ಕನ್ನಡಪ್ರಭ ವಾರ್ತೆ ಸೂಲಿಬೆಲೆ
ತಲೆಮಾರುಗಳು ಕಳೆದರೂ ನಾಟಕ ಕಲೆ ಇನ್ನೂ ಜೀವಂತವಾಗಿದೆ. ಕಲಾವಿದರು ಪವಿತ್ರ ಹಿಂದೂ ಧರ್ಮವನ್ನು ಸಾರುವ ಸಾಂಸ್ಕೃತಿಕ ಹಾಗೂ ಧಾರ್ಮಿಕ ರಾಯಭಾರಿಗಳಾಗಿ ಕಲೆಯನ್ನು ಮುನ್ನಡೆಸಬೇಕು ಎಂದು ಯುವ ಮುಖಂಡ ಜಿ. ನಾರಾಯಣಗೌಡ ಹೇಳಿದರು.ಸೂಲಿಬೆಲೆ ಹೋಬಳಿ ಸಿದ್ದೇನಹಳ್ಳಿ ಗ್ರಾಮದಲ್ಲಿ ಆಂಜನೇಯಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ದಿವಂಗತ ಬಿ.ಎನ್. ವೆಂಕಟರಮಣಗೌಡರ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ ಕುರುಕ್ಷೇತ್ರ ಪೌರಾಣಿಕ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಿನಿಮಾ, ದೃಶ್ಯಮಾಧ್ಯಮ, ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲೂ ನಾಟಕ ಕಲೆ ಉಳಿದುಕೊಂಡಿರುವುದು ಗ್ರಾಮೀಣ ಭಾಗದ ಕಲಾವಿದರಿಂದ,ರಂಗಭೂಮಿಯನ್ನು ಯುವ ಸಮುದಾಯದವರು ಪ್ರೋತ್ಸಾಹಿಸಿ, ಉಳಿಸಬೇಕು ಎಂದರು.
ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್. ಗೋಪಾಲಗೌಡ ಮಾತನಾಡಿ, ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ನಿರ್ಮಿಸಬೇಕು ಎಂದು ಅಭಿಪ್ರಾಯಪಟ್ಟರು.ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ. ಸತೀಶಗೌಡ ಮಾತನಾಡಿ, ಪ್ರಥಮ ಬಾರಿಗೆ ನಾಟಕ ನಿರ್ದೇಶನ ಮಾಡುತ್ತಿರುವ ಸಿದ್ದೇನಹಳ್ಳಿಯ ರಾಮಾಂಜಿನಪ್ಪ ಅವರ ಪ್ರತಿಭೆ ಅನನ್ಯ ಎಂದು ಶ್ಲಾಘಿಸಿದರು.
ಸಿದ್ದೇನಹಳ್ಳಿ ಗ್ರಾಮದ ಗ್ರಾಪಂ ಮಾಜಿ ಸದಸ್ಯ ಎಸ್.ವಿ. ರಮೇಶ್ ಮಾತನಾಡಿ, ಸಿದ್ದೇನಹಳ್ಳಿ ಗ್ರಾಮದ ಗ್ರಾಮದೇವತೆ ಗಂಗಮ್ಮ ದೇವಿಯ ದೀಪೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗ್ರಾಮದ ಕಲಾವಿದರ ಒತ್ತಾಸೆಯಂತೆ ನಾಟಕಕ್ಕೆ ವೇದಿಕೆ ಕಲ್ಪಿಸಲಾಗಿದೆ, ಇದು ಮುಂದುವರಿಯಬೇಕು ಎಂದರು.ರಂಗಭೂಮಿ ನಿರ್ದೇಶಕರಾದ ಎಸ್.ಸಿ. ರಾಮಾಂಜಿನಪ್ಪ, ಡಿ.ಲಕ್ಷ್ಮೀನಾರಾಯಣ್, ಸ್ಟುಡಿಯೋ ಆನಂದ್ ರನ್ನು ಗೌರವಿಸಿ ಸನ್ಮಾನಿಸಲಾಯಿತು.ತಾಪಂ ಮಾಜಿ ಸದಸ್ಯ ಡಾ.ಡಿ.ಟಿ. ವೆಂಕಟೇಶ್, ಗಿಡ್ಡಪ್ಪನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಹನುಮರಾಜು, ಡೇರಿ ಮಾಜಿ ಅಧ್ಯಕ್ಷ ಎಸ್.ವಿ.ರಮೇಶ್, ಸೂಲಿಬೆಲೆ ಗ್ರಾಪಂ ಅಧ್ಯಕ್ಷ ಜನಾರ್ಧನರೆಡ್ಡಿ, ಸಹಕಾರ ಬ್ಯಾಂಕ್ ನಿರ್ದೇಶಕ ಸೈಯದ್ ಮೆಹಬೂಬ್, ಮುತ್ಸಂದ್ರ ಆನಂದಪ್ಪ, ಚಿಕ್ಕಹರಳಗೆರೆ ಜಗದೀಶ್, ಗ್ರಾಪಂ ಸದಸ್ಯೆ ನವಿತಾ ಸುರೇಶ್, ಯನಗುಂಟೆ ರಮೇಶ್, ಬೆಟ್ಟಹಳ್ಳಿ ಮುನಿಸೊಣ್ಣಪ್ಪ, ದೇವರಾಜ್, ರಂಗಕಲಾವಿದ ಡಿ.ಲಕ್ಷ್ಮೀನಾರಾಯಣ್, ಸ್ಟುಡಿಯೋ ಆನಂದ್, ಬಾಲೇನಹಳ್ಳಿ ಗುಂಡಪ್ಪ, ಹನುಮಂತೇಗೌಡ, ಪ್ರಕಾಶ್, ಶಶಿಮಾಕನಹಳ್ಳಿ ಮುನಿರಾಜು, ಇತರರು ಇದ್ದರು.