ಶಿವಮೊಗ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಆ.12ರಿಂದ ಮೂರು ದಿನಗಳ ಕಾಲ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದು, ಮಂಗಳವಾರ ನಗರದ ಮಹಾವೀರ ವೃತ್ತದಲ್ಲಿ ಧರಣಿ ನಡೆಸಿದರು.ಕಳೆದ ಜನವರಿ ತಿಂಗಳಲ್ಲಿ ರಾಜ್ಯದ ಸುಮಾರು 42 ಸಾವಿರ ಆಶಾ ಕಾರ್ಯಕರ್ತೆಯರು ಸತತ ನಾಲ್ಕು ದಿನಗಳ ಹೋರಾಟ ಕೈಗೊಂಡಾಗ, ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ಹಾಗೂ ಅಧಿಕಾರಿಗಳು ಪ್ರತಿಯೊಬ್ಬರಿಗೂ ಕೇಂದ್ರದ ಭಾಗಶಃ ಪ್ರೋತ್ಸಾಹಧನ ಮತ್ತು ರಾಜ್ಯದ ಗೌರವ ಧನಗಳನ್ನು ಕ್ರೂಢೀಕರಿಸಿ ಕನಿಷ್ಠ 10 ಸಾವಿರ ರು. ಗೌರವಧನ ಗ್ಯಾರಂಟಿ ಮಾಡುತ್ತೇವೆ. ಬಜೆಟ್‌ನಲ್ಲಿ ಹೆಚ್ಚಳ ಘೋಷಿಸುತ್ತೇವೆ ಎಂದು ಮಾತುಕೊಟ್ಟಿದ್ದರು. ಈಗ 7 ತಿಂಗಳು ಕಳೆದಿದೆ ಕೊಟ್ಟಮಾತು ಈಡೇರಿಸದೇ ಗುಬ್ಬಿಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವಂತೆ ನತದೃಷ್ಟ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆದುಹಾಕಿ ಬೀದಿಪಾಲು ಮಾಡಲು ಹೊರಟಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳು ಘೋಷಿಸಿದ ಕನಿಷ್ಠ 10 ಸಾವಿರ ರು. ಗೌರವಧನ ಏಪ್ರಿಲ್‌ನಿಂದಲೇ ಅನ್ವಯವಾಗುವಂತೆ ಬಿಡುಗಡೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
2025 ಮಾರ್ಚ್ ಬಜೆಟ್‌ನಲ್ಲಿ ಎಲ್ಲಾ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಹೆಚ್ಚಿಸಿದ್ದು, ಆಶಾ ಕಾರ್ಯಕರ್ತೆಯರಿಗೂ ಹೆಚ್ಚಳ ಮಾಡಬೇಕು. ಜನಸಂಖ್ಯೆ ಹೆಚ್ಚಿಸಿ ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು, ಅವೈಜ್ಞಾನಿಕ ಆಶಾ ಪರ್ಫಾಮೆನ್ಸ್ ಅಪ್ರೈಸಲ್ ಕೈಬಿಡಬೇಕು. ಆಶಾ ಸುಗಮಕಾರರನ್ನು ಸೂಕ್ತವೇತನದೊಂದಿಗೆ ಮುಂದವರಿಸಬೇಕು. ನಿವೃತ್ತರಾದ ಆಶಾಗಳಿಗೆ ಪಶ್ಚಿಮ ಬಂಗಾಳದ ಮಾದರಿಯಲ್ಲಿ ಇಡುಗಂಟು ಇಡಬೇಕು. ಕೇಂದ್ರ ಸರ್ಕಾರದ ಹೆಚ್ಚಿಸಿದ ಆಶಾ ಪ್ರೋತ್ಸಾಹಧನವನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು. ನಗರ ಆಶಾಗಳಿಗೆ 2 ಸಾವಿರ ರು. ಗೌರವಧನ ಹೆಚ್ಚಿಸಬೇಕು ಸೇರಿದಂತೆ ಇತ್ಯಾದಿ ಬೇಡಿಕೆಗಳ ಈಡೇರಿಸಬೇಕು ಎಂದು ಒತ್ತಾಯಿಸಿದರು.ಬಳಿಕ ಪ್ರತಿಭಟನಾಕಾರುರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿಯನ್ನು ಮುಂದುವರಿಸಿದ್ದಾರೆ.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ರಾಜೇಶ್ವರಿ, ಚಂದ್ರಕಲಾ, ಸರಸ್ವತಿ, ರೇಣುಕಾ ಮೊದಲಾದವರಿದ್ದರು.