ಕನ್ನಡಪ್ರಭ ವಾರ್ತೆ ಹೊಸಪೇಟೆ
ರಾಜ್ಯ ಸರ್ಕಾರ ಭರವಸೆ ನೀಡಿದಂತೆ ಆಶಾ ಕಾರ್ಯಕರ್ತೆಯರಿಗೆ ಬಜೆಟ್‌ನಲ್ಲಿ ಒಂದು ಸಾವಿರ ರು. ಹೆಚ್ಚಳ ಮಾಡಬೇಕು. ಮುಖ್ಯಮಂತ್ರಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಘೋಷಣೆ ಮೊಳಗಿಸಲಾಯಿತು.
ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ. ಪ್ರಮೋದ್ ಮಾತನಾಡಿ, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಜ. 7ರಿಂದ 10ರವರೆಗೆ ಆಶಾ ಕಾರ್ಯಕರ್ತೆಯರ ರಾಜ್ಯ ಮಟ್ಟದ ಅನಿರ್ದಿಷ್ಟ ಹೋರಾಟ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸಲಾಗಿತ್ತು. ಜ. 10 ರಂದು ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಸಂಘದ ಪದಾಧಿಕಾರಿಗಳನ್ನು ಕರೆದು ಸಭೆ ಮಾಡಿದ್ದರು. ಈ ಸಭೆಯಲ್ಲಿ ಏಪ್ರಿಲ್ 2025ರಿಂದ ಪ್ರತಿ ತಿಂಗಳು ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಠ 10 ಸಾವಿರ ರು. ಗೌರವಧನವನ್ನು ನೀಡಲಾಗುವುದು. ಕಾಂಪೋನೆಂಟ್‌ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟಿವ್ ಕೂಡ ನೀಡಲಾಗುವುದು ಎಂದು ಹೇಳಿದ್ದರು. ಈ ಹಿನ್ನೆಲೆ ಕೂಡಲೇ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ₹10 ಸಾವಿರ ಖಚಿತವಾಗುವಂತೆ ಆದೇಶವನ್ನು ಕೂಡಲೇ ಹೊರಡಿಸಬೇಕು. ಆಯವ್ಯಯದಲ್ಲಿ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ₹ 1000 ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆಯರಿಗೂ ಒಂದು ಸಾವಿರ ರು. ಹೆಚ್ಚಿಸಿ, ಇದೇ ಬಜೆಟ್‌ನಲ್ಲಿ ಸೇರಿಸಿ ಆದೇಶಿಸಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಕಾರ್ಯದರ್ಶಿ ಗೌರಮ್ಮ, ಜಿಲ್ಲಾ ಅಧ್ಯಕ್ಷೆ ಗೀತಾ ಮಾತನಾಡಿದರು.
ಆಶಾ ಕಾರ್ಯಕರ್ತೆಯರಾದ ಮಂಗಳಾ, ಚೆನ್ನಮ್ಮ, ಮಹೇಶ್ವರಿ, ಅನ್ನಪೂರ್ಣ, ಸ್ಫೂರ್ತಿ, ಮಾರೆಕ್ಕ, ಭುವನೇಶ್ವರಿ, ಮಧುಮಾಲತಿ ಮತ್ತಿತರರಿದ್ದರು.