ಕನ್ನಡಪ್ರಭ ವಾರ್ತೆ ಮಡಿಕೇರಿ
ಚಲನಚಿತ್ರ ಕ್ಷೇತ್ರದಲ್ಲಿ ಸ್ಥಳೀಯ ಕಲಾವಿದರು ದೊಡ್ಡ ಮಟ್ಟದ ಸಾಧನೆ ಮಾಡುತ್ತಿದ್ದು ಕಲಾವಿದರಿಗೆ ಪ್ರೋತ್ಸಾಹ ಮತ್ತು ಉತ್ತೇಜನ ನೀಡುವ ಅಗತ್ಯವಿದೆ ಎಂದು ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ತಿಳಿಸಿದ್ದಾರೆ.ಕೊಡಗು ಕಲಾವಿದರ ಸಂಘ ಮತ್ತು ಗೋಣಿಕೊಪ್ಪ ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ ರಾಷ್ಟ್ರ ಪ್ರಶಸ್ತಿ ವಿಜೇತ ‘ಕಂದೀಲು’ ಕನ್ನಡ ಸಿನಿಮಾದ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಹಾಗೂ ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿರಾಜಪೇಟೆ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದರು, ಪ್ರತಿಯೊಬ್ಬರ ಜೀವನಕ್ಕೆ ಅರ್ಥ ಸಿಗುವುದು ಕಲೆಯಿಂದ, ಕಲೆಯ ಬೆಳವಣಿಗೆಗೆ ಶ್ರಮಿಸುವ ಕಲಾವಿದರನ್ನು ಸನ್ಮಾನಿಸಿ ಪ್ರೋತ್ಸಾಹಿಸುವುದು ಅತ್ಯಂತ ಮಹತ್ವದ ಕೆಲಸವಾಗಿದೆ ಎಂದರು.ದೊಡ್ಡಮಟ್ಟದಲ್ಲಿ ಸಾಧನೆ:
ಚಲನಚಿತ್ರ ಕ್ಷೇತ್ರದಲ್ಲಿ ಭಾರತೀಯರ ಕೊಡುಗೆ ಮಹತ್ವದ್ದಾಗಿದೆ. ಹಿಂದಿನ ಕಾಲದಲ್ಲಿ ಚಲನಚಿತ್ರಗಳಿಗೆ ಅಷ್ಟೊಂದು ಪ್ರೋತ್ಸಾಹ ಇರಲಿಲ್ಲ. ಆದರೆ ಇಂದು ಸ್ಥಳೀಯ ಕಲಾವಿದರು ದೊಡ್ಡಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಸಾಧನೆಗೆ ಹಾಗೂ ಸಾಧಿಸಿದ ಕಲಾವಿದರಿಗೆ ಪ್ರೋತ್ಸಾಹ ದೊರಕುತ್ತಿರುವುದು ಶ್ಲಾಘನೀಯ. ಭವಿಷ್ಯದಲ್ಲೂ ಪ್ರೋತ್ಸಾಹ ದೊರಕುವಂತಾಗಲಿ ಎಂದರು.ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಅವರು ಮಾತನಾಡಿ, ಕೊಡವರು ಸಣ್ಣ ಸಮುದಾಯಕ್ಕೆ ಸೇರಿದವರಾಗಿದ್ದರೂ ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಇಂದು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಲಭಿಸಿರುವುದು ಕೊಡವರಿಗೆ ಸಂತಸದ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು:ಕೊಡವ ಚಲನಚಿತ್ರಗಳಿಗೆ ಜನರ ಸಹಕಾರದ ಅಗತ್ಯವಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೊಡವ ಚಿತ್ರಗಳನ್ನು ನೋಡಿ ಕೊಡವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚೆರಿಯಪಂಡ ಸುರೇಶ್ ಮಾತನಾಡಿ, ಹಲವು ಘಟಾನುಘಟಿ ನಿರ್ದೇಶಕರ ನಡುವೆಯೂ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿರುವುದು ದೊಡ್ಡ ಸಾಧನೆಯಾಗಿದೆ. ಮುಂದಿನ ದಿನಗಳಲ್ಲಿಯೂ ಮತ್ತಷ್ಟು ಚಲನಚಿತ್ರಗಳನ್ನು ನಿರ್ದೇಶಿಸುವಂತಾಗಲಿ ಎಂದು ಶುಭ ಹಾರೈಸಿದರು.ಕೊಡಗಿನಲ್ಲಿ ಉತ್ತಮ ಚಿತ್ರಮಂದಿರದ ಅಗತ್ಯವಿದ್ದು, ಸರಕಾರದ ಗಮನ ಸೆಳೆದು ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ವೇದಿಕೆ ಕಲ್ಪಿಸಬೇಕು ಎಂದರು.
ಬೆಂಗಳೂರು ಕೊಡವ ಸಮಾಜದಿಂದ ಯುವ ಪ್ರತಿಭೆಗಳಿಗೆ ಕ್ರೀಡಾ ಕೇಂದ್ರ ಆರಂಭಿಸುವ ಯೋಜನೆಯಿದ್ದು, ಕೊಡವ ಭಾಷೆ ಉಳಿವಿಗೆ, ಸಾಹಿತ್ಯದ ಬೆಳವಣಿಗೆಗೆ ಸಹಕಾರ ನೀಡಲಾಗುವುದು. ಅಲ್ಲದೆ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹರಿದಾಸ ಅಪ್ಪಚ್ಚಕವಿ ಅವರ ಜನ್ಮದಿನಾಚರಣೆಯಂದು ಪುಸ್ತಕ ಬಿಡುಗಡೆ ಮಾಡಲಾಗುವುದೆಂದು ತಿಳಿಸಿದರು.ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಎಸ್.ಅರುಣ್ ಮಾಚಯ್ಯ ಅವರು ಮಾತನಾಡಿ, ‘ಕಂದೀಲು’ ಚಲನಚಿತ್ರ ಬಡತನ, ಹಳ್ಳಿಯ ಜೀವನ, ರೈತನ ದುಡಿಮೆಯನ್ನು ಪ್ರತಿಬಿಂಬಿಸುತ್ತದೆ. ‘ಕಂದೀಲು’ ಎಂಬ ಹೆಸರೇ ವಿಸ್ಮಯ ಮೂಡಿಸುತ್ತದೆ. ಇದು ಗ್ರಾಮಾಂತರ ಮಂದಿಯ ಜೀವನದ ಮೇಲೆ ಬೆಳಕು ಚೆಲ್ಲಿದೆ. ಹಳ್ಳಿಯ ಸೊಗಡನ್ನು ಸಾರುವ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಚಾರವೆಂದರು.
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರು ಮಾತನಾಡಿ, ನಮ್ಮದೇ ಊರಲ್ಲಿ, ನಮ್ಮ ಕೆಲಸಕ್ಕೆ ಪ್ರೋತ್ಸಾಹ ದೊರೆಯುತ್ತಿರುವುದು ಸಂತೋಷ. ಹಲವು ಸವಾಲುಗಳ ನಡುವೆ ಕುಟುಂಬದ ಬೆಂಬಲದಿಂದ ಮುಂದೆ ಬರಲು ಸಾಧ್ಯವಾಯಿತು ಎಂದು ಹೇಳಿದರು.ಚಿತ್ರರಂಗ ನನ್ನ ಆಯ್ಕೆಯ ವಿಷಯವಲ್ಲ. 2004ರಲ್ಲಿ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರ ಸ್ವಸ್ತಿಕ್ ಎಂಟರ್‌ಟೈನ್‌ಮೆಂಟ್ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿ ‘ರಂಗ ಪ್ರವೇಶ’ ಕನ್ನಡ ಚಲನಚಿತ್ರದ ಮೂಲಕ ನಿರ್ದೇಶನಕ್ಕಿಳಿದೆ, ಎರಡನೇ ಚಲನಚಿತ್ರ ‘ಕಂದೀಲು’ ಮೂಲಕ ಕೊಡಗಿನ ಪ್ರಥಮ ಮಹಿಳಾ ನಿರ್ದೇಶಕಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದೇನೆ. ಇದೀಗ ರಾಷ್ಟ್ರ ಪ್ರಶಸ್ತಿ ದೊರೆತಿರುವುದರಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ಪ್ರತಿಯೊಬ್ಬರ ಜೀವನದಲ್ಲಿ ಸಕರಾತ್ಮಕ ಹಾಗೂ ನಕರಾತ್ಮಕತೆ ಇದ್ದೆ ಇರುತ್ತದೆ. ಹೀಗಿದ್ದರೂ ತಮ್ಮ ದಿನನಿತ್ಯದ ಕೆಲಸದಲ್ಲಿ ಶೇಕಡ ನೂರರಷ್ಟು ತೊಡಗಿಸಿಕೊಳ್ಳುವುದು ನಿಜವಾದ ಸಾಧನೆ ಎಂದು ಯಶೋಧ ಪ್ರಕಾಶ್ ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಟ್ಟಂಗಡ ವಿಜು ದೇವಯ್ಯ ಅವರು ಹಲವು ವರ್ಷಗಳ ಹಿಂದೆ ಕೊಡಗಿನಲ್ಲಿ ಸಿನಿಮಾ ಎಂದರೆ ಮೂಗು ಮುರಿಯುವವರ ಸಂಖ್ಯೆ ಹೆಚ್ಚು ಇತ್ತು. ಹೆಣ್ಣು ಮಕ್ಕಳನ್ನು ಚಿತ್ರರಂಗಕ್ಕೆ ಬಿಡುತ್ತಿರಲಿಲ್ಲ, ಆದರೆ ಸಣ್ಣುವಂಡ ಶಶಿಕಲಾ ಅವರು ಕನ್ನಡ ಸಿನಿಮಾಕ್ಕೆ ಮೊದಲ ಕೊಡವ ಮಹಿಳೆಯಾಗಿ ಪಾದಾರ್ಪಣೆ ಮಾಡಿ ಕೊಡವರಿಗೆ ಸ್ಫೂರ್ತಿಯಾಗಿದ್ದಾರೆ. ಅಂದಿನಿಂದ ಇಂದಿನವರೆಗೆ ಸಮುದಾಯದ ಹಲವು ಮಂದಿ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇಂದು ನಿರ್ಮಾಪಕಿಯಾಗಿ ಯಶೋಧ ಪ್ರಕಾಶ್ ಅವರು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲೂ ಮತ್ತಷ್ಟು ಯುವ ಪ್ರತಿಭೆಗಳು ಚಿತ್ರರಂಗದಲ್ಲಿ ಸಾಧನೆ ಮಾಡುವಂತಾಗಲಿ ಎಂದರು.
ಸಮಾಜ ಸೇವಕ ನೆರವಂಡ ಉಮೇಶ್ ಅವರು ಮಾತನಾಡಿ ಚಿತ್ರರಂಗ ಸಾಗರದ ಮಾದರಿಯ ಜಗತ್ತು. ಇಂತಹ ಜಗತ್ತಿನಲ್ಲಿ ಅನೇಕ ಸವಾಲುಗಳ ನಡುವೆಯೂ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವುದು ಶ್ಲಾಘನೀಯ ಎಂದರು.ರಾಷ್ಟ್ರ ಪ್ರಶಸ್ತಿ ವಿಜೇತ ‘ಕಂದೀಲು’ ಚಿತ್ರದ ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ಬಾಲ ನಟಿ ಕುಶಿ ಕಾವೇರಮ್ಮ ಉಪಸ್ಥಿತರಿದ್ದರು. ಪೊಡಮಾಡ ಭವಾನಿ ನಾಣಯ್ಯ ಪ್ರಾರ್ಥಿಸಿ, ಕರ್ನಾಟಕ ಜಾನಪದ ಪರಿಷತ್ ನ ಕೊಡಗು ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಸ್ವಾಗತಿಸಿ, ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಹಾಗೂ ಈರಮಂಡ ಹರಿಣಿ ವಿಜಯ್ ನಿರೂಪಿಸಿದರು.
*ಸನ್ಮಾನ*ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ‘ಕಂದೀಲು’ ಕನ್ನಡ ಸಿನಿಮಾದ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್, ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ಸಂಸದ ಯದುವೀರ್ ಒಡೆಯರ್, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚೆರಿಯಪಂಡ ಸುರೇಶ್, ‘ಕಂದೀಲು’ ಚಿತ್ರದ ಬಾಲನಟಿ ಈರಮಂಡ ಕುಶಿ ಕಾವೇರಮ್ಮ, ರಾಜ್ಯ ಪ್ರಶಸ್ತಿ ವಿಜೇತ ‘ನಾಡ ಪೆದ ಆಶಾ’ ಕೊಡವ ಚಲನಚಿಟತ್ರದ ನಿರ್ಮಾಪಕಿ ಹಾಗೂ ನಾಯಕಿ ಈರಮಂಡ ಹರಿಣಿ ವಿಜಯ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿವಿಧ ಕಲಾ ತಂಡಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.