ಗಣೇಶ ಚತುರ್ಥಿ ಎಂದಾಕ್ಷಣ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಂಭ್ರಮ ಕಳೆಗಟ್ಟುತ್ತದೆ. ಸಣ್ಣ ಗಾತ್ರದಿಂದ ಹಿಡಿದು ಬೃಹತ್ ಗಾತ್ರದ ಮೂರ್ತಿಗಳ ವರೆಗೆ ನಾನಾ ವಿನ್ಯಾಸದ ಗಣಪನ ವಿಗ್ರಹಗಳು ನಗರದಲ್ಲಿ ಸಿದ್ಧಗೊಳ್ಳುತ್ತಿವೆ.
ಈರಪ್ಪ ನಾಯ್ಕರ
ಹುಬ್ಬಳ್ಳಿ:
ಗಣೇಶ ಚತುರ್ಥಿ ಎಂದಾಕ್ಷಣ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಂಭ್ರಮ ಕಳೆಗಟ್ಟುತ್ತದೆ. ಸಣ್ಣ ಗಾತ್ರದಿಂದ ಹಿಡಿದು ಬೃಹತ್ ಗಾತ್ರದ ಮೂರ್ತಿಗಳ ವರೆಗೆ ನಾನಾ ವಿನ್ಯಾಸದ ಗಣಪನ ವಿಗ್ರಹಗಳು ನಗರದಲ್ಲಿ ಸಿದ್ಧಗೊಳ್ಳುತ್ತಿವೆ. ಈ ಸಂಭ್ರಮದ ಹಿಂದೆ ವರ್ಷವಿಡೀ ಮಣ್ಣಿನೊಂದಿಗೆ ಕಲಾತ್ಮಕ ಬದುಕು ಕಟ್ಟಿಕೊಂಡಿರುವ ನೂರಾರು ಕಲಾವಿದರ ಪರಿಶ್ರಮವಿದೆ.
ಅವಳಿ ನಗರದಲ್ಲಿ ಗಣೇಶ ಮೂರ್ತಿಗಳ ತಯಾರಿಕೆಗೆ ಸ್ಥಳೀಯವಾಗಿ ಲಭ್ಯವಾಗುವ ಮಣ್ಣು ಪ್ರಮುಖ ಆಧಾರ. ಪರಿಸರಕ್ಕೆ ಪೂರಕವಾದ ಜೇಡಿ ಮಣ್ಣು, ಕೆರೆ ಮಣ್ಣು ಹಾಗೂ ನೈಸರ್ಗಿಕ ಬಣ್ಣಗಳನ್ನು ಬಳಸಿ ಕಲಾವಿದರು ಗಜಾನನ ಮೂರ್ತಿಗಳಿಗೆ ರೂಪ ನೀಡುತ್ತಿದ್ದಾರೆ. ಪಾರಂಪರಿಕವಾಗಿ ಈ ಕಾಯಕವನ್ನೇ ನಂಬಿಕೊಂಡಿರುವ ಕುಟುಂಬಗಳು ಇಂದಿಗೂ ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನು ತಯಾರಿಸಿ ರಾಜ್ಯದ ವಿವಿಧ ಜಿಲ್ಲೆಗಳಿಗೂ ಪೂರೈಸುತ್ತಿವೆ.
500ಕ್ಕೂ ಹೆಚ್ಚು ಕಲಾವಿದರು:
ಅವಳಿ ನಗರದಲ್ಲಿ 500ಕ್ಕೂ ಹೆಚ್ಚು ಕಲಾವಿದರು ಮಣ್ಣಿನ ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವು ಕುಟುಂಬಗಳು ವರ್ಷವಿಡೀ ಶ್ರಮಿಸಿ ವಿವಿಧ ವಿನ್ಯಾಸ ಹಾಗೂ ಆಕಾರಗಳ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿವೆ. ಸಣ್ಣ ಕುಟುಂಬಗಳ ಮಟ್ಟದಲ್ಲಿ ಸಾಮಾನ್ಯವಾಗಿ 1ರಿಂದ 4 ಅಡಿ ಎತ್ತರದ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಮಣ್ಣಿನ ಕಲೆಯನ್ನೇ ಕುಲಕಸುಬಾಗಿ ಮುಂದುವರಿಸಿಕೊಂಡು ಬಂದಿರುವ ಕುಟುಂಬಗಳಿಗೆ ಗಣೇಶ ಚತುರ್ಥಿ ಪ್ರಮುಖ ಆದಾಯದ ಕಾಲವಾಗಿದೆ ಎಂದರೆ ತಪ್ಪಾಗಲಾರದು.
ಹು-ಧಾ ಚಿತ್ರಗಾರ ಸಮಾಜದ ವ್ಯಾಪ್ತಿಯಲ್ಲಿ 150ರಿಂದ 200 ಮಂದಿ ಮಣ್ಣಿನ ಮೂರ್ತಿ ತಯಾರಕರಿದ್ದಾರೆ. ಇವರಿಗೆ ಮೂರ್ತಿ ತಯಾರಿಕೆಯೇ ನಿತ್ಯದ ಕುಲಕಸುಬಾಗಿದೆ ಎಂದು ಸಂಘದ ಅಧ್ಯಕ್ಷ ಗಣೇಶ ಪೊಣಾರಕರ ಹೇಳುತ್ತಾರೆ.
ಈ ಬಾರಿ 100 ದೊಡ್ಡ ಪ್ರಮಾಣದ ಸಾರ್ವಜನಿಕ ಗಣಪತಿಗಳನ್ನು ತಯಾರಿಸಲಾಗಿದ್ದು, 5 ರಿಂದ 18 ಅಡಿ ಎತ್ತರದ ವರೆಗೆ ನಮ್ಮಲ್ಲಿ ಪರಿಸರಸ್ನೇಹಿ ಗಣಪತಿ ಮೂರ್ತಿಗಳು ಸಿಗುತ್ತವೆ. ಈಗ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡುವವರಿಗೆ ಸ್ಥಳೀಯವಾಗಿ ಬೃಹತ್ ಮೂರ್ತಿಗಳು ಲಭ್ಯವಾಗಲಿವೆ. ₹20 ಸಾವಿರದಿಂದ ಪ್ರಾರಂಭವಾಗಿ ₹1 ಲಕ್ಷದ ವರೆಗೆ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಸಿದ್ಧಪಡಿಸಲಾಗಿದೆ ಎಂದು ಹಳೇ ಹುಬ್ಬಳ್ಳಿಯ ಬಸವರಾಜ ಕಂಬಾರ "ಕನ್ನಡಪ್ರಭ "ಕ್ಕೆ ತಿಳಿಸಿದರು.ಎಲ್ಲರಿಗೂ ಹುಬ್ಬಳ್ಳಿ ನೆಲೆ:
ಗಣೇಶ ಹಬ್ಬದ ಸಂದರ್ಭದಲ್ಲಿ ಹೊರ ರಾಜ್ಯಗಳಿಂದಲೂ ಕಲಾವಿದರು ಹುಬ್ಬಳ್ಳಿಗೆ ಆಗಮಿಸುತ್ತಾರೆ. ಪ್ರತಿ ವರ್ಷ 10ರಿಂದ 15 ಮಂದಿ ಕಲಾವಿದರ ತಂಡ ಹೊರ ರಾಜ್ಯಗಳಿಂದ ಬಂದು, ತಿಂಗಳುಗಟ್ಟಲೆ ಇಲ್ಲಿಯೇ ನೆಲೆಸಿ ಬೃಹತ್ ಗಾತ್ರದ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸುತ್ತಾರೆ. 20ರಿಂದ 25 ವರ್ಷಗಳಿಂದ ಈ ಕಲಾವಿದರು ಹುಬ್ಬಳ್ಳಿ ಭಾಗಕ್ಕೆ ಆಗಮಿಸುತ್ತಿದ್ದು, ಸುಮಾರು 21 ಅಡಿ ಎತ್ತರದ ಬೃಹತ್ ಮೂರ್ತಿಗಳನ್ನೂ ತಯಾರಿಸುತ್ತಿದ್ದಾರೆ.
ಹೀಗಾಗಿ ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳತ್ತ ಜನರು ಹೆಚ್ಚಿನ ಒಲವು ತೋರಿಸುವುದರಿಂದ, ಹುಬ್ಬಳ್ಳಿ-ಧಾರವಾಡದ ಪಾರಂಪರಿಕ ಮಣ್ಣಿನ ಕಲಾವಿದರ ಕಾಯಕಕ್ಕೂ ಹೊಸ ಚೈತನ್ಯ ದೊರೆಯುವ ನಿರೀಕ್ಷೆ ಇದೆ.ಸ್ಥಳೀಯ ಮಣ್ಣಿನ ಮೂರ್ತಿ ತಯಾರಕರ ಸಂಘಟನೆ ಮತ್ತಷ್ಟು ಬಲಗೊಂಡರೆ ಕಲಾವಿದರಿಗೆ ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯ ಸೇರಿದಂತೆ ಅಗತ್ಯ ನೆರವು ದೊರೆಯಲು ಅನುಕೂಲವಾಗಲಿದೆ. ಇದರಿಂದ ಪಾರಂಪರಿಕ ಕಲೆ ಉಳಿಯಲು ಸಾಧ್ಯವಾಗಲಿದೆ.
ಅಮರೇಶ ಹಿಪ್ಪರಗಿ, ಹುಬ್ಬಳ್ಳಿ ಗಣೇಶೋತ್ಸವ ಮಹಾ ಮಂಡಳದ ಕಾರ್ಯದರ್ಶಿ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.