ಬಾಗೇಪಲ್ಲಿ ಇನ್ನು ಭಾಗ್ಯನಗರ : ನಾಳೆ ಸಂಪುಟ ಸಭೆಯಲ್ಲಿ ತೀರ್ಮಾನ?

KannadaprabhaNewsNetwork |  
Published : Jun 18, 2025, 01:16 AM ISTUpdated : Jun 18, 2025, 05:42 AM IST
Siddaramaiah action About Stampede Case

ಸಾರಾಂಶ

 ಬಾಗೇಪಲ್ಲಿ ಹೆಸರನ್ನು ‘ಭಾಗ್ಯನಗರ’ ಎಂದು ಮರು ನಾಮಕರಣ ಮಾಡುವುದು ಸೇರಿದಂತೆ ಬೆಂಗಳೂರು ಕಂದಾಯ ವಲಯ ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಕೆಲವು ಮಹತ್ವದ ಯೋಜನೆಗಳನ್ನು ನೀಡುವ ಬಗ್ಗೆ ಗುರುವಾರ ನಂದಿಬೆಟ್ಟದಲ್ಲಿ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆ 

 ಬೆಂಗಳೂರು :  ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಹೆಸರನ್ನು ‘ಭಾಗ್ಯನಗರ’ ಎಂದು ಮರು ನಾಮಕರಣ ಮಾಡುವುದು ಸೇರಿದಂತೆ ಬೆಂಗಳೂರು ಕಂದಾಯ ವಲಯ ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಕೆಲವು ಮಹತ್ವದ ಯೋಜನೆಗಳನ್ನು ನೀಡುವ ಬಗ್ಗೆ ಗುರುವಾರ ನಂದಿಬೆಟ್ಟದಲ್ಲಿ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆಯಿದೆ.

ಎತ್ತಿನಹೊಳೆ ಕುಡಿಯುವ ನೀರು ಪೂರೈಕೆ ಯೋಜನೆಯ ಭೂಸ್ವಾಧೀನ ಪರಿಹಾರ ಸಮಸ್ಯೆ ಇತ್ಯರ್ಥಪಡಿಸುವುದು. ಚಿಂತಾಮಣಿ ಹಾಗೂ ಶಿಡ್ಲಘಟ್ಟದ 119 ಕೆರೆಗಳಿಗೆ ಹೆಬ್ಬಾಳ-ನಾಗವಾರ ವ್ಯಾಲಿಯ ಸಂಸ್ಕರಿತ ತ್ಯಾಜ್ಯನೀರು ಪೂರೈಸುವುದು. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕು ಭಕ್ತರಹಳ್ಳಿ ಅರಸೀಕೆರೆಯ ಕೆಳಭಾಗದಲ್ಲಿ 36 ಕೋಟಿ ರು. ವೆಚ್ಚದಲ್ಲಿ ಹೊಸ ಕೆರೆ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ನಿರೀಕ್ಷೆಯಿದೆ.

ಬಾಗೇಪಲ್ಲಿ ಇನ್ನು ಭಾಗ್ಯನಗರ?:

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ, ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ತಾಲೂಕು ಬಾಗೇಪಲ್ಲಿ. ಪಲ್ಲಿ ಎಂದರೆ ತೆಲುಗು ಭಾಷೆಯಲ್ಲಿ ಹಳ್ಳಿ ಎಂದರ್ಥ. ಹೀಗಾಗಿ ಈ ಹೆಸರನ್ನು ಬದಲಿಸಬೇಕು ಎಂದು 2020ರಲ್ಲಿ ತಾಲೂಕಿನಲ್ಲಿ ಅಭಿಯಾನವೇ ಶುರುವಾಗಿತ್ತು. ಬಾಗೇಪಲ್ಲಿಯನ್ನು ಭಾಗ್ಯನಗರ ಎಂದು ಬದಲಿಸುವಂತೆ ಒತ್ತಾಯ ಕೇಳಿಬಂದಿತ್ತು. ಇದೀಗ ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಇನ್ನು ಮುಖ್ಯವಾಗಿ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ ಸೇರಿ ವಿವಿಧ ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ಉದ್ದೇಶದಿಂದ ಕೈಗೊಂಡಿರುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನಾ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹಾಸನ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪಡಿಸಿಕೊಂಡಿರುವ ಕೆಲ ಜಮೀನಿಗೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಎರಡೂ ಮಾಲೀಕತ್ವ ಕ್ಲೇಮು ಮಾಡಿವೆ. ಈ ಬಗ್ಗೆ ಯಾರಿಗೆ ಪರಿಹಾರ ನೀಡಬೇಕು ಎಂಬುದನ್ನು ಇತ್ಯರ್ಥಗೊಳಿಸಿ ಸಮಸ್ಯೆ ಬಗೆಹರಿಸಲು ತೀರ್ಮಾನಿಸುವ ಸಾಧ್ಯತೆಯಿದೆ.

ಹೆಬ್ಬಾಳ-ನಾಗವಾರ ವ್ಯಾಲಿಯ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನುಶಿಡ್ಲಘಟ್ಟ ತಾಲೂಕಿನ 45 ಕೆರೆಗಳಿಗೆ ಮತ್ತು ಚಿಂತಾಮಣಿ ತಾಲೂಕಿನ 119 ಕೆರೆಗಳಿಗೆ ಸೇರಿ ಒಟ್ಟು 164 ಕೆರೆಗಳಿಗೆ ನೀರು ತುಂಬಿಸಲು 237 ಕೋಟಿ ರು.ಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗುತ್ತದೆ.

ಕೆಂಪೇಗೌಡ ಕೋಟೆ ನವೀಕರಣ:

ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಮಾಗಡಿ ಪಟ್ಟಣದ ನಾಡಪ್ರಭು ಕೆಂಪೇಗೌಡ ಕೋಟೆಯ ನವೀಕರಣ ಮತ್ತು ಸಮಗ್ರ ಅಭಿವೃದ್ಧಿ ಕಾಮಗಾರಿಯನ್ನು 103 ಕೋಟಿ ರು. ವೆಚ್ಚದಲ್ಲಿ ಮಾಡಲು ತೀರ್ಮಾನಿಸುವ ಸಾಧ್ಯತೆಯಿದೆ.

ಉತ್ತರ ಕನ್ನಡಜಿಲ್ಲೆಯ ಹೊನ್ನಾವರ ಸಮುದ್ರ ತೀರದ 6 ಕಿ.ಮೀ.ವರೆಗಿನ ಪ್ರದೇಶ ಹಾಗೂ ಅರಣ್ಯ ಪ್ರದೇಶ ಒಳಗೊಂಡಂತೆ ಒಟ್ಟು 5,959 ಹೆಕ್ಟೇರ್‌ ಪ್ರದೇಶವನ್ನು ಅಪ್ಸರಕೊಂಡ ಮುಗಲಿ ಕಡಲ ವನ್ಯಜೀವಿ ಧಾಮ ಎಂದು ಘೋಷಿಸುವ ಬಗ್ಗೆ ಚರ್ಚೆಯಾಗಲಿದೆ.

ಗಣಿ ಅಕ್ರಮ ಲೋಕಾಯುಕ್ತ ಎಸ್‌ಐಟಿ 1 ವರ್ಷ ವಿಸ್ತರಣೆ?

ರಾಜ್ಯದ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ಸಿ ದರ್ಜೆಯ 10 ಗಣಿಗಳಲ್ಲಿ ಅಕ್ರಮ ಗಣಿಗಾರಿಕೆ ಕೈಗೊಂಡಿರುವ ಪ್ರಕರಣದ ಬಗೆಗಿನ ತನಿಖೆಗೆ ರಚಿಸಿದ್ದ ಲೋಕಾಯುಕ್ತ ವಿಶೇಷ ತನಿಖಾ ತಂಡದ ಅವಧಿಯನ್ನು ಜು.1ರಿಂದ ಮತ್ತೊಂದು ವರ್ಷದ ಅವಧಿಗೆ ವಿಸ್ತರಿಸುವ ಬಗ್ಗೆ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆಯಿದೆ.

ಗಣಿ ಪ್ರದೇಶದಲ್ಲಿ ಶೇ. 15ಕ್ಕಿಂತ ಹೆಚ್ಚು ಪ್ರಮಾಣದ ನಿಯಮ ಉಲ್ಲಂಘನೆ, ಗಡಿಯ ಹೊರಗೆ ಅಕ್ರಮ ಗಣಿಗಾರಿಕೆ ನಡೆದ ಗಣಿ ಗುತ್ತಿಗೆಗಳನ್ನು ಸಿ ದರ್ಜೆಯಡಿ ಗುರುತಿಸಲಾಗಿತ್ತು. ಈ ಪೈಕಿ 10 ಗಣಿ ಪ್ರದೇಶದಲ್ಲಿ ನಡೆದಿರುವ ಅಕ್ರಮಗಳ ತನಿಖೆಯನ್ನು ಎಸ್‌ಐಟಿಗೆ ವಹಿಸಲು ತೀರ್ಮಾನಿಸಲಾಗಿತ್ತು. ಇದರ ಅವಧಿಯನ್ನು ವಿಸ್ತರಿಸಲು ಸರ್ಕಾರ ಮುಂದಾಗಿದೆ.

PREV
Read more Articles on

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ