ದ್ವೇಷಭಾಷಣ ತಡೆ ಕಾಯ್ದೆ, ಅಕ್ರಮ ದಂಧೆಗೆ ಕಡಿವಾಣ ಹಾಕಲು ಒತ್ತಾಯ

KannadaprabhaNewsNetwork |  
Published : Dec 23, 2025, 02:15 AM IST
ದ್ವೇಷಭಾಷಣ ಕಾಯ್ದೆ ವಿರೋಧಿಸಿ ಹಾಗೂ ಜಿಲ್ಲೆಯಲ್ಲಿ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಬಿಜೆಪಿಯ ನೂರಾರು ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಬಳ್ಳಾರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ದ್ವೇಷಭಾಷಣ ತಡೆ ಮಸೂದೆಯನ್ನು ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ.

ಬಳ್ಳಾರಿ: ದ್ವೇಷಭಾಷಣ ಕಾಯ್ದೆ ವಿರೋಧಿಸಿ ಹಾಗೂ ಜಿಲ್ಲೆಯಲ್ಲಿ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕು ಎಂದು

ಒತ್ತಾಯಿಸಿ ಬಿಜೆಪಿಯ ನೂರಾರು ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ದ್ವೇಷಭಾಷಣ ತಡೆ ಮಸೂದೆಯನ್ನು ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ. ಇದೊಂದು ಮೊಂಡುತನದ ಪರಮಾವಧಿಯಾಗಿದೆ. ಸರ್ಕಾರದ ಇಂತಹ ನೀತಿಯಿಂದ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲದಂತಾಗಲಿದೆ. ಬ್ರಿಟಿಷ್ ಕಾಲದ ವಸಾಹತುಶಾಹಿ ನೀತಿಗಳನ್ನು ಅನುಷ್ಠಾನದ ಮೂಲಕ ಕಾಂಗ್ರೆಸ್ ಸರ್ಕಾರ ಪ್ರತಿಪಕ್ಷಗಳನ್ನು ದಮನ ಮಾಡಲು ಹಾಗೂ ದಬ್ಬಾಳಿಕೆಯ ನೀತಿಗಳನ್ನು ಅನುಸರಿಸಲು ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ದ್ವೇಷಭಾಷಣ ತಡೆ ಕಾಯ್ದೆ ಸಾರ್ವಜನಿಕ ಹಿತಾಸಕ್ತಿಗೆ ದೊಡ್ಡ ಅಪಾಯವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬಳ್ಳಾರಿ ನಗರದ ಗಲ್ಲಿಗಲ್ಲಿಗಳಲ್ಲಿ ಮಟ್ಕಾ, ಜೂಜಾಟ ರಾಜಾರೋಷವಾಗಿ ನಡೆಯುತ್ತಿದೆ. ನಗರದ ವಿವಿಧೆಡೆ ಗಾಂಜಾ, ಚರಸ್ ಮಾರಾಟ ನಿರಾಂತಕವಾಗಿ ನಡೆದಿದೆ. ಇದರಿಂದ ಯುವ ಸಮುದಾಯ ದಾರಿ ತಪ್ಪುತ್ತಿದ್ದು, ಇದಕ್ಕೆ ನೇರವಾಗಿ ಜಿಲ್ಲಾಡಳಿತವೇ ಕುಮ್ಮಕ್ಕು ನೀಡುತ್ತಿದೆ ಎಂಬ ಗುಮಾನಿ ಮೂಡಿದೆ. ಬಡವರಿಗೆ ಸೇರಬೇಕಾದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಪಕ್ಷದ ಕಾರ್ಯಕರ್ತರು ಗಡಗಿಚನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಕಳುಹಿಸಿದರು. ಇದೇವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ಜರುಗಿತು. ಗಾಂಜಾ, ಜೂಜಾಟ ಮತ್ತಿತರ ಅಕ್ರಮ ಕೃತ್ಯಗಳಿಂದ ನಿಮ್ಮ ಮಕ್ಕಳು ಬಲಿಯಾದರೆ ಜನರ ನೋವು ಏನೆಂದು ಗೊತ್ತಾಗುತ್ತದೆ ಎಂದು ಪೊಲೀಸರ ವಿರುದ್ಧ ಪ್ರತಿಭಟಕಾರರು ಆಕ್ರೋಶಗೊಂಡರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಮಾತನಾಡಿ, ನಗರದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಬೆಳಗಾವಿಯ ಅಧಿವೇಶನದಲ್ಲಿ ಸಹ ಧ್ವನಿ ಎತ್ತಿರುವೆ. ರಸ್ತೆ ಗುಂಡಿಗಳನ್ನು ಮುಚ್ಚುತ್ತಿಲ್ಲ. ಬಳ್ಳಾರಿಯ ರಸ್ತೆಯಲ್ಲಿ ಗುಂಡಿಗಳು ಇವೆಯೋ ಅಥವಾ ಗುಂಡಿಗಳಲ್ಲಿ ರಸ್ತೆ ಇದೆಯೋ ಎಂಬುದೇ ತಿಳಿಯದಂತಾಗಿದೆ ಎಂದರು.

ಮನವಿಪತ್ರ ಸ್ವೀಕರಿಸಲು ಡಿಸಿ ಕಚೇರಿ ಆವರಣಕ್ಕೆ ಆಗಮಿಸಿದ್ದ ಜಿಲ್ಲಾಡಳಿತ ಅಧಿಕಾರಿಯ ಬಳಿ ನಗರದಲ್ಲಾಗುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳ ಕುರಿತು ವಿವರಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ ಹಾಗೂ ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಶ್ರೀನಿವಾಸ ಮೋತ್ಕರ್, ನಗರದಲ್ಲಿ ಗಾಂಜಾ, ಚರಸ್, ಮಟ್ಕಾ, ಅಂದರ್ ಬಾಹರ್ ಸೇರಿದಂತೆ ಅನೇಕ ಕೃತ್ಯಗಳು ಬಹಿರಂಗವಾಗಿಯೇ ನಡೆಯುತ್ತಿದ್ದರೂ ಜಿಲ್ಲಾಡಳಿತ ನಿಯಂತ್ರಿಸುತ್ತಿಲ್ಲ ಎಂದು ದೂರಿದರು.

ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ ಮಾತನಾಡಿ, ಎರಡು ದಿನಗಳಲ್ಲಿ ಜಿಲ್ಲಾಡಳಿತ ಮಹಾನಗರ ಪಾಲಿಕೆ ಸದಸ್ಯರು, ಬಳ್ಳಾರಿ ಪ್ರಮುಖರ ಸಭೆ ಕರೆಯಿರಿ. ಸಭೆಯಲ್ಲಿ ಮಾಧ್ಯಮಗಳಿಗೂ ಆಹ್ವಾನ ನೀಡಿ, ನಗರ ಸೇರಿದಂತೆ ಜಿಲ್ಲೆಯಲ್ಲಾಗುತ್ತಿರುವ ಅಕ್ರಮ ದಂಧೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿ, ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ಜಿಲ್ಲಾಡಳಿತದ ಅಧಿಕಾರಿಯನ್ನು ಒತ್ತಾಯಿಸಿದರು.

ಮುಖಂಡರಾದ ಕೆ.ಎ.ರಾಮಲಿಂಗಪ್ಪ, ಎಚ್‌.ಹನುಮಂತಪ್ಪ, ಸಾಧನಾ ಹಿರೇಮಠ, ಪುಷ್ಪಲತಾ, ಮಾರುತಿ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ ಮೋತ್ಕರ್, ಹನುಮಂತಪ್ಪ, ಪಾಲಿಕೆ ಸದಸ್ಯರಾದ ಗೋವಿಂದರಾಜು ಸೇರಿದಂತೆ ಪಕ್ಷದ ನೂರಾರು ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌
2 ದಿನದಲ್ಲಿ 2ನೇ ಬಾರಿ ಸಿದ್ದು ಆಪ್ತ ರಾಜಣ್ಣ- ಡಿಕೆಶಿ ಭೇಟಿ