ಶೋಷಿತ ವರ್ಗದ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ: ಡಾ. ವಿಜಯ ಬಲ್ಲಾಳ್

KannadaprabhaNewsNetwork |  
Published : Jan 15, 2026, 03:00 AM IST
ಕಲಾ ತರಬೇತಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. | Kannada Prabha

ಸಾರಾಂಶ

ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಮತ್ತು ಇತರ ಇಲಾಖೆಗಳ ಸಹಯೋಗದಲ್ಲಿ ಪಜಾ - ಪಪಂ ಉಪಯೋಜನೆಯಡಿ ಹಮ್ಮಿಕೊಂಡ ಕಲಾ ತರಬೇತಿ ಶಿಬಿರ ಸಮಾರೋಪ ಸಮಾರಂಭ

ಉಡುಪಿ: ಪ್ರತಿಭೆಗೆ ಯಾವುದೇ ತಾರತಮ್ಯವಿಲ್ಲ, ಕಡು ಬಡವನಲ್ಲೂ ಪ್ರತಿಭೆ ಇರುತ್ತದೆ. ಆದರೆ ಶೋಷಿತ ವರ್ಗಗಳ ಪ್ರತಿಭೆಗಳಿಗೆ ಸರ್ಕಾರ, ಇಲಾಖೆ ಹಾಗೂ ಸಮಾಜದ ಪ್ರೋತ್ಸಾಹದ ಅಗತ್ಯವಿದೆ ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್ ಹೇಳಿದರು.ಅವರು ಇಲ್ಲಿನ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಮತ್ತು ಇತರ ಇಲಾಖೆಗಳ ಸಹಯೋಗದಲ್ಲಿ ಪಜಾ - ಪಪಂ ಉಪಯೋಜನೆಯಡಿ ಹಮ್ಮಿಕೊಂಡ ಕಲಾ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ಕರಾವಳಿ ಜಿಲ್ಲೆಗಳ ಜಾನಪದ ಕಲೆಗಳು ಅತ್ಯಂತ ವೈಶಿಷ್ಟ್ಯಪೂರ್ಣವಾಗಿವೆ. ಅದರಲ್ಲೂ ಕೊರಗ ಸಮಾಜ ಅತೀ ಹಿಂದುಳಿದಿದ್ದು, ಅವರ ಸಂಪ್ರದಾಯಗಳು, ಜಾನಪದ ಕಲೆಗಳ ಬಗ್ಗೆ ಹೊರಜಗತ್ತಿಗೆ ತಿಳಿದಿರುವುದು ಅತ್ಯಲ್ಪ. ಈ ನಿಟ್ಟಿನಲ್ಲಿ ಅವರ ಜಾನಪದ ಕಲೆಗಳ ಬಗ್ಗೆ ತರಬೇತಿ ನೀಡಿ ಯುವ ಪೀಳಿಗೆಗೆ ದಾಟಿಸುವ ಮಹಾತ್ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿರುವುದು ಅಭಿನಂದನೀಯ. ಇದರಿಂದ ನಶಿಸುತ್ತಿರುವ ಕೊರಗ ಸಮುದಾಯದ ಜಾನಪದ ಕಲೆಗಳನ್ನು ಉಳಿಸಿದಂತೆಯೂ ಆಗುತ್ತದೆ ಎಂದರು.ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ನಾರಾಯಣ ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಶಿವರಾಮ ಕಾರಂತ ಟ್ರಸ್ಟಿನ ಜಿಲ್ಲಾಧ್ಯಕ್ಷ ಡಾ.ಗಣನಾಥ ಎಕ್ಕಾರು, ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕಿ ವಿಜಯಲಕ್ಷ್ಮೀ ದಿನ್ನಿ, ಕೊರಗ ಸಮಾಜದ ಮುಖಂಡ ಗಣೇಶ್ ಕೊರಗ ವೇದಿಕೆಯಲ್ಲಿದ್ದರು. ಶಿಬಿರದ ಕಲಾಗುರುಗಳಾದ ರಮೇಶ್ ಕಲ್ಮಾಡಿ ಹಾಗೂ ಗಣೇಶ್ ಬಾರ್ಕೂರು ಅವರನ್ನು ಗೌರವಿಸಲಾಯಿತು. ತರಬೇತಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು. ಬನ್ನಂಜೆ ವಸತಿಶಾಲೆಯ ಮೇಲ್ವಿಚಾರಕಿ ಸುಚಿತ್ರಾ ವಂದಿಸಿದರು.ಕಾರ್ಯಕ್ರಮದಲ್ಲಿ ಕಲಾ ತರಬೇತಿ ಪಡೆದ ವಿದ್ಯಾರ್ಥಿನಿಯರಿಂದ ಉತ್ತರ ಕನ್ನಡದ ಹಾಲಕ್ಕಿ ಕುಣಿತ, ಕೋಲಾಟ, ಕೊರಗ ಸಮುದಾಯದ ಡೊಳ್ಳು ಕುಣಿತ, ಕಂಗೀಲು ನೃತ್ಯ ಸಭಿಕರ ಮನಸೂರೆಗೊಂಡವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 2259.56 ಕೋಟಿ ಅನುದಾನ ಮಂಜೂರು
ಮನರೇಗಾ ಮರುನಾಮಕರಣದಿಂದ ಬಡವರ ಅನ್ನದ ಬಟ್ಟಲಿಗೆ ಕನ್ನ: ಬಿಪಿನ್ ಚಂದ್ರ ಪಾಲ್‌