ಕಲಾವಿದರು ಎಲ್ಲ ಸಮುದಾಯಕ್ಕೆ ಸೇರಿದವರು: ರಿಷಬ್ ಶೆಟ್ಟಿ

KannadaprabhaNewsNetwork | Published : Oct 31, 2023 1:15 AM

ಸಾರಾಂಶ

ಕಾಂತಾರಾ-2 ನೀವೆಲ್ಲರೂ ಈಗಾಗಲೇ ನೋಡಿದ್ದೀರಿ, ಕಾಂತಾರ-1ರ ಶೂಟಿಂಗ್ ಶುರು ಮಾಡುತ್ತಿದ್ದೇನೆ ಎಂದು ಖ್ಯಾತ ನಿರ್ದೇಶಕ, ನಟ ರಿಷಬ್ ಶೆಟ್ಟಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ ನಾನು ರಿಷಬ್ ಶೆಟ್ಟಿ ಆದರೂ ಕೇವಲ ಒಂದು ಸಮುದಾಯಕ್ಕೆ ಸೇರಿದವನಲ್ಲ, ಬೇರೆ ಸಮುದಾಯಗಳ ಬಗ್ಗೆ ನನ್ನಲ್ಲಿ ಯಾವುದೇ ಭೇದಭಾವಗಳು ಇಲ್ಲ. ನಾವು ಕಲಾವಿದರು, ಸಮಾಜದ ಎಲ್ಲ ಸಮುದಾಯಕ್ಕೆ ಸೇರಿದವರು ಎಂದು ಖ್ಯಾತ ನಿರ್ದೇಶಕ, ನಟ ರಿಷಬ್ ಶೆಟ್ಟಿ ಹೇಳಿದ್ದಾರೆ. ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ನಡೆದ ವಿಶ್ವ ಬಂಟರ ಸಮ್ಮೇಳನದ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸುಮಾರು ಒಂದು ವರ್ಷದಿಂದ ಬಂಟರ ಸಮುದಾಯದ ಕಾರ್ಯಕ್ರಮಗಳಿಗೆ ಆಹ್ವಾನ ಬರುತ್ತಿತ್ತು. ಪ್ರತಿ ಬಾರಿ ನಾನು ತಪ್ಪಿಸಿಕೊಳ್ಳುತ್ತಿದ್ದೆ, ಈಗ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ನನಗೆ ಖುಷಿಯಾಗುತ್ತಿದೆ ಎಂದರು. ಸಂಘಸಂಸ್ಥೆಗಳು ವಿದ್ಯೆ ಅಥವಾ ಸಮಾಜದಲ್ಲಿರುವರ ಕಷ್ಟಕ್ಕೆ ಸಹಾಯ ಆಗಬೇಕು. ಜಾತಿ ಮತ್ತು ಸಮುದಾಯವನ್ನು ಮೀರಿ ಸಮಾಜದ ಎಲ್ಲ ವರ್ಗಗಳಿಗೂ ಸಹಾಯಗಳು ಆಗಬೇಕು ಎಂದ ರಿಷಬ್, ಇತರ ಸಮುದಾಯಗಳಿಗೂ ಸಹಾಯ ಮಾಡುವ ಶಕ್ತಿ ಬಂಟರಿಗಿದೆ, ಇವತ್ತಿನವರೆಗೂ ಅದನ್ನು ಮಾಡುತ್ತಾ ಬಂದಿದೆ ಎಂದರು. ಕಾಂತಾರಾ-2 ನೀವೆಲ್ಲರೂ ಈಗಾಗಲೇ ನೋಡಿದ್ದೀರಿ, ಕಾಂತಾರ-1ರ ಶೂಟಿಂಗ್ ಶುರು ಮಾಡುತ್ತಿದ್ದೇನೆ, ಆದ್ದರಿಂದ ಇನ್ನೊಂದು ವರ್ಷ ಯಾವುದೇ ಕಾರ್ಯಕ್ರಮಕ್ಕೆ ಬರುವುಕ್ಕೆ ಆಗೋದಿಲ್ಲ, ಕ್ಷಮಿಸಿ. ಶೂಟಿಂಗ್ ಮುಗಿದ ಮೇಲೆ ಮತ್ತೆ ಕಾರ್ಯಕ್ರಮಗಳಲ್ಲಿ ಸಿಗುತ್ತೇನೆ ಎಂದವರು ಭರವಸೆ ನೀಡಿದರು.

Share this article