ಸಾಲುಮರದ ತಿಮ್ಮಕ್ಕ ಜೀವನಾಧಾರಿತ ವೃಕ್ಷಮಾತೆ ಸಿನಿಮಾ ಚಿತ್ರೀಕರಣ ಸ್ಥಗಿತ

KannadaprabhaNewsNetwork |  
Published : Jun 18, 2025, 01:23 AM ISTUpdated : Jun 18, 2025, 04:51 PM IST
Camera

ಸಾರಾಂಶ

‘ವೃಕ್ಷಮಾತೆ’ ಎಂಬ ಸಿನಿಮಾವನ್ನು ಹುಲಿಕಲ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ. ಸಿನಿಮಾ ನಿರ್ಮಾಣಕ್ಕೆ ನನ್ನ ಅನುಮತಿ ಪಡೆದಿಲ್ಲ.

 ರಾಮನಗರ :  ಅನುಮತಿ ಪಡೆಯದೆ ಸಾಲುಮರದ ತಿಮ್ಮಕ್ಕ ಅವರ ಜೀವನಾಧಾರಿತ ‘ವೃಕ್ಷಮಾತೆ’ ಸಿನಿಮಾದ ಚಿತ್ರೀಕರಣ ಮಾಡುತ್ತಿರುವುದನ್ನು ಸ್ಥಗಿತಗೊಳಿಸಬೇಕು ಎಂದು ತಿಮ್ಮಕ್ಕರವರು ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಸಾಲು ಮರದ ತಿಮ್ಮಕ್ಕರವರ ಸ್ವಗ್ರಾಮ ಹುಲಿಕಲ್‌ನಲ್ಲಿ ತಿಂಗಳ ಹಿಂದೆ ಸಿನಿಮಾ ನಿರ್ದೇಶಕರಾದ ಒರಟ ಶ್ರೀ ಮತ್ತು ದಿಲೀಪ್ ಎಂಬುವರು, ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರು ನನ್ನ ಜೀವನ ಕುರಿತು ಬರೆದಿರುವ ಪುಸ್ತಕ ಆಧರಿಸಿ ‘ವೃಕ್ಷಮಾತೆ’ ಎಂಬ ಸಿನಿಮಾವನ್ನು ಹುಲಿಕಲ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ. ಸಿನಿಮಾ ನಿರ್ಮಾಣಕ್ಕೆ ನನ್ನ ಅನುಮತಿ ಪಡೆದಿಲ್ಲ. ಅಲ್ಲದೆ, ತಂಡವು ನನ್ನ ಸಿನಿಮಾ ಮಾಡುವುದು ನನಗೆ ಇಷ್ಟವಿಲ್ಲ ಎಂದು ತಿಮ್ಮಕ್ಕ ದೂರಿನಲ್ಲಿ ತಿಳಿಸಿದ್ದಾರೆ.

ಅನುಮತಿ ನೀಡದಿದ್ದರೂ ಸಿನಿಮಾ ತಂಡ ಚಿತ್ರೀಕರಣ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಮತ್ತೇನಾದರೂ ಚಿತ್ರೀಕರಣ ಮುಂದುವರಿಸಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ತಿಮ್ಮಕ್ಕ ಅವರ ದತ್ತುಪುತ್ರ ಉಮೇಶ್ ರವರು ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ. 

ಈ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ, ಅನುಮತಿ ಪಡೆದು ಚಿತ್ರೀಕರಣ ಮಾಡುವಂತೆ ಚಿತ್ರತಂಡಕ್ಕೆ ಸೂಚನೆ ನೀಡಿದ್ದಾರೆ. ಬಳಿಕ, ಚಿತ್ರತಂಡ ಶೂಟಿಂಗ್ ಸ್ಥಗಿತಗೊಳಿಸಿ ವಾಪಸ್ಸಾಗಿದೆ ಎಂದು ಮಾಗಡಿ ಡಿವೈಎಸ್ಪಿ ಪ್ರವೀಣ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಒರಟ ಶ್ರೀ ಮತ್ತು ದಿಲೀಪ್ ಎಂಬುವರು ನಮ್ಮನ್ನು ಭೇಟಿ ಮಾಡಿ ತಿಮ್ಮಕ್ಕ ಕುರಿತು ಸಿನಿಮಾ ನಿರ್ಮಾಣಕ್ಕೆ ಅನುಮತಿ ಕೋರಿದ್ದರು. ನಾವು ಅನುಮತಿ ಕೊಟ್ಟಿರಲಿಲ್ಲ. ಆದರೂ, ಸಿನಿಮಾ ಚಿತ್ರೀಕರಣ ಆರಂಭಿಸಿದ್ದರು. ಹುಲಿಕಲ್‌ನಲ್ಲಿ ಚಿತ್ರೀಕರಣ ಮಾಡುತ್ತಿರುವ ವಿಷಯ ಗೊತ್ತಾಗುತ್ತಿದ್ದಂತೆ, ಪೊಲೀಸ್ ಠಾಣೆಗೆ ತೆರಳಿ ಶೂಟಿಂಗ್ ಸ್ಥಗಿತಕ್ಕೆ ದೂರು ಕೊಟ್ಟೆವು. ಜೊತೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ನೀಡಿದ್ದೇವೆ ಎಂದು ತಿಮ್ಮಕ್ಕ ಅವರ ದತ್ತುಪುತ್ರ ಉಮೇಶ್ ತಿಳಿಸಿದ್ದಾರೆ.--

PREV
Read more Articles on

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌