ಗದಗ: ಶಾಲಾ ಮಕ್ಕಳ ಸಾರಿಗೆ ಸುರಕ್ಷತೆಯೇ ಶಿಕ್ಷಣ ಸಂಸ್ಥೆಗಳ ಪ್ರಥಮಾದ್ಯತೆಯಾಗಿರಲಿ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ಸ್ಪಷ್ಟಪಡಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಮುಖ್ಯಸ್ಥರೊಂದಿಗೆ ನಡೆದ ಮಕ್ಕಳ ಸುರಕ್ಷತೆ, ವಿಶೇಷವಾಗಿ ಶಾಲಾ ಮಕ್ಕಳ ಸುರಕ್ಷಿತ ಸಾರಿಗೆ ವ್ಯವಸ್ಥೆ ಕುರಿತು ನಡೆದ ಸಭೆ ಉದ್ಘಾಟಿಸಿ ಮಾತನಾಡಿದರು.
ಅಟೋಗಳ ಮೂಲಕ ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯುವ ಸಂದರ್ಭದಲ್ಲಿ ಅಟೋ ಚಾಲಕರು ನಿಗದಿತ ಸಂಖ್ಯೆಗಿಂತ ಅಧಿಕ ಮಕ್ಕಳನ್ನು ಕರೆದುಕೊಂಡು ಹೋಗಬಾರದು. ಸುರಕ್ಷತೆಗೆ ಕ್ರಮ ವಹಿಸಿ ನಿಧಾನವಾಗಿ ಮಕ್ಕಳನ್ನು ಶಾಲೆಗಳಿಗೆ ತಲುಪಿಸುವ ಹಾಗೂ ಮನೆಗೆ ಕರೆದೊಯ್ಯುವ ಜವಾಬ್ದಾರಿ ವಾಹನ ಚಾಲಕರದ್ದಾಗಿರುತ್ತದೆ ಎಂದರು.
ಕನಕದಾಸ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರವಿ ದಂಡಿನ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿನ ಶಾಲಾ ವಾಹನಗಳ ಸಂಪೂರ್ಣ ಸುರಕ್ಷತೆಗೆ ಪ್ರಥಮಾದ್ಯತೆ ನೀಡಬೇಕಿದೆ. ಪ್ರತಿ ಮಗುವಿನ ಜೀವವೂ ಅತ್ಯಮೂಲ್ಯ. ನಿರ್ಲಕ್ಷ್ಯ ವಾಹನ ಚಲಾವಣೆ ಹಾಗೂ ವರ್ತನೆ ಸಹಿಸಲಾಗದು. ಎಲ್ಲ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ನಮ್ಮ ಸಂಸ್ಥೆಯಲ್ಲಿನ ಮಕ್ಕಳ ಆರೋಗ್ಯ ಹಾಗೂ ಸೂಕ್ತ ಸಾರಿಗೆ ಸುರಕ್ಷತೆಗೆ ಆದ್ಯತೆ ವಹಿಸುವ ಮೂಲಕ ನಾಡಿನ ಮುಂದಿನ ಪ್ರಜೆಗಳ ಭವಿಷ್ಯ ಉಜ್ವಲಗೊಳಿಸಲು ಶ್ರಮಿಸೋಣ ಎಂದರು.ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ ಅವರು, ಮಕ್ಕಳ ಸುರಕ್ಷಿತ ಸಾರಿಗೆ ಕುರಿತು ಶಾಲಾ ಸಂಸ್ಥೆಯ ಮುಖ್ಯಸ್ಥರು ವಹಿಸಬೇಕಾದ ಕ್ರಮಗಳ ಕುರಿತು ಸವಿಸ್ತಾರವಾಗಿ ತಿಳಿಸಿಕೊಟ್ಟರು.
ಈ ವೇಳೆ ಪ್ರೊ. ಕೆ.ಎಚ್. ಬೇಲೂರ ಸೇರಿದಂತೆ ಶಿಕ್ಷಣ ಇಲಾಖೆ, ಸಾರಿಗೆ, ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಅಧಿಕಾರಿಗಳು ಇದ್ದರು.