ಕೌತುಕದ ಕ್ಷಣಕ್ಕಾಗಿ ಕಾಯುವ ಕಲೆಗಾರಿಕೆ ಫೋಟೋಗ್ರಫಿ

KannadaprabhaNewsNetwork |  
Published : Aug 19, 2024, 12:45 AM IST
೧೮ಎಚ್‌ವಿಆರ್೨- | Kannada Prabha

ಸಾರಾಂಶ

ಸದ್ದಿಲ್ಲದೆ ಕೆಲಸ ಮಾಡಿದ ಛಾಯಾಗ್ರಾಹಕ ಟಿ.ಎಸ್. ಸತ್ಯನ್ ಎಂಬ ಕನ್ನಡಿಗ ದೇಶದ ಏಕೈಕ ಪದ್ಮಶ್ರಿ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ. ಜೀವನದ ಕೌತುಕದ ಕ್ಷಣಕ್ಕಾಗಿ ಕಾಯುವ ಕಲೆಗಾರಿಕೆ ಫೋಟೋಗ್ರಫಿ ಎಂದು ಛಾಯಾಗ್ರಾಹಕ ಹುಬ್ಬಳ್ಳಿಯ ಶಶಿ ಸಾಲಿ ಹೇಳಿದರು.

ಹಾವೇರಿ: ಸದ್ದಿಲ್ಲದೆ ಕೆಲಸ ಮಾಡಿದ ಛಾಯಾಗ್ರಾಹಕ ಟಿ.ಎಸ್. ಸತ್ಯನ್ ಎಂಬ ಕನ್ನಡಿಗ ದೇಶದ ಏಕೈಕ ಪದ್ಮಶ್ರಿ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ. ಜೀವನದ ಕೌತುಕದ ಕ್ಷಣಕ್ಕಾಗಿ ಕಾಯುವ ಕಲೆಗಾರಿಕೆ ಫೋಟೋಗ್ರಫಿ ಎಂದು ಛಾಯಾಗ್ರಾಹಕ ಹುಬ್ಬಳ್ಳಿಯ ಶಶಿ ಸಾಲಿ ಹೇಳಿದರು. ನಗರದ ಹಂಚಿನಮನಿ ಆರ್ಟಗ್ಯಾಲರಿ ಮತ್ತು ಸಾಹಿತಿ ಕಲಾವಿದರ ಬಳಗ ಭಾನುವಾರ ಏರ್ಪಡಿಸಿದ್ದ ಕವಿ, ಶಿಕ್ಷಕ, ಕಲಾವಿದ ಕಿರಣ ಜತ್ತಿ ಅವರ ಜೀವನ ಯಾನ ಎಂಬ ಚಿತ್ರ ಕಾವ್ಯ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದರು. ೧೫೪೫ರಿಂದ ವಿಕಸಿತಗೊಳ್ಳುತ್ತ ಬಂದ ಫೊಟೋಗ್ರಾಫಿ ಇಂದು ಕಣ್‌ರೆಪ್ಪೆ ಬಡೆಯುವಷ್ಟು ಸಲೀಸಾಗಿದೆ. ಜೀವನದ ಸುಂದರ ಪ್ರಸಂಗಗಳನ್ನು ಸದಾಕಾಲ ದಾಖಲಿಸುವ ಈ ಕಲೆಗೆ ಸಹನೆ ಮತ್ತು ತಾಳ್ಮೆ ಬೇಕು. ಆಧುನಿಕ ತಂತ್ರಜ್ಞಾನದಲ್ಲಿ ಯಾರ ಪ್ರತಿಭೆಯನ್ನು ಮುಚ್ಚಿಡಲು ಸಾಧ್ಯವಿಲ್ಲ. ಸಾಮಾನ್ಯನೂ ಅಸಮಾನ್ಯನಾಗಬಹುದು ಎಂದು ಹೇಳಿದರು. ಜೀವನ ಯಾನ ಕೃತಿಯನ್ನು ಪರಿಚಯಿಸಿದ ಡಾ. ಯಮುನಾ ಕೋಣೆಸರ್ ಅವರು ಎಲ್ಲ ಕಾಲಕ್ಕೂ ಸತ್ಯನ್ ಅವರ ಚಿತ್ರಗಳು ಮಾತನಾಡುತ್ತವೆ. ಕಿರಣ ಜತ್ತಿ ಅವರ ಚಿತ್ರಗಳಿಗೆ ಕಾವ್ಯ ರೂಪ ಕೊಟ್ಟಿದ್ದಾರೆ. ತಾಯಿ ಗುಣ, ಸಾಮಾನ್ಯನ ಸಂಕಟ ಈ ಕವಿತೆಗಳ ಬೀಜಾರ್ಥಗಳಾಗಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕುಂಚಕಲಾವಿದ ಕುಮಾರ ಕಾಟೇನಹಳ್ಳಿ ಮಾತನಾಡಿ, ಚಿತ್ರ, ಛಾಯಾಚಿತ್ರ ಹಾಗೂ ಕಾವ್ಯ ಇವೆಲ್ಲವುಗಳು ಕಿರಣ ಜತ್ತಿ ಅವರ ಜೀವನ ಯಾನ ಕೃತಿಯಲ್ಲಿ ಅಡಕಗೊಂಡಿವೆ. ಕಾವ್ಯ ಮತ್ತು ಚಿತ್ರಕಲೆ ಜೀವನದ ಎರಡು ಮುಖಗಳಾಗಿವೆ ಎಂದರು.ಕೃತಿಕಾರ ಕಿರಣ ಜತ್ತಿ ಮತ್ತು ಅವರ ಪತ್ನಿ ಪ್ರತಿಭಾ ಅವರನ್ನು ವೇದಿಕೆಯ ಪರವಾಗಿ ಶಶಿ ಸಾಲಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ನಂತರ ಕಿರಣ ಜತ್ತಿ ಮಾತನಾಡಿ, ಶಬ್ದಗಳೇ ನನ್ನ ಕಾವ್ಯದ ಶಕ್ತಿ. ಸತ್ಯನ್ ಚಿತ್ರಗಳು ಅಂತಹ ನೂರಾರು ಕವಿತೆಗಳನ್ನು ಬರೆಯಿಸಿದೆ. ಹಾವೇರಿಯಲ್ಲಿ ಮೊದಲ ಕೃತಿ ಬಿಡುಗಡೆಯಾಗುವುದು ನನ್ನ ಸೌಭಾಗ್ಯ ಎಂದರು. ಮಂಡ್ಯದ ಜೋಳದರಾಶಿ ದೊಡ್ಡನಗೌಡರ ರಂಗ ಪ್ರಶಸ್ತಿ ಪುರಸ್ಕೃತ ಪ್ರಭು ಗುರಪ್ಪನವರ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ರೊಟ್ಟಿ ಹಾಗೂ ಜೀವನ ಯಾನದ ಮುಖಪುಟ ವಿನ್ಯಾಸಕಾರ ಶಿವು ಹೂಗಾರ ಅವರನ್ನು ಸನ್ಮಾನಿಸಲಾಯಿತು. ಅತಿಥಿಗಳಾಗಿ ಡಾ. ಬಸವರಾಜ ಕಲೆಗಾರ ಪಾಲ್ಗೊಂಡಿದ್ದರು. ಕರಿಯಪ್ಪ ಹಂಚಿನಮನಿ ಪ್ರಾಸ್ತಾವಿಕ ಮಾತನಾಡಿದರು. ಮಹಾಂತೇಶ ಮರಿಗೂಳಪ್ಪನವರ ಮತ್ತು ಭೂಮಿಕಾ ಪ್ರಾರ್ಥಿಸಿದರು. ಪರಿಮಳಾ ಜೈನ್ ಸ್ವಾಗತಿಸಿದರು. ಚಂದ್ರಶೇಖರ ಮಾಳಗಿ ನಿರೂಪಿಸಿದರು. ಡಾ.ಅಂಬಿಕಾ ಹಂಚಾಟೆ ವಂದಿಸಿದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''