ವೇತನ ಹೆಚ್ಚಳ, ಗೌರವ ಧನ ನಿಗದಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ ।
ವೇತನ ಹೆಚ್ಚಳ, ಗೌರವ ಧನ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್‍ಯಕರ್ತೆಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಸೇರಿದ ಕಾರ್‍ಯಕರ್ತೆಯರು, ಬೆಂಗಳೂರು- ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿದ ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಆಶಾ ಕಾರ್ಯಕರ್ತೆಯರಿಗೆ ಈಗಿರುವ ಗೌರವ ಧನ ಮತ್ತು ಪ್ರೋತ್ಸಾಹ ಧನ ಸೇರಿಸಿ ಒಟ್ಟು 12 ಸಾವಿರ ರು. ಮತ್ತು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ 3 ಸಾವಿರ ರು. ಹೆಚ್ಚಳ ಸೇರಿ ಒಟ್ಟು 15 ಸಾವಿರ ರು. ಮಾಸಿಕ ಗೌರವ ಧನ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಸ್ಮಾರ್ಟ್ ಫೋನ್ ಬಳಕೆಗೆ ಸಂಬಂಧಿಸಿದಂತೆ ಇಲಾಖೆಯ ಹೊಸ ಆದೇಶವು ಆಶಾ ಕಾರ್ಯಕರ್ತೆಯರಿಗೆ ಅಲ್ಲದ ಕೆಲಸವನ್ನು ಹೇರುವ ಉದ್ದೇಶ ಹೊಂದಿದೆ. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಮೊಬೈಲ್ ಕೆಲಸಗಳಿಗೆ ಪ್ರೋತ್ಸಾಹ ಧನ ನಿಗದಿ ಮಾಡಿ ಯಾರಿಗೆ ಮೊಬೈಲ್ ಕೆಲಸ ಮಾಡಲು ಆಗುವುದಿಲ್ಲವೋ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು.
ಆರ್‌ಸಿಎಚ್ ಪೋರ್‍ಟಲ್‌ನಲ್ಲಿ ಸಂಪೂರ್ಣ ಮಾಹಿತಿ ದಾಖಲಿಸುತ್ತಿಲ್ಲ. ಇದರಿಂದ ದುಡಿದ ಹಣ ಕಾರ್‍ಯಕರ್ತೆಯರಿಗೆ ಧಕ್ಕುತ್ತಿಲ್ಲ. ಆದ್ದರಿಂದ ದುಡಿದಷ್ಟು ಹಣ ಆಶಾ ಕಾರ್‍ಯಕರ್ತೆಯರಿಗೆ ದೊರಕುವಂತೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷರಾದ ಪುಷ್ಪಾವತಿ ಎಂ.ಬಿ., ಕಾರ್‍ಯದರ್ಶಿ ಜ್ಯೋತಿ ಕೆ.ವಿ. ಮುಖಂಡರಾದ ಪಲ್ಲವಿ, ಲಕ್ಷ್ಮೀ, ಮಂಜುಳಾ, ಜಾನ್ಸಿ, ರಾಜಮಣಿ, ರಾಣಿ, ಜ್ಯೋತಿ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.