ಭಾರತೀಯ ಹವಾಮಾನ ಇಲಾಖೆ ಉಡುಪಿ ಜಿಲ್ಲೆಗೆ ಕಳೆದ 3 ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಿತ್ತು, ಆದರೆ ಬುಧವಾರ ಮತ್ತು ಗುರುವಾರ ಯಲ್ಲೋ ಅಲರ್ಟ್ ಘೋಷಿಸಿದ್ದು, ಮಳೆ ಕಡಿಮೆಯಾಗುವ ಮುನ್ಸೂಚನೆ ನೀಡಿದೆ.
ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ದಿನವಿಡೀ ಬಿಡದೇ ಸುರಿದ ಮಳೆ ಸಾಕಷ್ಟು ಮನೆ, ತೋಟಗಳಿಗೆ ಹಾನಿಯನ್ನುಂಟು ಮಾಡಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು, ಸೋಮವಾರ ತಡರಾತ್ರಿ ಕುಂದಾಪುರದಲ್ಲಿ ಪ್ರವಾಹ ಆವೃತವಾಗಿದ್ದ 6 ಮನೆಗಳ ಸದಸ್ಯರನ್ನು ಸ್ಥಳಾಂತರಗೊಳಿಸಲಾಗಿತ್ತು.
ಭಾರತೀಯ ಹವಾಮಾನ ಇಲಾಖೆ ಕಳೆದ 3 ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಿತ್ತು, ಆದರೆ ಬುಧವಾರ ಮತ್ತು ಗುರುವಾರ ಯಲ್ಲೋ ಅಲರ್ಟ್ ಘೋಷಿಸಿದ್ದು, ಮಳೆ ಕಡಿಮೆಯಾಗುವ ಮುನ್ಸೂಚನೆ ನೀಡಿದೆ.ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 102.60 ಮಿ.ಮೀ. ಮಳೆ ದಾಖಲಾಗಿದೆ. ಈ ಮಳೆಗೆ ಜಿಲ್ಲೆಯಲ್ಲಿ 22 ಮನೆಗಳಿಗೆ, 6 ತೋಟಗಳಿಗೆ ಲಕ್ಷಾಂತರ ರು, ಹಾನಿಯಾಗಿದೆ. ಕುಂದಾಪುರದಲ್ಲಿ 6 ಮನೆಗಳಿಗೆ ಪ್ರವಾಹದ ನೀರು ನುಗ್ಗಿ ದಿನಬಳಕೆಯ ಗೃಹೋಪಯೋಗಿ ವಸ್ತುಗಳು, ದೀನಸಿ ಸಾಮಾನುಗಳು ಹಾಳಾಗಿವೆ.ಕುಂದಾಪುರ ತಾಲೂಕಿನಲ್ಲಿ 9 ಮನೆಗಳಿಗೆ 2.95 ಲಕ್ಷ ರು., ಉಡುಪಿ ತಾಲೂಕಿನಲ್ಲಿ 3 ಮನೆಗಳಿಗೆ 3.55 ಲಕ್ಷ ರು., ಬೈಂದೂರು ತಾಲೂಕಿನಲ್ಲಿ 3 ಮನೆಗಳಿಗೆ 3.60 ಲಕ್ಷ ರು., ಕಾಪು ತಾಲೂಕಿನಲ್ಲಿ 5 ಮನೆಗಳಿಗೆ 1.40 ಲಕ್ಷ ರು. ಮತ್ತು ಕಾರ್ಕಳ ತಾಲೂಕಿನಲ್ಲಿ 2 ಮನೆಗಳಿಗೆ 32 ಸಾವಿರ ರು. ಸೇರಿ ಒಟ್ಟು ಸುಮಾರು 11.82 ಲಕ್ಷ ರು. ಗಳಷ್ಟು ಹಾನಿ ಸಂಭವಿಸಿದೆ.ಕುಂದಾಪುರ ತಾಲೂಕಿನ ಯಡಾಡಿಮುತ್ಯಾಡಿ ಗ್ರಾಮದ 4 ಮನೆ, ಆಲೂರು ಮತ್ತು ಹಕ್ಲಾಡಿ ಗ್ರಾಮಗಳ ತಲಾ ಒಂದೊಂದು ಮನೆಗಳಿಗೆ ನೆರೆ ನೀರು ನುಗ್ಗಿದ್ದು, ಅವರಿಗೆ 58 ಸಾವಿರ ರು.ಗಳ ಗೃಹೋಪಯೋಗಿ ಸಾಮಾಗ್ರಿಗಳು ಮತ್ತು ದಿನಬಳಕೆಯ ದೀನಸಿ ವಸ್ತುಗಳು ಹಾಳಾಗಿವೆ.ಕುಂದಾಪುರ ತಾಲೂಕಿನ ಕುಳಂಜೆ, ಕೋಣಿ ಮತ್ತು ಬೆಳ್ಳಾಳ ಗ್ರಾಮಗಳ 3 ಮಂದಿ ಕೃಷಿಕರ ತೆಂಗು ಮತ್ತು ಅಡಕೆ ಮರಗಳು ಗಾಳಿಮಳೆಗೆ ಬಿದ್ದು ಹೋಗಿ 50 ಸಾವಿರ ರು. ಹಾಗೂ ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ 2 ಮತ್ತು ನೂರಾಲ್‌ಬೆಚ್ಚು ಗ್ರಾಮದ ಒಬ್ಬ ಕೃಷಿಕರ ತೋಟಗಳಿಗೆ 57 ಸಾವಿರ ರು.ಗಳಷ್ಟು ಹಾನಿ ಸಂಭವಿಸಿದೆ.
...........................
ಮಳೆ ಇಳಿಕೆ, ಕಡಲಬ್ಬರ ಏರಿಕೆ !
ಕಳೆದೊಂದು ವಾರದಿಂದ ಆತಂಕಕ್ಕೆ ಕಾರಣವಾಗಿದ್ದ ಮಳೆ ಇನ್ನೊಂದೆರಡು ದಿನಗಳಲ್ಲಿ ಕಡಿಮೆಯಾಗುವ ಬಗ್ಗೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಆದರೆ ಕಡಲಬ್ಬರ ಹೆಚ್ಚಾಗುವ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ.ಸಮುದ್ರದಲ್ಲಿ ಭಾರೀ ಗಾಳಿ ಬೀಸುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ಸಮುದ್ರ ತೀರದಲ್ಲಿ 4.1 ರಿಂದ 4.4 ಮೀಟರ್ ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆಗಳಿವೆ. ಆದ್ದರಿಂದ ಕಡಲ ತೀರದ ನಿವಾಸಗಳಿಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ.ಈ ಹಿನ್ನೆಲೆಯಲ್ಲಿ ಮೀನುಗಾರರು ಕಡಲಿಗಿಳಿಯದಂತೆ, ಪ್ರವಾಸಿಗರು ಕಡಲ ತೀರಕ್ಕೆ ಬಾರದಂತೆ ಸೂಚಿಸಿರುವ ಜಿಲ್ಲಾಡಳಿತ ಆಯಾ ವ್ಯಾಪ್ತಿಯಲ್ಲಿ ತಹಸೀಲ್ದಾರ್ ಅವರು ಸಮುದ್ರ ತೀರದ ಬಗ್ಗೆ ಗಮನ ಇರಿಸುವಂತೆ, ಸಂಬಂಧಪಟ್ಟ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆ, ಯಾವುದೇ ಪರಿಸ್ಥಿತಿ ಎದುರಿಸಲು ವಿಕೋಪ ನಿರ್ವಹಣಾ ಸಮಿತಿಯು ಸನ್ನದ್ಧವಾಗಿರುವಂತೆ ಆದೇಶಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.