ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮಧುವನಹಳ್ಳಿ ಗ್ರಾಮದ ಮಸಣಶೆಟ್ಟಿ (27) ಆತ್ಮಹತ್ಯೆಗೆ ಶರಣಾದ ಯುವಕ. ಈತ ಮದುವೆಗೆ ಹುಡುಗಿ ಸಿಗುತ್ತಿಲ್ಲ ಎಂದು ಖಿನ್ನನಾಗಿದ್ದ. ಮದ್ಯದ ಗೀಳಿಗೆ ದಾಸನಾಗಿದ್ದ ಈತ ಕೆಲ ತಿಂಗಳ ಹಿಂದೆ ಮದ್ಯೆ ಸೇವನೆ ಬಿಟ್ಟಿದ್ದ. ಬಳಿಕ, ಈತನಿಗೆ ಹುಡುಗಿ ಹುಡುಕಲಾಗುತ್ತಿತ್ತು. ಈ ಮಧ್ಯೆ, ಮನೆ ಚಿಕ್ಕದು, ಜಮೀನಿಲ್ಲ ಎಂಬ ಕಾರಣಕ್ಕೆ 2 ಸಂಬಂಧ ಮುರಿದು ಬಿದ್ದವು. ಇದರಿಂದ ಆತ ಮತ್ತಷ್ಟು ವಿಚಲಿತನಾಗಿದ್ದ. ಮಂಗಳವಾರ ಬೆಳಗ್ಗೆ ಆತ ಹೈಟೆನ್ಷನ್ ಕಂಬ ಏರಿರುವ ವಿಚಾರವನ್ನು ಸ್ಥಳೀಯರು ಆತನ ತಾಯಿಗೆ ತಿಳಿಸಿದರು. ತಾಯಿ ಕಣ್ಣೀರು ಹಾಕುತ್ತಾ ಕೆಳಗಿಳಿ ಎಂದು ಪರಿಪರಿಯಾಗಿ ಕೂಗಿದರು. ಆದರೆ, ಮಾತು ಕೇಳದ ಆತ ಕೈ ಮೇಲೆತ್ತಿ ತಂತಿ ಮುಟ್ಟಿ, ಕೊನೆಯುಸಿರೆಳೆದ. ಮಗನ ಶವ ನೇತಾಡುತ್ತಿದ್ದುದ್ದನ್ನು ನೋಡಿ ತಾಯಿ ಅಲ್ಲಿಯೇ ನಿತ್ರಾಣರಾಗಿ ಕುಸಿದು ಬಿದ್ದರು. ಪೊಲೀಸರು ಆಗಮಿಸಿ, ಕಂಬದಿಂದ ನೇತಾಡುತ್ತಿದ್ದ ಯುವಕನ ಶವ ಇಳಿಸಿ, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡರು.