ಹಾವೇರಿ: ನಾಲ್ಕು ಗೋಡೆಗಳ ನಡುವೆ ಕಲಾಕೃತಿಗಳನ್ನು ಇಟ್ಟುಕೊಂಡರೆ ಕಲೆ ಬೆಳೆಯುವುದಿಲ್ಲ. ಬದಲಾಗಿ ಬೇರೆ ಬೇರೆ ಸ್ಥಳಗಳಲ್ಲಿ ಪ್ರದರ್ಶನವಾದಾಗ ಅವುಗಳಿಗೆ ಮಾತು ಮತ್ತು ವಿಮರ್ಶೆ ಸಿಕ್ಕು ಕಲಾವಿದ ಆತ್ಮವಿಶ್ವಾಸದಿಂದ ಬೆಳೆಯಲು ಸಾಧ್ಯವಾಗುತ್ತದೆ ಎಂದು ಕಲಾವಿದ, ಚಿತ್ರಕಲಾ ಪರಿಷತ್ತಿನ ಕಲಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಬಾಬು ಜತ್ತಕರ ತಿಳಿಸಿದರು.ನಗರದ ನಂದಿ ಲೇಔಟ್‌ನಲ್ಲಿರುವ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಶಿರಸಿಯ ತಾರಾನಾ ಬಳಗದ ಸಹಯೋಗದಲ್ಲಿ ಏರ್ಪಡಿಸಿದ್ದ ಕಲಾವಿದ ದಂಪತಿಗಳಾದ ಗ.ಮ. ತುಂಬೆಮನಿ ಮತ್ತು ಜಯಾ ತುಂಬೆಮನಿ ಹಾಗೂ ಪವಿತ್ರಾ ಹೆಮಟೆಮನಿ ಅವರ ಲಿಪ್ಪನ್ ಆರ್ಟ್, ಮಂಡಲ್ ಆರ್ಟ್ ಕಲಾ ಪ್ರದರ್ಶನಗಳ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಕರ್ನಾಟಕದ ಲಲಿತಕಲಾ ಅಕಾಡೆಮಿ ಸದಸ್ಯರಾದ ಕರಿಯಪ್ಪ ಹಂಚಿನಮನಿ ವಹಿಸಿ ಮಾತನಾಡಿ, ಸಮಾಜದಲ್ಲಿ ಮಾನವೀಯ ಸಂಬಂಧಗಳು ಬೆಳೆಯಲು ಕಲೆಯಿಂದ ಮಾತ್ರ ಸಾಧ್ಯ. ಈ ಭಾಗದ ಕುಂಚ ಕಲಾವಿದರಿಗೆ ಒಂದು ದೊಡ್ಡ ವೇದಿಕೆ ಕೊಡುವುದೇ ಗ್ಯಾಲರಿಯ ಉದ್ದೇಶ. ಇಂತಹ ಪ್ರದರ್ಶನಗಳಿಂದ ಕಲಾವಿದನೊಬ್ಬ ತಾನೆಲ್ಲಿದ್ದೇನೆಂದು ತಿಳಿದುಕೊಳ್ಳಲು ಸಾಧ್ಯ ಎಂದರು. ಪ್ರದರ್ಶನವನ್ನು ಉದ್ದೇಶಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್.ವಿ. ಚಿನ್ನಿಕಟ್ಟಿ, ಅಂಬಿಕಾ ಹಂಚಾಟೆ, ಪ್ರಾಚಾರ್ಯ ಸೋಮನಾಥ ಡಿ., ಲೇಖಕಿ ಶೋಭಾ ಹೆಗಡೆ, ಗಣಪತಿ ಹೆಗಡೆ, ಚಿತ್ರ ಪ್ರದರ್ಶನಗಳ ಕುರಿತು ಕಲಾವಿದರಾದ ಪರಮೇಶ ಹುಲ್ಲಮನಿ, ರೇಣುಕಾ ಗುಡಿಮನಿ ಮಾತನಾಡಿದರು.ಕಲಾವಿದರಾದ ಗ.ಮ. ತುಂಬೆಮನಿ, ಜಯಾ ತುಂಬೆಮನಿ ಹಾಗೂ ಪವಿತ್ರಾ ಹೆಮಟೆಮನಿ ಅವರನ್ನು ಗ್ಯಾಲರಿ ವತಿಯಿಂದ ಸನ್ಮಾನಿಸಲಾಯಿತು. ತಾರಾ ಹೆಗಡೆ ನಿರೂಪಿಸಿದರು. ಸತೀಶ ಕುಲಕರ್ಣಿ ಸ್ವಾಗತಿಸಿದರು. ಪೂಜಾ ಹೆಗಡೆ ವಂದಿಸಿದರು. ಶರಣ ಸಾಹಿತ್ಯ ಮನುಕುಲಕ್ಕೆ ಮಾರ್ಗದರ್ಶಿ