ಬಳ್ಳಾರಿ: ದುಸ್ತರವಾದ ಕಲಾವಿದರ ಬದುಕು ಹಸನಾಗಲು ದಾನಿಗಳು ನೆರವಾಗಬೇಕು. ಕಲಾ ಪ್ರಕಾರಗಳ ಉಳಿವಿಗೆ ಪ್ರತಿಯೊಬ್ಬರೂ ಸಹಕರಿಸುವಂತಾಗಬೇಕು ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ.ಎಚ್.ಎಂ.ಬಸವರಾಜ್ ತಿಳಿಸಿದರು.
ಕಲಾವಿದರಿಗೆ ಮಾಶಾಸನ ಸೇರಿದಂತೆ ವಿವಿಧ ಸೌಲಭ್ಯಗಳು ಸಕಾಲಕ್ಕೆ ದೊರೆಯುವಂತಾಗಬೇಕು. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಯಮಗಳು ಸರಳೀಕರಣಗೊಳ್ಳಬೇಕು. ಕಲಾವಿದರ ಮಾಶಸನವನ್ನು 5 ಸಾವಿರ ರು.ಗಳಿಗೆ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ದಿನದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಕಲಾವಿದರ ಜೀವನ ನಿರ್ವಹಣೆ ಕಷ್ಟಸಾಧ್ಯ ಎನಿಸಿದೆ. ಸರ್ಕಾರ ಈ ಬಗ್ಗೆ ಗಂಭೀರವಾದ ಚಿಂತನೆ ನಡೆಸಬೇಕು. ಕಲಾವಿದರು ಬದುಕಿದರೆ ಮಾತ್ರ ಕಲೆ ಬದುಕುಳಿಯಲು ಸಾಧ್ಯವಿದೆ. ಈ ಹಿನ್ನಲೆಯಲ್ಲಿ ಕಲಾವಿದರ ನೆರವಿಗೆ ಸರ್ಕಾರ ಮುಂದಾಗಬೇಕು. ಪಾರಂಪರಿಕ ಕಲಾ ಪ್ರಕಾರಗಳ ಉಳಿವಿಗೆ ವಿಶೇಷ ಯೋಜನೆ ರೂಪಿಸಿ, ಕಲೆ ಹಾಗೂ ಕಲಾವಿದರನ್ನು ಪೋಷಿಸಬೇಕು. ಕಲಾಸಕ್ತರು ಯಾವುದೇ ನಾಟಕ ಅಥವಾ ಬಯಲಾಟ ಪ್ರದರ್ಶನ ನೀಡಲು ಲಕ್ಷಾಂತರ ರು. ವ್ಯಯಿಸಬೇಕಾಗಿದೆ. ಹಣ ಕಳೆದುಕೊಂಡು ಕಲೆಯನ್ನು ಉಳಿಸುವ ಕೆಲಸ ಮಾಡಲು ಅಸಾಧ್ಯ. ಯಾವುದೇ ಕಲಾ ಪ್ರಕಾರ ಸದಾ ಮುನ್ನಲೆ ಕಾಯ್ದುಕೊಳ್ಳಬೇಕಾದರೆ ಸರ್ಕಾರದ ನೆರವು ಹಾಗೂ ಪ್ರೋತ್ಸಾಹ ಅಗತ್ಯವಿರುತ್ತದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳು ಮಾತಾನಾಡಿ, ಗ್ರಾಮೀಣ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಸಂಘ ಸಂಸ್ಥೆಗಳು ಮಾಡಬೇಕು. ಎಲೆ ಮರೆಯ ಕಾಯಿಯಂತಿರುವ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು. ಅಲಾಪ್ ಸಂಗೀತ ಕಲಾ ಟ್ರಸ್ಟ್ ಅಧ್ಯಕ್ಷ ರಮಣಪ್ಪ ಭಜಂತ್ರಿ ಅವರು ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು. ಎನ್. ಬಸವರಾಜ್ ಮತ್ತು ತಂಡದವರು ವಚನ ಗಾಯನ ಮಾಡಿದರು.
ಜಡೇಶ್ ಎಮ್ಮಿಗನೂರ್ ಮತ್ತು ತಂಡದವರು ಜಾನಪದ ಗೀತೆಗಳನ್ನು ಹಾಡಿದರು. ಶಿವಕುಮಾರ್ ಹಾಗೂ ಸುಧಾಕರ್ ಅವರು ಕಿ-ಬೋರ್ಡ್ ಹಾಗೂ ತಬಲಾ ಸಾಥ್ ನೀಡಿದರು. ವೈ. ಪ್ರಭು ಮತ್ತು ತಂಡದವರು "ಪುಣ್ಯಕೋಟಿ " ತೊಗಲು ಗೊಂಬೆ ಪ್ರದರ್ಶನ ನೀಡಿದರು. ಸಂಗೀತ ಕಲಾವಿದೆ ಸಾಯಿ ಶೃತಿ ಹಂದ್ಯಾಳು, ಗಾಯಕ ಜಡೇಶ ಎಮ್ಮಿಗನೂರು, ಶ್ರೀಶೈಲ ಭ್ರಮರಾಂಬಿಕಾ ಮಲ್ಲಿಕಾರ್ಜುನ ಸ್ವಾಮಿ ಶಿವ ದೀಕ್ಷಾ ಮಂದಿರದ ಅಧ್ಯಕ್ಷ ಕೆ.ರಾಜಶೇಖರ್ ಗೌಡ, ಹಿರಿಯ ತೊಗಲುಗೊಂಬೆ ಕಲಾವಿದ ಕೆ ಹೊನ್ನೂರ್ ಸ್ವಾಮಿ, ನಾಗನಗೌಡ, ಲಾಲ್‌ರೆಡ್ಡಿ, ಕೆ.ಪಂಪಾಪತಿ, ಅರುಣ್ ಗುರುನಾಥ ಭಟ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.