ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್‌ ವಿಧಾನಸೌಧ ಪ್ರವೇಶ

KannadaprabhaNewsNetwork |  
Published : Jun 04, 2026, 01:45 AM IST
DK Shivakumar

ಸಾರಾಂಶ

ಕಳೆದ 37 ವರ್ಷಗಳ ಹಿಂದೆ ಮೊದಲ ಬಾರಿ ಶಾಸಕರಾದಾಗಿನಿಂದ ಈವರೆಗೆ ಹಲವು ಬಾರಿ ವಿಧಾನಸೌಧ ಪ್ರವೇಶಿಸಿದ್ದ ಡಿ.ಕೆ. ಶಿವಕುಮಾರ್‌ ಅವರು, ಬುಧವಾರದ ವಿಧಾನಸೌಧ ಪ್ರವೇಶ ಅವರಿಗೆ ಭಾವನಾತ್ಮಕ ಕ್ಷಣವಾಗಿತ್ತು.

  ಬೆಂಗಳೂರು :  ಕಳೆದ 37 ವರ್ಷಗಳ ಹಿಂದೆ ಮೊದಲ ಬಾರಿ ಶಾಸಕರಾದಾಗಿನಿಂದ ಈವರೆಗೆ ಹಲವು ಬಾರಿ ವಿಧಾನಸೌಧ ಪ್ರವೇಶಿಸಿದ್ದ ಡಿ.ಕೆ. ಶಿವಕುಮಾರ್‌ ಅವರು, ಬುಧವಾರದ ವಿಧಾನಸೌಧ ಪ್ರವೇಶ ಅವರಿಗೆ ಭಾವನಾತ್ಮಕ ಕ್ಷಣವಾಗಿತ್ತು.

ನಾಲ್ಕು ಬಾರಿ ಸಚಿವರಾಗಿ, ಒಂದು ಬಾರಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದ ಡಿ.ಕೆ. ಶಿವಕುಮಾರ್‌ ಪ್ರತಿ ಬಾರಿ ಬೆಂಗಾವಲು ಪಡೆಯೊಂದಿಗೆ ನೇರವಾಗಿ ವಿಧಾನಸೌಧದೊಳಕ್ಕೆ ಬರುತ್ತಿದ್ದರು. ಆದರೆ, ಬುಧವಾರ ಮಾತ್ರ ವಿಧಾನಸೌಧದ ಮುಖ್ಯ ಗೇಟ್‌ನಲ್ಲಿಯೇ ತಮ್ಮ ವಾಹನವನ್ನು ನಿಲ್ಲಿಸಿ ವಿಧಾನಸೌಧಕ್ಕೆ ನಮಿಸಿ, ಜತೆಗೆ ವಿಧಾನಸೌಧದ ಮುಂಭಾಗದಲ್ಲಿನ ಮಹನೀಯರಿಗೆ, ರಾಷ್ಟ್ರ ನಾಯಕರಿಗೆ ನಮನ ಸಲ್ಲಿಸಿ ಮುಖ್ಯಮಂತ್ರಿಯಾದ ಮೊದಲ ದಿನದ ಕೆಲಸ ಆರಂಭಿಸಿದರು.

ಲೋಕಭವನದಲ್ಲಿ ಪ್ರಮಾಣವಚನ ಸ್ವೀಕರಿಸಿ, ತಮ್ಮ ನಾಯಕರುಗಳಿಗೆ ಬೀಳ್ಕೊಟ್ಟು ಬೆಂಗಾವಲು ವಾಹನಗಳೊಂದಿಗೆ ಡಿ.ಕೆ. ಶಿವಕುಮಾರ್‌ ವಿಧಾನಸೌಧದತ್ತ ಹೊರಟರು. ಆದರೆ, ಸೀದಾ ವಿಧಾನಸೌಧ ಪ್ರವೇಶಿಸಿದ ಮುಖ್ಯ ಗೇಟ್‌ನಲ್ಲಿ ವಾಹನ ನಿಲ್ಲಿಸಿ, ಡಾ. ಬಿ.ಆರ್‌.ಅಂಬೇಡ್ಕರ್‌, ಬಸವಣ್ಣ, ಕೆಂಪೇಗೌಡ, ಜವಾಹರಲಾಲ್‌ ನೆಹರು ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಅದಾದ ಬಳಿಕ ಬಗ್ಗಿ ಎಲೆಕ್ಟ್ರಿಕ್‌ ವಾಹನದ ಮೂಲಕ ವಿಧಾನಸೌಧ ಆವರಣದಲ್ಲಿನ ಮಹಾತ್ಮಗಾಂಧಿ ಪ್ರತಿಮೆ ಬಳಿಗೆ ತೆರಳಿ ಅಲ್ಲಿಯೂ ಪುಷ್ಪ ನಮನ ಸಲ್ಲಿಸಿದರು. ನಂತರ ಪಕ್ಕದಲ್ಲಿದ್ದ ಮುನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಾಗಿಲಿಗೆ ನಮಿಸಿದ ಸಿಎಂ:

ಮುಖ್ಯಮಂತ್ರಿಯಾದ ಶುಭ ಗಳಿಗೆಯಂದು ವಿಧಾನಸೌಧದ ಉತ್ತರ ಬಾಗಿಲಿನಿಂದ ಪ್ರವೇಶಿಸುವುದಕ್ಕೂ ಮುನ್ನ ತಮ್ಮ ಚಪ್ಪಲಿಯನ್ನು ಬಿಟ್ಟು ಬಾಗಿಲಿಗೆ ಸಾಷ್ಠಾಂಗ ನಮಸ್ಕಾರ ಮಾಡಿದರು. ನಂತರ ಮುಖ್ಯಮಂತ್ರಿ ಕಚೇರಿಗೆ ಪವ್ರೇಶಿಸುವುದಕ್ಕೂ ಮುನ್ನ ಹೊಸಿಲಿಗೆ ನಮಸ್ಕರಿಸಿದರು.

ಅಜ್ಜಯ್ಯ, ಕಂಕೇರಮ್ಮನಿಗೆ ವಿಶೇಷ ಪೂಜೆ:

ದಿನವಿಡೀ ನೊಣವಿನಕೆರೆ ಅಜ್ಜಯ್ಯರನ್ನು ಮನಸ್ಸಿನಲ್ಲೇ ಧ್ಯಾನಿಸುತ್ತಿದ್ದ ಡಿ.ಕೆ. ಶಿವಕುಮಾರ್‌ ಅವರು ವಿಧಾನಸೌಧದ ಮೂರನೇ ಮಹಡಿಯಲ್ಲಿನ ಮುಖ್ಯಮಂತ್ರಿ ಕಚೇರಿಯಲ್ಲಿಯೂ ಅಜ್ಜಯ್ಯರಿಗೆ ವಿಶೇಷ ಪೂಜೆ ಸಲ್ಲಿಸಿದರು. ಅವರೊಂದಿಗೆ ಮನೆ ದೇವರು ಕಂಕೇರಮ್ಮಗೂ ಕಚೇರಿಯಲ್ಲಿ ಪೂಜೆ ಸಲ್ಲಿಸಿದರು. ನಂತರ ಮುಖ್ಯಮಂತ್ರಿ ಖುರ್ಚಿಯಲ್ಲಿ ಆಸೀನರಾಗಿ ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದರು. 

ಸಿಎಂ ಕೊಠಡಿಯಲ್ಲಿ ನೊಣವಿನಕೆರೆ ಶ್ರೀ:

ನೊಣವಿನಕೆರೆ ಮಠದ ಶ್ರೀ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಅವರು ಡಿ.ಕೆ. ಶಿವಕುಮಾರ್‌ ಪ್ರಮಾಣ ವಚನದಲ್ಲಿ ಪಾಲ್ಗೊಂಡು ನಂತರ ನೇರವಾಗಿ ವಿಧಾನಸೌಧಕ್ಕಾಗಮಿಸಿ ಮುಖ್ಯಮಂತ್ರಿ ಕಚೇರಿಯಲ್ಲಿ ಪೂಜೆಗೆ ಅಗತ್ಯ ಸಿದ್ಧತೆ ಮಾಡಿಕೊಂಡರು. ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿ ಕಚೇರಿಗೆ ಬರುವವರೆಗೆ ಅಲ್ಲಿಯೇ ಇದ್ದು, ಪೂಜೆ ನೆರವೇರಿಸುವವರೆಗೆ ಜತೆಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಅರ್ಧ ಡಾಲರ್‌ಗೆ ಉದ್ಯಮಕ್ಕೆ ಕಚೇರಿ ಜಾಗ: ಡಿಕೆಶಿ
ಅಮಲಲ್ಲಿ ಜನ: ಹೈಕೋರ್ಟ್‌ ಕಿಡಿಕಿಡಿ