ಸವಣೂರು: ಪಟ್ಟಣದ ಉರ್ದು ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದಡಿ ಶಿಕ್ಷಕ ಜಗದೀಶ ಒಗ್ಗಣ್ಣನವರ ಮೇಲೆ ಹಲ್ಲೆ ನಡೆಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಡಿ ಶಾಲೆಯ ಮುಖ್ಯಗುರು ರಾಜೇಸಾಬ ಸಂಕನೂರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ ದಂಡಿನ ಆದೇಶ ಹೊರಡಿಸಿದ್ದಾರೆ. 2025ನೇ ಶೈಕ್ಷಣಿಕ ವರ್ಷಕ್ಕೆ ಶಾಲೆಯಲ್ಲಿ ಎಸ್‌ಡಿಎಂಸಿ ರಚನೆ ಗೊಂದಲ, ಶಾಲೆಯಲ್ಲಿನ ಕರ್ತವ್ಯ ನಿರತ ಸಹ ಶಿಕ್ಷಕರ ನಡುವೆ ಹೊಂದಾಣಿಕೆ ಇಲ್ಲದಿರುವುದು ಹಾಗೂ ಘಟನೆ ನಡೆದ ಡಿ.10ರಂದು ರಜೆಯ ಮೇಲೆ ಇರುವುದು, ಕಳೆದ ಮೂರು, ನಾಲ್ಕು ತಿಂಗಳಿನಿಂದ ಘಟನೆ ಮಾಹಿತಿ ಇದ್ದರೂ ಇದನ್ನು ಗಮನಿಸದೆ ಸುಮ್ಮನಿರುವುದು, ಇಲಾಖೆಗೆ ವಿಷಯವನ್ನು ಗಮನಕ್ಕೆ ತರದೆ ಇರುವುದು ಸೇರಿದಂತೆ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.