಕಾಪಾಡುವ ವಚನವನ್ನು ಯುವಜನರು ಸ್ವೀಕರೀಸಬೇಕು. ಡಾ.ಬಿ.ಆರ್.ಅಂಬೇಡ್ಕರ್ ರವರ ಋಣ ತೀರಿಸಬೇಕೆಂದರೆ ಅವರ ಆಶಯಗಳನ್ನು ಈಡೇರಿಸುವ ಹೊಣೆಯನ್ನು ಯುವಜನರು ಹೊರಬೇಕು. ಸಂವಿಧಾನದತ್ತ ಅವಕಾಶಗಳ ಬಳಸಿಕೊಂಡು, ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಮುಂದುವರಿಯಬೇಕೆಂದರು.

ಸಮಾರಂಭದಲ್ಲಿ ತುಮಕೂರು ವಿಶ್ವವಿದ್ಯಾನಿಲಯ ವಾಣಿಜ್ಯಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಟಿ.ಎನ್.ನರಸಿಂಹಮೂರ್ತಿ, ಬುಕ್ಕಾಪಟ್ಟಣ ಕಾಲೇಜಿನ ಅಧ್ಯಾಪಕ ವಿಜಯ್, ನಿಲಯಪಾಲಕರಾದ ಡಾ.ಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಕೇಂದ್ರದ ಡಾ.ಕೆ.ಎನ್.ಲಕ್ಷ್ಮೀರಂಗಯ್ಯ ಮಾತನಾಡಿದರು. ಪರಿನಿಬ್ಬಾಣ ದಿನದ ಪ್ರಯುಕ್ತ ದೀಪ ಬೆಳಗಿಸಿ, ಅಂಬೇಡ್ಕರ್ ಗೀತೆಗಳನ್ನು ಹಾಡಿದರು. ಸಂಶೋಧನಾರ್ಥಿ ನವೀನ್ ಕಾರ್ಯಕ್ರಮ ನಿರೂಪಿಸಿ, ಮಾರುತೀಶ್ ಸ್ವಾಗತಿಸಿ ವಂದಿಸಿದರು.