ಕಾರಟಗಿ: ಕೊಪ್ಪಳ ಜಿಲ್ಲೆಯ ಕನಕಗಿರಿ ಮತ್ತು ಕಾರಟಗಿ ತಾಲೂಕುಗಳಲ್ಲಿ ಈಗ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಹರಿದು ಬರುತ್ತಿದೆ ಎಂದು ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಕಾರಟಗಿ ಇತಿಹಾಸದಲ್ಲಿ ಹೊಸ ಮೈಲುಗಲ್ಲು ನಿರ್ಮಾಣವಾಗುತ್ತಿದೆ. ತಾಲೂಕು ಜತೆಗೆ ಬೇಡಿಕೆಯಂತೆ ನೂರು ಹಾಸಿಗೆ ಆಸ್ಪತ್ರೆ ನಿಮಾರ್ಣಕ್ಕೆ ಸಿದ್ಧವಾಗಿದೆ. ಶೀಘ್ರದಲ್ಲಿ ಕನಕಗಿರಿ ಹೊಸ ಬಸ್ ಡಿಪೋ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು.
ಪ್ರಜಾಸೌಧ: ಒಟ್ಟು ೧೨ ಎಕರೆ ಭೂಮಿಯಲ್ಲಿ ಎರಡು ಎಕರೆ ತಹಸೀಲ್ದಾರ್ ಕಚೇರಿ, ೬ ಎಕರೆ ತಾಲೂಕು ಕ್ರೀಡಾಂಗಣ, ೨ ಎಕರೆ ಕೋರ್ಟ್ ನಿರ್ಮಾಣ, ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಸುಮಾರು ₹೭ ಕೋಟಿ ಮಂಜೂರಾಗಿದೆ. ಉಳಿದ ಎರಡು ಎಕರೆ ಪ್ರದೇಶದಲ್ಲಿ ಕಂದಾಯ ಇಲಾಖೆ ನೌಕರರ ವಸತಿ ಸಮುಚ್ಛಯ, ಬಾಕಿ ಕಚೇರಿ ನಿರ್ಮಾಣಕ್ಕೆ ಯೋಜಿಸಲಾಗಿದೆ. ಜತೆಗೆ ತಾಲೂಕು ಆಡಳಿತ ಕಚೇರಿಗೆ ಆರ್‌ಜಿ ರಸ್ತೆಯಿಂದ ೪೦ ಅಡಿ ಅಗಲ, ೮೦೦ ಮೀಟರ್ ಉದ್ದದ ರಸ್ತೆ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ಕೆಕೆಆರ್‌ಡಿಯಿಂದ ₹೨.೯೦ ಕೋಟಿ ಮಂಜೂರಾಗಿದೆ. ಈಗಾಗಲೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಶೀಘ್ರದಲ್ಲಿ ಈ ಎಲ್ಲ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸಚಿವ ತಂಗಡಗಿ ವಿವರಿಸಿದರು.ಚೆಳ್ಳೂರು ರಸ್ತೆಯಲ್ಲಿ ೧೦೦ ಹಾಸಿಗೆ ಆಸ್ಪತ್ರೆಗೆ ಕಾರಟಗಿ ಉದ್ಯಮಿ ಎಲ್‌ವಿಟಿ ಸಹೋದರರು ಭೂಮಿದಾನ ಮಾಡಿದ್ದಾರೆ. ಹಳೇ ಬಸ್ ನಿಲ್ದಾಣವನ್ನೇ ಬಸ್ ಡಿಪೋವನ್ನಾಗಿ ಪರಿವರ್ತಿಸಲಾಗುತ್ತಿದೆ. ಯರಡೋಣಾ ಸೀಮಾದಲ್ಲಿ ಕಾರಟಗಿ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ೬ ಎಕರೆ ಭೂಮಿ ನಿಗದಿ ಪಡಿಸಲಾಗಿದೆ. ಕಾರ್ಮಿಕ ವಸತಿ ಶಾಲೆ ಕನಕಗಿರಿ ಕ್ಷೇತ್ರಕ್ಕೆ ಮಂಜೂರಾಗಿದ್ದು, ಅದನ್ನು ಯರಡೋಣಾ ಸಮೀಪದಲ್ಲಿ ನಿರ್ಮಿಸಲಾಗುವುದು. ಅದಕ್ಕಾಗಿ ೧೨ ಎಕರೆ ಸರ್ಕಾರಿ ಭೂಮಿಯನ್ನು ಯರಡೋಣಿ ಸಮೀಪ ಗುರುತಿಸಲಾಗಿದೆ ಎಂದರು.
ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶಪ್ಪ, ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾ. ಪಾಟೀಲ್, ಆಸ್ಪತ್ರೆಗೆ ಭೂ ದಾನ ಮಾಡಿದ ಉದ್ಯಮಿಗಳಾದ ಕೆ. ಸಣ್ಣಸೂಗಪ್ಪ ಮತ್ತು ಕೆ. ನಾಗಪ್ಪ, ಕೆ. ನಾಗರಾಜ, ಕೆ. ವೀರೇಶ ಹಾಗೂ ಕೆ. ಸಿದ್ದನಗೌಡ, ಕೆ.ಎನ್. ಪಾಟೀಲ್, ಶಿವರೆಡ್ಡಿ ನಾಯಕ, ಚೆನ್ನಬಸಪ್ಪ ಸುಂಕದ್, ಜಿ. ಯಂಕನಗೌಡ, ಬೂದಿಗಿರಿಯಪ್ಪ, ವಿಜಯಕುಮಾರ ಕೋಲ್ಕಾರ್, ರಾಜಶೇಖರ ಆನೆಹೊಸೂರು ತಹಸೀಲ್ದಾರ್ ಎಂ. ಕುಮಾರಸ್ವಾಮಿ ಇದ್ದರು.₹೫೪.೫೨ ಕೋಟಿ ಕಾಮಗಾರಿ: ₹೬.೫೨ ಕೋಟಿ ವೆಚ್ಚದ ಕಾರಟಗಿ ಪ್ರಜಾಸೌಧ ಕಟ್ಟಡ ನಿರ್ಮಾಣ, ₹೪೨ ಕೋಟಿ ವೆಚ್ಚದ ೧೦೦ ಹಾಸಿಗೆ ಆಸ್ಪತ್ರೆ ಮತ್ತು ₹೬ ಕೋಟಿ ವೆಚ್ಚದಲ್ಲಿ ಬಸ್ ಡಿಪೋ ಕಟ್ಟಡ ನಿರ್ಮಾಣಕ್ಕೆ ಸಚಿವ ಶಿವರಾಜ ತಂಗಡಗಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.