ವಿಶ್ವದಲ್ಲಿ ಕೋವಿಡ್‌ ಹೆಚ್ಚಿಳ ಭೀತಿ ಕಡ್ಡಾಯ ಕೊರೋನಾ ಪರೀಕ್ಷೆ

KannadaprabhaNewsNetwork | Published : Dec 17, 2023 1:45 AM

ಸಾರಾಂಶ

ಕೇರಳದಲ್ಲಿ ಕೇಸ್‌ ಹೆಚ್ಚಾದ್ದರಿಂದ ಆತಂಕದಿಂದ ರಾಜ್ಯದಲ್ಲಿ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸೋಂಕಿನ ಲಕ್ಷಣವಿರುವವರಿಗೆಲ್ಲ ಪರೀಕ್ಷೆ ನಡೆಸಬೇಕು ಎಂದು ಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ನಿರ್ಧರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇರಳ ಸೇರಿದಂತೆ ವಿವಿಧೆಡೆ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಈ ಬಗ್ಗೆ ಕಟ್ಟೆಚ್ಚರ ಸಾರಲಾಗಿದೆ. ಸೋಂಕು ಲಕ್ಷಣ ಹೊಂದಿರುವವರಿಗೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯ ಕೊರೋನಾ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಕೊರೋನಾ ಎದುರಿಸುವ ಅಗತ್ಯ ಸಿದ್ಧತೆಗಳ ಪರಿಶೀಲನೆಗೆ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಅಣಕು ಪ್ರದರ್ಶನ ನಡೆಸಲು ಹಾಗೂ ಮಂಗಳವಾರ ಕೊರೋನಾ ತಾಂತ್ರಿಕ ಸಮಿತಿ ಸಭೆ ನಡೆಸಲು ಕೂಡ ನಿರ್ಧರಿಸಲಾಗಿದೆ.

ಶನಿವಾರ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ನಡೆದ ಇಲಾಖೆಯ ಸಭೆಯಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ನೆರೆ ರಾಜ್ಯವಾದ ಕೇರಳದಲ್ಲಿ ಪ್ರಕರಣ ಹೆಚ್ಚಾಗಿದ್ದು, ಕೋವಿಡ್‌-19 ಉಪತಳಿ ಜೆಎನ್‌.1 ಪತ್ತೆಯಾಗಿರುವುದಾಗಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಚಿವ ದಿನೇಶ್‌ ಗುಂಡೂರಾವ್‌ ಸಭೆ ನಡೆಸಿದರು.

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೆರೆಯ ಕೇರಳದಲ್ಲಿ ಪ್ರಕರಣ ಹೆಚ್ಚಾಗಿದೆ ಎಂದ ತಕ್ಷಣ ಅಲ್ಲಿಂದ ಬರುವವರನ್ನು ಪರಿಶೀಲನೆಗೆ ಒಳಪಡಿಸಬೇಕು ಅಥವಾ ಗಡಿ ನಿರ್ಬಂಧಿಸಬೇಕು ಎಂಬ ಅವಶ್ಯಕತೆಯಿಲ್ಲ. ಆದರೆ, ರಾಜ್ಯದಲ್ಲಿ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ಸೋಂಕು ಲಕ್ಷಣ ಹೊಂದಿರುವವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯ ಪರೀಕ್ಷೆಗೆ ಒಳಪಡಿಸಬೇಕು ಎಂದು ನಿರ್ಧರಿಸಲಾಗಿದೆ.ಆಸ್ಪತ್ರೆಗಳಲ್ಲಿ ಪರೀಕ್ಷೆಗಳನ್ನು ಹೆಚ್ಚು ಮಾಡುವುದರಿಂದ ಪ್ರಕರಣಗಳು ಹೆಚ್ಚಾದರೆ ಗೊತ್ತಾಗುತ್ತದೆ. ಒಂದು ವೇಳೆ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದು ತಿಳಿದುಬಂದರೆ ಆಗ ಕಟ್ಟುನಿಟ್ಟಿನ ನಿರ್ಬಂಧ ಕ್ರಮಗಳನ್ನು ಮಾಡುವ ಬಗ್ಗೆ ನಿರ್ಧರಿಸಲಾಗುವುದು. ಸದ್ಯಕ್ಕೆ ಅಂತಹ ಯಾವುದೇ ಆತಂಕದ ಸ್ಥಿತಿ ರಾಜ್ಯದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.ಆರ್‌ಟಿ-ಪಿಸಿಆರ್‌ ಕಿಟ್ ಖರೀದಿಗೆ ಟೆಂಡರ್‌:

ರಾಜ್ಯದಲ್ಲಿ ಪ್ರಸ್ತುತ 30,000 ಆರ್‌ಟಿ-ಪಿಸಿಆರ್‌ ಕಿಟ್‌ಗಳು ಲಭ್ಯವಿವೆ. ಈಗಾಗಲೇ ಹೆಚ್ಚುವರಿ ಕಿಟ್‌ಗಳಿಗಾಗಿ ಟೆಂಡರ್‌ ಕರೆದಿದ್ದು, 5-6 ದಿನಗಳಲ್ಲಿ ಹೆಚ್ಚುವರಿ ಕಿಟ್‌ಗಳು ಲಭ್ಯವಾಗಲಿವೆ. ಇವುಗಳ ಮೂಲಕ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕು ಲಕ್ಷಣ ಹೊಂದಿರುವವರಿಗೆ ಕಡ್ಡಾಯವಾಗಿ ಪರೀಕ್ಷೆ ಮಾಡಲಾಗುವುದು ಎಂದರು.ಮಾಕ್‌ ಡ್ರಿಲ್‌ಗೆ ಸೂಚನೆ:

ರಾಜ್ಯದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ಅಗತ್ಯವಿರುವ ವ್ಯವಸ್ಥೆಗಳ ಬಗ್ಗೆ ಪರಿಶೀಲನೆಗೆ ಮಾಕ್‌ ಡ್ರಿಲ್‌ ಮಾಡಲು ಸೂಚಿಸಲಾಗಿದೆ.ತನ್ಮೂಲಕ ಮಾಸ್ಕ್‌, ಔಷಧ, ಆಕ್ಸಿಜನ್ ಸೇರಿದಂತೆ ಚಿಕಿತ್ಸೆ ಹಾಗೂ ಸೋಂಕು ನಿಯಂತ್ರಣಕ್ಕೆ ಅಗತ್ಯವಿರುವ ಸಿದ್ಧತೆಗಳನ್ನು ಪರಿಶೀಲಿಸಿಕೊಳ್ಳಬೇಕು. ನ್ಯೂನ್ಯತೆಗಳಿದ್ದರೆ ಸರಿಪಡಿಸಿಕೊಂಡು ಸನ್ನದ್ಧರಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಿಂದೆ ಜಾಗೃತಿ ಕೊರತೆಯಿಂದ ಅವಘಡಗಳು ಉಂಟಾಗಿವೆ. ಅಂತಹವು ಮರುಕಳಿಸಬಾರದು. ಇಲಾಖಾ ಹಂತದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬ ಕಾರಣಕ್ಕೆ ಮಾಕ್‌ ಡ್ರಿಲ್‌ ಮಾಡಲಾಗುತ್ತಿದೆ ಎಂದು ಹೇಳಿದರು.58 ಮಂದಿ ಸಕ್ರಿಯ ಸೋಂಕಿತರು:ಕೇರಳದಲ್ಲಿ ಪ್ರಕರಣ ಹೆಚ್ಚಾಗಿದ್ದರೂ ರಾಜ್ಯದಲ್ಲಿ ಕೇವಲ 58 ಮಂದಿ ಸಕ್ರಿಯ ಸೋಂಕಿತರಿದ್ದಾರೆ. ಈ ಪೈಕಿ 47 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು 11 ಮಂದಿ ಆಸ್ಪತ್ರೆಗಳಲ್ಲಿ ಇದ್ದಾರೆ.ಕಳೆದ ನಾಲ್ಕು ತಿಂಗಳಿಂದ ಅಕ್ಟೋಬರ್‌ ತಿಂಗಳಲ್ಲಿ ಮಾತ್ರ ಒಬ್ಬರು ಮೃತಪಟ್ಟಿದ್ದಾರೆ. ನವೆಂಬರ್‌ನಲ್ಲಿ ಇನ್‌ಫ್ಲುಯೆಂಜಾ, ವೈರಲ್‌ ಪ್ರಕರಣಗಳು ಹೆಚ್ಚಾಗಿದ್ದವು. ಇದರ ನಡುವೆಯೂ ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗಿಲ್ಲ. ಹಾಗಂತ ನಿರ್ಲಕ್ಷ್ಯ ಮಾಡಲೂ ಸಾಧ್ಯವಿಲ್ಲ ಎಂದು ದಿನೇಶ್‌ ಗುಂಡೂರಾವ್‌ ತಿಳಿದರು.

Share this article