ನಾವು ಜೀವನದಲ್ಲಿ ಖುಷಿಪಡಲು ಕ್ರೀಡೆಗಳು ಸಹಕಾರಿಯಾಗಿದ್ದು, ಈ ಕ್ರೀಡಾಕೂಟದಿಂದ ಆರೋಗ್ಯ ಇಲಾಖೆ ಸಿಬ್ಬಂದಿಗೂ ಖುಷಿ ಸಿಗಲಿದೆ ಎಂದು ನೊಣವಿನಕೆರೆಯ ವಿರಕ್ತ ಮಠದ ಕಿರಿಯ ಶ್ರೀಗಳಾದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ನಾವು ಜೀವನದಲ್ಲಿ ಖುಷಿಪಡಲು ಕ್ರೀಡೆಗಳು ಸಹಕಾರಿಯಾಗಿದ್ದು, ಈ ಕ್ರೀಡಾಕೂಟದಿಂದ ಆರೋಗ್ಯ ಇಲಾಖೆ ಸಿಬ್ಬಂದಿಗೂ ಖುಷಿ ಸಿಗಲಿದೆ ಎಂದು ನೊಣವಿನಕೆರೆಯ ವಿರಕ್ತ ಮಠದ ಕಿರಿಯ ಶ್ರೀಗಳಾದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕು ಆರೋಗ್ಯ ಇಲಾಖೆ ಆಶ್ರಯದಲ್ಲಿ ತಾಲೂಕಿನ ಆರೋಗ್ಯ ಇಲಾಖಾ ಮಹಿಳಾ ಸಿಬ್ಬಂದಿಗೆ ಏರ್ಪಡಿಸಿದ್ದ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ನಾವೆಲ್ಲಾ ಇಂದು ಆರೋಗ್ಯವಂತರಾಗಿರಲು ಕಾರಣಕರ್ತರಾಗಿರುವ ಇಲಾಖಾ ಸಿಬ್ಬಂದಿ ಕಾರಣ. ಅವರು ಬಹಳ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಅವರಿಗೂ ಮಾನಸಿಕ ನೆಮ್ಮದಿ ಅತ್ಯಗತ್ಯ. ತಮ್ಮ ಒತ್ತಡದ ಪ್ರಪಂಚದಿಂದ ಹೊರಬಂದು ಮಾನಸಿಕ ಮತ್ತು ದೈಹಿಕ ಕಸರತ್ತಿಗೆ ಅವಕಾಶ ನೀಡಿದರೆ ಅವರೂ ಸಹ ನೆಮ್ಮದಿಯಿಂದ ಜೀವನ ಸಾಗಿಸುತ್ತಾರೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಚಂದ್ರಶೇಖರ್ ಮಾತನಾಡಿ, ಮಹಿಳಾ ಸಿಬ್ಬಂದಿಗೆ ಕ್ರೀಡಾಕೂಟ ಏರ್ಪಡಿಸಿರುವುದು ಶ್ಲಾಘನೀಯ. ಆರೋಗ್ಯ ಇಲಾಖಾ ಸಿಬ್ಬಂದಿಗೂ ಮಾನಸಿಕ ನೆಮ್ಮದಿಬೇಕು. ಸಾರ್ವಜನಿಕರೊಂದಿಗೆ ಬಹಳ ಶಾಂತಿಯುತವಾಗಿ ವರ್ತಿಸಬೇಕಾದರೆ, ಮಾನಸಿಕವಾಗಿ ನಾವು ನೆಮ್ಮದಿಯಾಗಿದ್ದರಷ್ಠೇ ಇದು ಸಾಧ್ಯ ಎಂದರು.

ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಮೋಹನ್ ಮಾತನಾಡಿ ಆರೋಗ್ಯ ಇಲಾಖಾ ಸಿಬ್ಬಂದಿಗಳಲ್ಲಿ ಅತ್ಯುತ್ತಮ ಪ್ರತಿಭಾನ್ವಿತರು ಇದ್ದಾರೆ. ಅವರಿಗ ಸೂಕ್ತ ವೇದಿಕೆ ದೊರೆತಲ್ಲಿ ತಮ್ಮ ಸಾಧನೆಯನ್ನು ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು. ತಾಲೂಕು ವೈದ್ಯಾಧಿಕಾರಿ ಡಾ.ರಂಗನಾಥ್ ಮಾತನಾಡಿ, ತಾಲೂಕಿನಲ್ಲಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಸಿಬ್ಬಂದಿ ಮತ್ತು ಪುರುಷ ಸಿಬ್ಬಂದಿಯಲ್ಲಿ ಹತ್ತು ಹಲವಾರು ಪ್ರತಿಭೆಗಳಿವೆ. ಜನಪದ ಕಲೆಯಿಂದ ಹಿಡಿದು ಕ್ರೀಡಾಕ್ಷೇತ್ರದಲ್ಲೂ ಸಾಧಕರಿದ್ದಾರೆ. ಆರಂಭದಲ್ಲಿ ಇದೊಂದು ವೇದಿಕೆ ಸೃಷ್ಠಿಸಲಾಗಿದೆ. ಮುಂಬರುವ ದಿನಗಳಲ್ಲಿ ಅವರ ಪ್ರತಿಭೆಗೆ ಅನುಸಾರ ಸೂಕ್ತ ಪ್ರೋತ್ಸಾಹ ನೀಡಲಾಗುವುದು ಎಂದು ಅವರು ತಿಳಿಸಿದರು. ಕ್ರೀಡಾಕೂಟದ ಆಯೋಜಕರಾದ ಡಾ.ಸಂದೇಶ್ ಮಾತನಾಡಿ, ತಮ್ಮ ಆರೋಗ್ಯ ಇಲಾಖೆಯಲ್ಲಿ ಒತ್ತಡವೇ ಹೆಚ್ಚು. ನಮ್ಮೊಂದಿಗೆ ದಿನವಿಡೀ ಯೋಧರಂತೆ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರನ್ನೂ ಸಹ ತಮ್ಮ ಕ್ರೀಡಾಕೂಟದಲ್ಲಿ ತೊಡಗಿಸಿಕೊಳ್ಳಲಾಗಿದೆ. ವರೆಲ್ಲರಿಗೂ ಇದೊಂದು ದಿನ ಮನರಂಜನೆಯ ಹಬ್ಬದಂತಿದೆ ಎಂದರು. ಮುಖ್ಯ ಶಿಕ್ಷಕ ನಟೇಶ್ ಮಾತನಾಡಿ, ತಾಲೂಕು ಆರೋಗ್ಯ ಇಲಾಖೆಯವರು ಆಯೋಜಿಸಿರುವ ಕ್ರೀಡಾಕೂಟ ಮುಂಬರುವ ದಿನಗಳಲ್ಲಿ ಹೆಮ್ಮರವಾಗಿ ಬೆಳೆಯಲಿ. ನೊಣವಿನಕೆರೆ ಮಠದ ಸಂಪೂರ್ಣ ಸಹಕಾರದೊಂದಿಗೆ ಉತ್ತಮವಾಗಿ ಕಾರ್ಯಕ್ರಮ ಆಯೋಜಿಸೋಣ ಎಂದರು. ಕಾರ್ಯಕ್ರಮದಲ್ಲಿ ಕ್ರೀಡಾ ಸಮಿತಿಯ ಕಾರ್ಯದರ್ಶಿಗಳಾದ ನಾಗೇಶ್, ಯೋಗೀಶ್, ಮಿಥುನ್ ರಾವತ್, ಗಿಡ್ಡೇಗೌಡ, ಮಂಜುನಾಥ್, ಶ್ರೀಧರ್ ಸೇರಿದಂತೆ ಹಲವರು ಇದ್ದರು. ಮಹಿಳಾ ಸಿಬ್ಬಂದಿಗಳಿಗೆ ಥ್ರೋಬಾಲ್, ಕಬಡ್ಡಿ, ಟಿನಿಕಾಯ್ಟ್, ಬ್ಯಾಡ್ಮಿಟನ್, ಹಗ್ಗ ಜಗ್ಗಾಟ, ಕೇರಂ, ಅಥ್ಲೆಟಿಕ್ ಗಳನ್ನು ಏರ್ಪಡಿಸಲಾಗಿತ್ತು. ಸುಮಾರು ಇನ್ನೂರಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.