ಯಲ್ಲಾಪುರ: ಮೂಲತಃ ತಾಲೂಕಿನ ಮಂಚಿಕೇರಿಯ ಗೋರ್ಸಗದ್ದೆ ಸಮೀಪದ ಕೋಸಗುಳಿಯ ಆಚಾರ್ಯ ಪ್ರೊ. ಯಜ್ಞೇಶ್ವರ ಶಾಸ್ತ್ರಿ ಅವರನ್ನು ಮಧ್ಯಪ್ರದೇಶ ಸರ್ಕಾರವು ಮುಂದಿನ ಮೂರು ವರ್ಷಗಳ ಅವಧಿಗೆ ಸಾಂಚಿ ಯುನಿವರ್ಸಿಟಿ ಆಫ್ ಬುದ್ಧಿಸ್ಟ್, ಇಂಡಿಕ್ ಸ್ಟಡೀಸ್ ಇದರ ಕುಲಾಧಿಪತಿಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಇದು ಅತ್ಯಂತ ಗೌರವಾನ್ವಿತ ಹುದ್ದೆಯಾಗಿದ್ದು, ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸ, ಶಿಕ್ಷಣ ತಜ್ಞರೂ ಆಗಿರುವ ಪ್ರೊ. ಯಜ್ಞೇಶ್ವರ ಅವರು ಈ ಹಿಂದೆ ಇದೇ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು.ಪ್ರೊ. ಶಾಸ್ತ್ರಿಗಳು ಮುಂದಿನ ೩ ವರ್ಷ ಭೋಪಾಲ ಸಮೀಪದ ಸಾಂಚಿ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳನ್ನು ಅಲಂಕರಿಸಿದ ಇವರು ಲಾಸ್ ಎಂಜಲೀಸ್, ಯುಎಸ್‌ಎ ಲೋಯಲಾ ವಿಶ್ವವಿದ್ಯಾನಿಲಯಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದರು. ಹಲವು ರಾಷ್ಟ್ರೀಯ ಗೌರವ ಪುರಸ್ಕಾರ, ಬಂಗಾರದ ಪದಕ ಸಂಮಾನಗಳಿಗೆ ಭಾಜನರಾಗಿದ್ದಾರೆ.
ಹಳಿಯಾಳ: ಪಟ್ಟಣದ ಪ್ರಾಥಮಿಕ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಸಹಕಾರಿ ನಿಯಮಿತ(ಪಿಎಲ್‌ಡಿ) ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪರಶುರಾಮ ರಾಠೋಳಿ ಹಾಗೂ ಉಪಾಧ್ಯಕ್ಷರಾಗಿ ನಾಮದೇವ ಮಿರಾಶಿ ಅವರು ಆಯ್ಕೆಯಾದರು.ಬಿಜೆಪಿ ಬೆಂಬಲಿತರು ಹಿಡಿತದಲ್ಲಿರುವ ಈ ಬ್ಯಾಂಕ್ ಆಡಳಿತ ಮಂಡಳಿಗೆ ಹಲವಾರು ವರ್ಷಗಳಿಂದ ಬಿಜೆಪಿ ಬೆಂಬಲಿತರೇ ಆಯ್ಕೆಯಾಗುತ್ತ ಬಂದಿದ್ದಾರೆ. ಶುಕ್ರವಾರ ಬ್ಯಾಂಕ್‌ನಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರನ್ನು ಬಿಜೆಪಿ ಮಂಡಲದ ವತಿಯಂದ ಸನ್ಮಾನಿಸಿ ಶುಭ ಹಾರೈಸಲಾಯಿತು.ಬಿಜೆಪಿ ಮಂಡಲ ಅಧ್ಯಕ್ಷ ವಿಠ್ಠಲ ಸಿದ್ಧನ್ನವರ, ಪ್ರಮುಖರಾದ ಉದಯ ಹೂಲಿ, ಶಿವಾಜಿ ಪಾಟೀಲ, ಮೋಹನ ಗೌಡ, ಮಂಜುನಾಥ ಪಂಡಿತ, ಡೊಂಗ್ರು ಕೆಸರೇಕರ, ಸಂಜು ಮೊರೆ, ವಿರುಪಾಕ್ಷ ಕುರುಬಗಟ್ಟಿ, ಬಾಬುಣಿ ಗೌಡ, ರಾಜು ಸಡೇಕರ, ಜ್ಞಾನೇಶ ಮಾನಗೆ, ಈಶ್ವರ ವಾಟ್ಲೇಕರ, ನಾರಾಯಣ ಕೆಸರೇಕರ, ಸುಭಾಸ ಪಾಟೀಲ, ಸುರೇಶ ಧಾರವಾಡಕರ, ಜಯಲಕ್ಷ್ಮಿ ಚವ್ಹಾಣ, ಶೋಭಾ ಸಾಣಿಕೊಪ್ಪ ಉಪಸ್ಥಿತರಿದ್ದರು. ಸನ್ಮಾನ ಸಮಾರಂಭದ ನಂತರ ನೂತನ ಆಡಳಿತ ಮಂಡಳಿಯ ನಿರ್ದೇಶಕರು ವಿಧಾನಪರಿಷತ್ ಮಾಜಿ ಸದಸ್ಯ ವಿ.ಡಿ. ಹೆಗಡೆ ಅವರ ಮನೆಗೆ ತೆರಳಿ ಆಶೀರ್ವಾದವನ್ನು ಪಡೆದರು.