ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮಾಂಗಲ್ಯ ಧಾರಣೆ ಮಾಡಿಸಿಕೊಂಡ (ತಾಳಿ ಕಟ್ಟಿಸಿಕೊಂಡ) ಕೆಲವೇ ನಿಮಿಷಗಳಲ್ಲಿ ಮದುಮಗಳು ಕೊಳ್ಳೇಗಾಲದಲ್ಲಿ ನಡೆಯುತ್ತಿದ್ದ ಬಿಕಾಂ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.ಕೊಳ್ಳೇಗಾಲ ಪಟ್ಟಣದ ನಿವಾಸಿ ಎಂ.ಸಂಗೀತ ಅವರಿಗೆ ಪರೀಕ್ಷೆ ದಿನಾಂಕ ನಿಗದಿಗೂ ಮುನ್ನ ಆರು ತಿಂಗಳ ಹಿಂದೆಯೇ ಮೇ.22ಕ್ಕೆ ಮದುವೆ ನಿಶ್ಚಯವಾಗಿತ್ತು. ಇದೇ ದಿನ ಅವರಿಗೆ ಅಂತಿಮ ಬಿ.ಎ.ಪರೀಕ್ಷೆಯೂ ನಿಗದಿಯಾಗಿತ್ತು. ಈ ಹಿನ್ನೆಲೆ ಎರಡನ್ನು ಸವಾಲಾಗಿ ಸ್ವೀಕರಿಸಿದ ಸಂಗೀತಾ ಬೆಳಗ್ಗೆ 9-20ರಲ್ಲಿ ಮಾಂಗಲ್ಯ ಧಾರಣೆ ಮಾಡಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಕೊಳ್ಳೇಗಾಲದ ವಾಸವಿ ಪ್ರಥಮ ದರ್ಜೆ ಕಾಲೇಜಿನಲ್ಲಿನ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದರು.
ಪರೀಕ್ಷೆಗೆ ತಡವಾಗುತ್ತಿದ್ದಂತೆ ಕಾರಿನಿಂದ ಇಳಿದು ಓಡೋಡಿ ಆತುರಾತುರವಾಗಿ ಆಗಮಿಸಿದ ವಧು ಗಾಬರಿಯಿಂದಲೇ ಪರೀಕ್ಷಾ ಕೇಂದ್ರ ಪ್ರವೇಶಿಸಿದರು. ಪರೀಕ್ಷಾ ಕೇಂದ್ರಕ್ಕೆ ಹಾಜರಾದ ಸಂಗೀತಾಗೆ ಜತೆಯಲ್ಲಿ ಬಂದ ಸಂಬಂಧಿಗಳಾದ ಶಂಭುಲಿಂಗಸ್ವಾಮಿ, ಕುಮಾರಸ್ವಾಮಿ, ಕಿರಣ್, ಮಧು, ಸತೀಶ್ ಇನ್ನಿತರರು ಸಾಥ್ ನೀಡುವ ಜೊತೆಗೆ ಧೈರ್ಯ ತುಂಬಿ ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ಅನುವು ಮಾಡಿಕೊಟ್ಟರು.ಸಂಗೀತಾ ಈಗಾಗಲೇ ಅಂತಿಮ ಬಿಕಾಂ ಪರೀಕ್ಷೆಯಲ್ಲಿನ ಐದು ವಿಷಯಗಳಲ್ಲೂ ಪರೀಕ್ಷೆ ಬರೆದಿದ್ದು ಗುರುವಾರ ಅಂತಿಮ ಪರೀಕ್ಷೆಯಿದ್ದ ಕಾರಣ ತಾಳಿ ಕಟ್ಟಿಸಿಕೊಳ್ಳುತ್ತಿದ್ದಂತೆ ಪರೀಕ್ಷೆ ಬರೆಯಲು ತರಾತುರಿಯಲ್ಲಿ ತೆರಳಿ ಮದುವೆ ಎಷ್ಟು ಮುಖ್ಯವೋ ಜೀವನದಲ್ಲಿ ಸ್ವಾಭಿಮಾನದ ಬದುಕಿಗೆ ವಿದ್ಯೆ (ಪರೀಕ್ಷೆ) ಅಷ್ಟೆ ಮುಖ್ಯ ಎಂಬುದಕ್ಕೆ ಉದಾಹರಣೆಯಾದರು.
ಪತ್ನಿಗೆ ಪ್ರೋತ್ಸಾಹಿಸಿದ ಪತಿ:ತಾಳಿ ಕಟ್ಟಿಸಿಕೊಳ್ಳುತ್ತಿದ್ದಂತೆ ಪರೀಕ್ಷೆಗೆ ತೆರಳಲು ಅಣಿಯಾದ ಪತ್ನಿ ಸಂಗೀತಾರನ್ನು ಉತ್ತಮ ರೀತಿ ಪರೀಕ್ಷೆ ಬರೆಯುವಂತೆ ಪ್ರೋತ್ಸಾಹಿಸಿ ಹುರಿ ದುಂಬಿಸಿ ಕಳುಹಿಸಿಕೊಡುವಲ್ಲಿ ಪತಿ ಯೋಗೀಶ್ ಯಶಸ್ವಿಯಾದರು. ಮೊದಲೇ ನಮ್ಮ ಮದುವೆ ನಿಗದಿಯಾಗಿತ್ತು. ಮದುವೆ ದಿನವೇ ಪರೀಕ್ಷೆ ಇದ್ದ ಕಾರಣ ಪರೀಕ್ಷೆ ಪುನಃ ಬರೆಯಬೇಕಾಗುತ್ತದೆ. 1 ವರ್ಷ ವ್ಯರ್ಥವಾಗುತ್ತೆ. ಬದುಕಿನಲ್ಲಿ ಪರೀಕ್ಷೆಯೂ ಮುಖ್ಯ. ಹಾಗಾಗಿ ತಾಳಿ ಕಟ್ಟಿದ ಕೆಲವೇ ನಿಮಿಷದಲ್ಲಿ ನನ್ನ ಪತ್ನಿ ಸಂಗೀತಾರನ್ನು ಪರೀಕ್ಷಾ ಕೇಂದ್ರಕ್ಕೆ ಸಂತಸದಿಂದಲೇ ಕಳುಹಿಸಿಕೊಟ್ಟೆ.
-ಯೋಗೀಶ್, ಸಂಗೀತಾಳ ಪತಿ