ನವದೆಹಲಿ: ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದ ಬಗೆಹರಿಸಿಕೊಳ್ಳುವ ಸಂಬಂಧ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು ಮಂಗಳವಾರ ಕರೆದಿದ್ದ ಸಭೆಯನ್ನು ತಮಿಳುನಾಡು ಸರ್ಕಾರ ಬಹಿಷ್ಕರಿಸಿದ್ದು, ಇದರಿಂದಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ಉತ್ಸುಕವಾಗಿದ್ದ ಕರ್ನಾಟಕಕ್ಕೆ ಹಿನ್ನಡೆಯಾಗಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಈ ಸಭೆಯಲ್ಲಿ ಭಾಗವಹಿಸಲು ತಮಿಳುನಾಡಿನವರು ಒಪ್ಪಿಲ್ಲ. ಅವರ ಪ್ರತಿನಿಧಿ ಗೈರಾಗಿದ್ದಾರೆ. ಪ್ರತ್ಯೇಕ ದಿನಾಂಕ ನೀಡಿ ಎಂದು ಕೇಳಿದ ಕಾರಣಕ್ಕೆ ಸಭೆ ಮುಂಡೂಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಯಾರ ಬಳಿ ಮಾತನಾಡಬೇಕೊ ಅವರ ಬಳಿ ದೂರವಾಣಿಯಲ್ಲಿ ನಾನು ಮಾತನಾಡಿದ್ದೇನೆ. ಮುಂದಿನ ಸಭೆ ದಿನಾಂಕ ತಿಳಿಸಲಾಗುವುದು ಎಂದು ಹೇಳಿದರು.ಪೆನ್ನಾರ್ ನದಿ ನೀರಿನ ವಿಚಾರವಾಗಿ ಕರ್ನಾಟಕದ ಯೋಜನೆಗಳಿಗೆ ತಮಿಳುನಾಡಿನವರು ತಕರಾರು ಎತ್ತಿದ್ದರು. ಈ ಕಾರಣಕ್ಕಾಗಿ ಕೇಂದ್ರ ಜಲಶಕ್ತಿ ಸಚಿವರ ಸಮ್ಮುಖದಲ್ಲಿ ಎರಡು ರಾಜ್ಯಗಳ ನಡುವೆ ರಾಜಿ ಸಂಧಾನ ಸಭೆಗೆ ನಾನು ಹಾಜರಾಗಿದ್ದೆ. ಮಾರ್ಕಂಡೇಯ ಅಣೆಕಟ್ಟು, ಬೈಲಹಳ್ಳಿ ಬಳಿ ಪಂಪ್ ಹೌಸ್, ವರ್ತೂರು ಕೆರೆಯಿಂದ ನರಸಾಪುರ ಕೆರೆಗೆ ಹಾಗೂ ಮಾಲೂರಿನ ಕಾಟನೂರು ಕೆರೆಗೆ ಪೆನ್ನಾರ್ ನದಿ ನೀರು ಹರಿಸುವ ಕುರಿತು ಕರ್ನಾಟಕ ಯೋಜನೆ ರೂಪಿಸಿತ್ತು ಎಂದು ಹೇಳಿದರು.ತಮಿಳುನಾಡಿನವರು ನ್ಯಾಯಲಯಕ್ಕೆ ತಕರಾರು ಸಲ್ಲಿಸಿದ್ದರು. ಸುಪ್ರೀಂಕೋರ್ಟ್‌ನಲ್ಲಿ ಈ ವಿಚಾರವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಎರಡು- ಮೂರು ಬಾರಿ ದಿನಾಂಕ ಕೊಟ್ಟಿದ್ದರು. ಆದರೆ ಬೆಳಗಾವಿ ಅಧಿವೇಶನವಿದ್ದ ಕಾರಣ ನಾವು ಭಾಗವಹಿಸಲು ಕಷ್ಟವಾಗುತ್ತದೆ ಎಂದು ತಿಳಿಸಿದ್ದೆವು. ಈ ಕಾರಣಕ್ಕೆ ಮಂಗಳವಾರ ಸಭೆ ಏರ್ಪಡಿಸಿದ್ದರು. ನಾವು ಯಾವ ನಿಲುವನ್ನು ವ್ಯಕ್ತಪಡಿಸಬೇಕು ಎಂದು ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡಿದ್ದೇವೆ ಎಂದರು.