ಹೆಜ್ಜೆ ಮೇಳಕ್ಕೆ ಮರುಜೀವ ನೀಡಿದ ಕಲಾಪ್ರೇಮಿಗಳು

KannadaprabhaNewsNetwork |  
Published : Jun 27, 2026, 01:00 AM IST
ಪೋಟೊ25ಕೆಎಸಟಿ1: ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಕೊಳ್ಳಿಯವರ ಮಸಿಧೀಯ ಮುಂದೆ ಮೊಹರಂ ಅಂಗವಾಗಿ ಹೆಜ್ಜೆಮೇಳ ಸ್ಪರ್ಧೇ ಜರುಗಿತು.ಸಾವಿರಾರು ಜನ ಪ್ರೇಕ್ಷಕರು ಹೆಜ್ಜೆಮೇಳ ವಿಕ್ಷಿಸಿ ಕೇಕೆ ಹಾಕಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.  | Kannada Prabha

ಸಾರಾಂಶ

ಹಲಗಿ, ಡೊಳ್ಳು, ತಮಟೆ ಸೇರಿದಂತೆ ಸಾಂಪ್ರದಾಯಿಕ ವಾದ್ಯಗಳ ನಾದಕ್ಕೆ ಕಲಾವಿದರು ಒಂದೇ ಲಯದಲ್ಲಿ ಹೆಜ್ಜೆ ಹಾಕಿದರು

ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ಆಧುನಿಕತೆ ಪರಿಣಾಮ ನಶಿಸಿ ಹೋಗುತ್ತಿರುವ ಮೊಹರಂ ಜನಪದ ಕಲೆ ಹೆಜ್ಜೆ ಮೇಳ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಾಲೂಕಿನ ದೋಟಿಹಾಳದ ಕಲಾಪ್ರೇಮಿಗಳು ಕೊಳ್ಳಿಯವರ ಮಸೀದಿ ಮುಂದೆ ಹೆಜ್ಜೆ ಮೇಳ ಸ್ಪರ್ಧೆ ನಡೆಸಿರುವುದು ಶ್ಲಾಘನೀಯ ಕಾರ್ಯವಾಗಿದೆ.

ಮೊಹರಂ ಹಬ್ಬದ ಅಂಗವಾಗಿ ದೋಟಿಹಾಳ ಗ್ರಾಮದ ಕೊಳ್ಳಿಯವರ ಮಸೀದಿ ಎದುರು ಹೆಜ್ಜೆ ಮೇಳ ಸ್ಪರ್ಧೆ ಆಯೋಜಿಸಲಾಗಿತ್ತು. ಸುತ್ತಮುತ್ತಲಿನ ವಿವಿಧ ಗ್ರಾಮಗಳಿಂದ 14 ಹೆಜ್ಜೆ ತಂಡಗಳು ಭಾಗವಹಿಸಿ ಜನಪದ ಕಲೆಯ ವೈಭವ ಅನಾವರಣಗೊಳಿಸಿದವು. ಇದು ಕೇವಲ ಸ್ಪರ್ಧೆಯಾಗಿರದೆ, ಸಂಸ್ಕೃತಿ ಪರಂಪರೆಯ ಸಂರಕ್ಷಣೆ ವೇದಿಕೆಯಾಗಿ ರೂಪುಗೊಂಡಿತ್ತು.

ಹಲಗಿ ನಾದಕ್ಕೆ ಲಯಬದ್ಧ ಹೆಜ್ಜೆ : ಬುಧವಾರ ರಾತ್ರಿ ಆರಂಭವಾದ ಹೆಜ್ಜೆ ಮೇಳ ಸ್ಪರ್ಧೆ ಗುರುವಾರ ಬೆಳಗಿನ ಜಾವದವರೆಗೂ ನಡೆಯಿತು. ಹಲಗಿ, ಡೊಳ್ಳು, ತಮಟೆ ಸೇರಿದಂತೆ ಸಾಂಪ್ರದಾಯಿಕ ವಾದ್ಯಗಳ ನಾದಕ್ಕೆ ಕಲಾವಿದರು ಒಂದೇ ಲಯದಲ್ಲಿ ಹೆಜ್ಜೆ ಹಾಕಿದರು. ಬಣ್ಣಬಣ್ಣದ ಸಾಂಪ್ರದಾಯಿಕ ಉಡುಪು ಧರಿಸಿದ್ದ ತಂಡಗಳು ವಿಶಿಷ್ಟ ಹೆಜ್ಜೆ ಪ್ರದರ್ಶಿಸಿ ನೆರೆದಿದ್ದ ಸಾವಿರಾರು ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡವು.

ಈ ಬಾರಿ ಹೆಜ್ಜೆ ಮೇಳ ಸ್ಪರ್ಧೆ ರೂಪದಲ್ಲಿ ಆಯೋಜಿಸಿದ್ದರಿಂದ ಕಲಾವಿದರಲ್ಲಿ ಹೆಚ್ಚಿನ ಉತ್ಸಾಹ ಕಂಡುಬಂತು. ಪ್ರತಿಯೊಂದು ತಂಡ ತನ್ನದೇ ಆದ ಶೈಲಿ,ಲಯ, ಶಿಸ್ತು ಮತ್ತು ವೇಷಭೂಷಣದೊಂದಿಗೆ ಗಮನ ಸೆಳೆಯಿತು.

ತೀರ್ಪುಗಾರರು ಹೆಜ್ಜೆಯ ಸಮನ್ವಯ, ಕಲಾತ್ಮಕತೆ ಹಾಗೂ ಸಾಂಪ್ರದಾಯಿಕತೆ ಆಧಾರದ ಮೇಲೆ ಮೌಲ್ಯಮಾಪನ ನಡೆಸಿದರು. ಉತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಸ್ಪರ್ಧೆಗೆ ಚಾಲನೆ: ಹೆಜ್ಜೆ ಮೇಳ ಸ್ಪರ್ಧೆಗೆ ಹಲಗೆ ಬಾರಿಸುವ ಮೂಲಕ ಚಾಲನೆ ನೀಡಿದ ದಲಾಲಿ ವರ್ತಕ ಲಾಡಸಾಬ್‌ ಕೊಳ್ಳಿ ಮಾತನಾಡಿ, ಇಂದಿನ ಆಧುನಿಕತೆ ಪರಿಣಾಮವಾಗಿ ಮೊಬೈಲ್,ಟಿವಿ, ಸಾಮಾಜಿಕ ಜಾಲತಾಣ ಪ್ರಭಾವದಿಂದ ಗ್ರಾಮೀಣ ಜನಪದ ಕಲೆಗಳಲ್ಲಿ ಯುವಕರ ಆಸಕ್ತಿ ಕಡಿಮೆಯಾಗುತ್ತಿದ್ದು, ಹೆಜ್ಜೆ ಮೇಳದಂತಹ ಕಲೆಗಳು ನಶಿಸುವ ಹಂತ ತಲುಪಿದ್ದು, ಈ ಕಲೆ ಜೀವಂತವಾಗಿಡುವ ಸಂಕಲ್ಪದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಮೊಹರಂ ಹಬ್ಬ ಧಾರ್ಮಿಕ ಆಚರಣೆಯಷ್ಟೇ ಅಲ್ಲ ಸೌಹಾರ್ದತೆ, ಭಾವೈಕ್ಯತೆ ಸಂಕೇತವೂ ಆಗಿದ್ದು, ಜನಪದ ಕಲೆ ಉಳಿಸಲು ಕಾರ್ಯರೂಪದ ಪ್ರಯತ್ನ ಅಗತ್ಯವಾಗಿದ್ದು ದೋಟಿಹಾಳ ಗ್ರಾಮದಲ್ಲಿ ಹೆಜ್ಜೆ ಮೇಳ ಸ್ಪರ್ಧೆಯ ರೂಪದಲ್ಲಿ ನಡೆಸಿರುವುದು ಶ್ಲಾಘನೀಯ ಕೆಲಸವಾಗಿದೆ. ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆದರೆ ಮುಂದಿನ ಪೀಳಿಗೆಗೂ ಹೆಜ್ಜೆ ಮೇಳದ ಪರಂಪರೆ ತಲುಪುವುದರ ಜತೆಗೆ ಗ್ರಾಮೀಣ ಸಂಸ್ಕೃತಿಯ ಬೇರುಗಳು ಮತ್ತಷ್ಟು ಗಟ್ಟಿಯಾಗಲಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಮನಗೌಡ ಬಿಜ್ಜಲ, ರಾಜಶೇಖರ ಹೊಕ್ರಾಣಿ, ಲಾಡಸಾಬ್‌ ಗಿರಣಿ, ವಾಲ್ಮೀಕಪ್ಪ ಯಕ್ಕರನಾಳ, ಕರಿಯಪ್ಪ ಪೂಜಾರ, ನಬಿಸಾಬ್‌ ಬಿಜಕತ್ತಿ, ಹನೀಫ್ ಬಿಳೇಕುದರಿ, ಹಿದಾಯತ್ ನೀಲಗಾರ, ಸದ್ದಾಂ ಕೊಣ್ಣೂರು, ನಬಿಸಾಬ್‌ ಇಲಕಲ್, ಸುರೇಶ ಹುನಗುಂದ, ರಾಜೇಸಾಬ ಯಲಬುರ್ಗಿ ಸೇರಿದಂತೆ ಅನೇಕ ಗಣ್ಯರು ಇದ್ದರು. ಸಾವಿರಾರು ಜನ ಪ್ರೇಕ್ಷಕರು ಇದ್ದರು.

ಪ್ರಥಮ ಬಹುಮಾನ ಹಿರೆವಡ್ರಕಲ್ ತಂಡ, ದ್ವೀತಿಯ ಬಹುಮಾನ ವಣಗೇರಿ ತಂಡ, ತೃತೀಯ ಬಹುಮಾನ ನಾಗರಾಳ ತಂಡದವರು ಪಡೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೃತ್ತಿ ಪರಿಣತಿ ಹೆಚ್ಚಿಸಲು ತರಬೇತಿ ಅಗತ್ಯ: ಅನುರಾಧ
ಉಡುಪಿ - ಮಹಿಳಾ ಸಹಕಾರಿಗಳಿಗೆ ತರಬೇತಿ ಕಾರ್ಯಾಗಾರ ಸಂಪನ್ನ