ಶಿರಸಿ: ಕಳೆದ ೪ ತಿಂಗಳಿನಿಂದ ತಹಸೀಲ್ದಾರ ಹುದ್ದೆ ಖಾಲಿ ಇದ್ದರೂ ಜನಪ್ರತಿನಿಧಿಗಳು ಗಮನ ವಹಿಸುತ್ತಿಲ್ಲ. ಇದರಿಂದ ಸಾರ್ವಜನಿಕರ ಕೆಲಸ ಕುಂಠಿತವಾಗಿದೆ. ತಕ್ಷಣ ಶಿರಸಿಗೆ ಕಾಯಂ ತಹಸೀಲ್ದಾರರನ್ನು ನೇಮಕಗೊಳಿಸಬೇಕು ಎಂದು ಅನಂತಮೂರ್ತಿ ಹೆಗಡೆ ಆಗ್ರಹಿಸಿದರು.
ತಹಸೀಲ್ದಾರ ಕೇವಲ ಒಬ್ಬ ಅಧಿಕಾರಿಯಲ್ಲ. ಇಡೀ ತಾಲೂಕಿಗೆ ಪ್ರಥಮ ಅಧಿಕಾರಿ, ದಂಡಾಧಿಕಾರಿಯಾಗಿದ್ದಾರೆ. ಕಾಯಂ ತಹಸೀಲ್ದಾರ ಇಲ್ಲದಿರುವುದರಿಂದ ನೂರಾರು ಫೈಲ್ ಗಳು ಪೆಡಿಂಗ್ ಬಿದ್ದಿವೆ. ಜನರ ಕೆಲಸವಾಗದೇ ಕಣ್ಣೀರು ಹಾಕುವಂತಾಗಿದ್ದು, ಹಿಂದಿನ ತಹಸೀಲ್ದಾರ ವರ್ಗಾವಣೆ ಅಧಿಸೂಚನೆಯಾಗಿ ೪ ತಿಂಗಳು ಕಳೆದರೂ ಒಬ್ಬ ತಹಸೀಲ್ದಾರ ಇಲ್ಲದೆ ಜನರಿಗೆ ಹಿಂದೆ ಕೊಡುವುದು, ಬಡವರಿಗೆ ಕಣ್ಣೀರು ಹಾಕಿಸುವುದು ನಿಮಗೆ ಶೋಭೆ ತರುವುದೇ? ಬೇಜವಾಬ್ದಾರಿ ಶಾಸಕರು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುವಂತಾಗಿದೆ. ತಹಸೀಲ್ದಾರ ನೇಮಕ ಮಾಡುವಂತೆ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿ ಸಲ್ಲಿಸಿ ಒಂದು ತಿಂಗಳು ಕಳೆದರೂ ಕಿಮ್ಮತ್ತು ನೀಡದಿರುವುದು ನೋವಿನ ಸಂಗತಿ. ಶಿರಸಿ ಸಹಾಯ ಆಯುಕ್ತರನ್ನು ಭಟ್ಕಳದ ಪ್ರಭಾರಿ ಸಹಾಯಕ ಆಯುಕ್ತರನ್ನಾಗಿ ನೇಮಕ ಮಾಡಿದ್ದಾರೆ. ನಗರಸಭೆಯ ಪೌರಾಯುಕ್ತರು ಪ್ರಭಾರಿ ಅಧಿಕಾರಿ ಇದ್ದಾರೆ. ತಾಲೂಕಿನಲ್ಲಿ ತಹಸೀಲ್ದಾರ ಮತ್ತು ಇತರ ತಾಲೂಕು ಮಟ್ಟದ ಅಧಿಕಾರಿ ಹುದ್ದೆ ಖಾಲಿ ಇರುವುದರಿಂದ ಜನಸಾಮಾನ್ಯರು ತೊಂದರೆಗೆ ಸಿಲುಕುವಂತಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಮೇಶ ನಾಯ್ಕ ಕುಪ್ಪಳ್ಳಿ, ನಾರಾಯಣ ಹೆಗಡೆ, ಶೋಭಾ ನಾಯ್ಕ, ಉಷಾ ಹೆಗಡೆ, ರಾಘು ನಾಯ್ಕ ಮತ್ತಿತರರು ಇದ್ದರು.ಕಾರವಾರ ಚಲೋ!: ಶಿರಸಿಗೆ ಕಾಯಂ ತಹಸೀಲ್ದಾರ ನೇಮಕ ಮಾಡುವಂತೆ ಜೂ.೨೩ ರಂದು ಕಾರವಾರ ಚಲೋ ಹಮ್ಮಿಕೊಂಡು ಜಿಲ್ಲಾಧಿಕಾರಿಗಳನ್ನು ನೇಮಕ ಮಾಡುವಂತೆ ವಿನಂತಿಸಲಾಗುತ್ತದೆ. ಬೆಳಗ್ಗೆ ೮ ಗಂಟೆಗೆ ಶಿರಸಿಯಿಂದ ಬಸ್ ತೆರಳುತ್ತದೆ. ಆಗಮಿಸುವವರು ಮುಂಚಿತವಾಗಿ ತಿಳಿಸಬೇಕು. ಹೋರಾಟದಲ್ಲಿ ನಮ್ಮ ಜತೆ ಕೈಜೋಡಿಸಬೇಕು ಎಂದು ವಿನಂತಿಸಿದರು.