ಯಲ್ಲಾಪುರ: ಶ್ರೇಷ್ಠವಾದ ನಮ್ಮ ಸನಾತನ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಾಲೂಕು ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ಎನ್.ಕೆ. ಭಟ್ ಅಗ್ಗಾಶಿಕುಂಬ್ರಿ ತಿಳಿಸಿದರು.
ತಾಲೂಕಿನ ನಂದೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಗಾನ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ವರ್ಧಂತಿ ಮಹೋತ್ಸವ ನಿಮಿತ್ತ ಶನಿವಾರ ರಾತ್ರಿ ಆಯೋಜಿಸಿದ್ದ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಮೆಕ್ಕೆಕಟ್ಟು ಮೇಳದ ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.ನಮ್ಮ ಹಿಂದಿನ ತಲೆಮಾರಿನವರು ನಾನಾ ಕಷ್ಟ, ಕಾರ್ಪಣ್ಯದ ನಡುವೆಯೂ ಯಕ್ಷಗಾನದಂತಹ ದೈವಿ ಆರಾಧನಾ ಕಲೆಯನ್ನು ಜತನದಿಂದ ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ನಮ್ಮ ಮುಂದಿನ ತಲೆಮಾರಿಗೆ ಇಂತಹ ಸುಸಂಸ್ಕೃತ ಕಲೆಯನ್ನು ಪರಿಚಯಿಸಿ, ಪ್ರೋತ್ಸಾಹಿಸಿ ಈ ಕಲೆಯು ನಿರಂತರವಾಗಿ ಮುಂದುವರಿಯುವಂತೆ ನೋಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಜಿ.ಎಸ್. ಭಟ್ಟ ತಟ್ಟಿಗದ್ದೆ ಮಾತನಾಡಿ, ಅನೇಕ ವರ್ಷಗಳಿಂದ ಈ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಲ್ಲರ ಸಹಕಾರದೊಂದಿಗೆ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.ಪತ್ರಕರ್ತ ಜಿ.ಎನ್. ಭಟ್ ತಟ್ಟಿಗದ್ದೆ ಮಾತನಾಡಿ, ಭಕ್ತರ ಶ್ರದ್ಧಾ ಕೇಂದ್ರವಾದ ದೇವಾಲಯಗಳ ಆಶ್ರಯದಲ್ಲಿ ಯಕ್ಷಗಾನದಂತಹ ಕಣ್ಮನ ತಣಿಸುವ ಮೇರು ಕಲಾ ಪ್ರದರ್ಶನವನ್ನು ಆಯೋಜಿಸುವ ಮೂಲಕ ಈ ಕಲೆಯ ಆರಾಧನೆಯ ಜತೆಗೆ, ಪೌರಾಣಿಕ ಕಥಾನಕಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಕೆಡಿಸಿಸಿ ಬ್ಯಾಂಕ್ ನಿವೃತ್ತ ನೌಕರ ರಾಮಕೃಷ್ಣ ಭಟ್ಟ ಹುಲಗಾನ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್ಎಸ್ಎಂಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕೌಡಿಕೆರೆ, ನಂದೊಳ್ಳಿ ಗ್ರಾಪಂ ಸದಸ್ಯ ಟಿ.ಆರ್. ಹೆಗಡೆ, ಮೊಕ್ತೇಸರ ವೆಂಕಟ್ರಮಣ ಹೆಗಡೆ, ಸಮಿತಿಯ ಉಪಾಧ್ಯಕ್ಷ ಶ್ರಿಕೃಷ್ಣ ಭಟ್ಟ ಮುಂತಾದವರು ಪಾಲ್ಗೊಂಡಿದ್ದರು. ಪೂರ್ವಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ನಾರಾಯಣ ಭಟ್ಟ ಬೆಳ್ಳಿ ನಿರ್ವಹಿಸಿ, ವಂದಿಸಿದರು.ಸಭಾ ಕಾರ್ಯಕ್ರಮದ ನಂತರ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಮೆಕ್ಕೆಕಟ್ಟು ಮೇಳದವರಿಂದ ನಡೆದ ಸಮಗ್ರ ಕಂಸ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು.