ಹಳಿಯಾಳ: ರೈತರಿಗೆ ತೂಕದಲ್ಲಿ ಮೋಸ ಮಾಡುವ ದಲ್ಲಾಳಿಗಳ ಲೈಸೆನ್ಸ್ ರದ್ದು ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರೈತ ಘಟಕದ ಮುಂದಾಳತ್ವದಲ್ಲಿ ಇತ್ತೀಚೆಗೆ ಪಟ್ಟಣದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ತೂಕದಲ್ಲಿ ಮೋಸ:
ತಾಲೂಕಿನ ರೈತರು ಫಸಲನ್ನು ಹಳಿಯಾಳ ಎಪಿಎಂಸಿಯಲ್ಲಿನ ರೈತ ಮಾರುಕಟ್ಟೆಯಲ್ಲಿ ಹಾಗೂ ಇಲ್ಲಿನ ದಲ್ಲಾಳಿಗಳಿಗೆ ಮಾರಾಟ ಮಾಡುತ್ತಾರೆ. ಹೀಗಿರುವಾಗ ದಲ್ಲಾಳಿಗಳು ಮಾರಾಟಕ್ಕೆ ತಂದ ಫಸಲಿನ ತೂಕವನ್ನು ಸರಿಯಾಗಿ ಮಾಡದೇ, ತೂಕದ ಯಂತ್ರವನ್ನು ವ್ಯವಸ್ಥಿತವಾಗಿ ರಿಮೋಟ್ ಮೂಲಕ ನಿಯಂತ್ರಿಸಿ, ಪ್ರತಿ 50 ಕೆಜಿ ಚೀಲದಲ್ಲಿ 5ರಿಂದ 6 ಕೆಜಿ ಕಡಿಮೆ ತೂಕ ಮಾಡಿಸಿ ರೈತರಿಗೆ ವಂಚಿಸುತ್ತಿದ್ದಾರೆ.ದಲ್ಲಾಳಿಗಳು ವಂಚಿಸಿದ ಹಾಗೂ ವಂಚಿಸುತ್ತಿರುವ ಸಾಕಷ್ಟು ಸಾಕ್ಷಿಗಳು ಹಾಗೂ ಪುರಾವೆಗಳು ನಮ್ಮ ಬಳಿಯಿದೆ. ಈ ದಲ್ಲಾಳಿಗಳ ಲೈಸೆನ್ಸ್ ರದ್ದು ಮಾಡಿ, ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಇಂತಹ ವಂಚನೆ- ಮೋಸದ ಪ್ರಕರಣಗಳು ನಡೆಯದಂತೆ ತಡೆಹಿಡಿದು, ರೈತರಿಗೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ತಾಲೂಕು ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ರೈತ ಘಟಕದ ಅಧ್ಯಕ್ಷ ಸುರೇಶ ಕೊಕಿತಕರ, ಉಪಾಧ್ಯಕ್ಷ ರಾಮಾ ಜಾವಳೇಕರ ಹಾಗೂ ಪ್ರಮುಖರಾದ ಚಂದ್ರಕಾಂತ ದುರ್ವೆ, ವಿನೋದ ದೊಡ್ಮನಿ, ಮಹೇಶ ಆನೆಗುಂದಿ, ನಾಗೇಶ ಹೆಗಡೆ, ಸುಧಾಕರ್ ಕುಂಬಾರ, ಪರಶುರಾಮ ಶಹಾಪುರಕರ, ರಮೇಶ ತೊರ್ಲೆಕರ, ಶಿವು ದಮ್ಮನಗಿಮಠ, ತಿಪ್ಪಣ್ಣ ಕಲಗುಡಿ, ಜೈವಂತ ದಂಡಿ, ಅರ್ಜುನ್ ಜಾವಳೇಕರ, ಲಕ್ಷ್ಮಣ ಜಾವಳೇಕರ, ಬಸು ತೋರ್ಲೆಕರ, ನಾರಾಯಣ ಗೌಡಾ, ಪರಶುರಾಮ ತೋರಸ್ಕರ್, ಅರುಣ್ ಬೊಬಾಟಿ, ಮೋನು ದೊಡ್ಮನಿ, ವಿನೋದ ಕಮ್ಮಾರ ಇದ್ದರು.ನಂತರ ಪ್ರತಿಭಟನಾಕಾರರು ಎಪಿಎಂಸಿಗೆ ತೆರಳಿ ಎಪಿಎಂಸಿ ಕಾರ್ಯದರ್ಶಿ ಸುಮಿತ್ರಾ ಹಾವಣ್ಣನವರ ಅವರಿಗೆ ಮನವಿ ಸಲ್ಲಿಸಿದರು.