ಆಷಾಢ ಶುಕ್ರವಾರ: ಚಾಮುಂಡಿಬೆಟ್ಟಕ್ಕೆ ಭಕ್ತರ ದಂಡು

KannadaprabhaNewsNetwork |  
Published : Jul 18, 2026, 12:45 AM IST
ಸಿಎಂ ಪತ್ನಿಯಿಂದ ಚಾಮುಂಡಿಗೆ ಪೂಜೆ | Kannada Prabha

ಸಾರಾಂಶ

ಮೊದಲ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಭಕ್ತರ ದಂಡೇ ಹರಿದು ಬಂತು.

ಕನ್ನಡಪ್ರಭ ವಾರ್ತೆ ಮೈಸೂರುಮೊದಲ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಭಕ್ತರ ದಂಡೇ ಹರಿದು ಬಂತು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪತ್ನಿ ಉಷಾ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಚ್.ಡಿ.ರೇವಣ್ಣ, ರಮೇಶ್ ಬಂಡಿಸಿದ್ದೇಗೌಡ, ಕೆ. ಹರೀಶ್‌ ಗೌಡ, ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ, ನಟಿ ಮಾಳವಿಕಾ ಅವಿನಾಶ್ ಸೇರಿದಂತೆ ಹಲವು ಗಣ್ಯರು ಚಾಮುಂಡೇಶ್ವರಿಯ ದರ್ಶನ ಪಡೆದರು.

ಮೊದಲ ಆಷಾಢ ಶುಕ್ರವಾರದ ನಿಮಿತ್ತ ಚಾಮುಂಡೇಶ್ವರಿ ವಿಶೇಷ ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದಳು. ದೇವಸ್ಥಾನದ ಆವರಣ ಬಗೆ, ಬಗೆಯ ಫಲಪುಷ್ಪಗಳಿಂದ ಅಲಂಕೃತಗೊಂಡಿತ್ತು. ಕೆಂಪು, ನೀಲಿ, ಬಿಳಿ, ಹಳದಿ ಬಣ್ಣದ ಸೇವಂತಿಗೆ ಹೂ, ಗುಲಾಬಿ ಹೂ, ಚೆಂಡು ಹೂ ಸೇರಿದಂತೆ ವಿವಿಧ ಬಗೆಯ ಹೂಗಳಿಂದ ದೇವಸ್ಥಾನದ ಆವರಣವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಹೂವಿನಲ್ಲೇ ಶ್ರೀ ಚಾಮುಂಡೇಶ್ವರಿ ಅಮ್ಮ ಎಂದು ಬರೆಯಲಾಗಿತ್ತು.

ಮಧ್ಯರಾತ್ರಿಯೇ ಆಗಮಿಸಿದ್ದ ಭಕ್ತರಿಗೆ ಅಚ್ಚುಕಟ್ಟಾಗಿ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ಉಚಿತ ದರ್ಶನಕ್ಕೆ ಮಲ್ಟಿಲೆವೆಲ್ ಪಾರ್ಕಿಂಗ್ ಬಳಿಯಿಂದಲೇ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. 2 ಸಾವಿರ ರೂ.ಟಿಕೆಟ್ ಪಡೆದು ಬಂದವರು, ವಿಐಪಿಗಳಿಗೆ ಮಹಿಷಾಸುರ ಪ್ರತಿಮೆ ಬಳಿಯಿಂದ ಸರತಿ ಸಾಲಿತ್ತು. ಮೆಟ್ಟಿಲು ಹತ್ತಿ ಬಂದವರಿಗೂ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದವರೆಗೆ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿತ್ತು.ದೇವಿಗೆ ಸೀರೆ ಹರಕೆ ತೀರಿಸಿದ ಸಿಎಂ ಪತ್ನಿ:

ಸಿಎಂ ಡಿ.ಕೆ.ಶಿವಕುಮಾರ್ ಅವರ ಪತ್ನಿ ಉಷಾ ಅವರು ವಿಶೇಷ ಪೂಜೆ ಸಲ್ಲಿಸಿ ತಮ್ಮ ಹರಕೆ ತೀರಿಸಿದರು. ತಮ್ಮ ಪತಿ ಸಿಎಂ ಆದರೆ ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿಗೆ ಸೀರೆ ಉಡಿಸುವುದಾಗಿ ಉಷಾ ಅವರು ಹರಕೆ ಹೊತ್ತಿದ್ದರು. ಉಷಾ ಅವರು ನೀಡಿದ ಕಂದು ಬಣ್ಣದ ರೇಷ್ಮೆ ಸೀರೆಯನ್ನು ತಾಯಿಯ ಮೂಲ ವಿಗ್ರಹಕ್ಕೆ ಉಡಿಸಲಾಗಿತ್ತು.ಬರುವುದು ತಡವಾಗಿದ್ದಕ್ಕೆ ಪ್ರೊಟೋಕಾಲ್‌ ಮೀರದೆ ದೇವಿ ದರ್ಶನ ಪಡೆಯದ ಯತೀಂದ್ರ:ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರಿ ಕಾರು ಬಿಟ್ಟು ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಚಾಮುಂಡಿಬೆಟ್ಟಕ್ಕೆ ಆಗಮಿಸಿದರು. ಆದರೆ, ಅವರು ಬರುವಾಗ 10 ಗಂಟೆ ದಾಟಿತ್ತು. ವಿಐಪಿಗಳಿಗೆ ಬೆಳಗ್ಗೆ 5.30 ರಿಂದ 9.30 ರವರೆಗೆ ಸಮಯ ನಿಗದಿ ಮಾಡಿದ್ದರಿಂದ ದೇವಸ್ಥಾನಕ್ಕೆ ತೆರಳಿ, ದೇವಿಯ ದರ್ಶನ ಪಡೆಯದೆ ಮಾದರಿ ನಡೆ ಅನುಸರಿಸಿದರು. ನಾವೇ ನಿಯಮ ಮಾಡಿ ಅದನ್ನು ಉಲ್ಲಂಘಿಸುವುದು ಸರಿಯಲ್ಲ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿತ್ತು. ಹೀಗಾಗಿ, ದರ್ಶನ ಮಾಡಲಿಲ್ಲ. ಬೇರೆ ಗಣ್ಯರೂ ಶುಕ್ರವಾರ, ಶನಿವಾರ, ಭಾನುವಾರ ಬೆಳಗ್ಗೆ 10 ಗಂಟೆಯೊಳಗೆ ಬನ್ನಿ. ಇದರಿಂದ ಜನ ಸಾಮಾನ್ಯರಿಗೂ ಒಳ್ಳೆಯದಾಗುತ್ತದೆ ಎಂದು ಡಾ.ಯತೀಂದ್ರ ಮನವಿ ಮಾಡಿದರು.ದೇವಿಗೆ ವಿಶೇಷ ಪೂಜೆ:ಮುಂಜಾನೆ 3.30ರಿಂದಲೇ ದೇವಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ಆರಂಭಿಸಲಾಗಿತ್ತು. ದೇವಾಲಯದ ಸಮೀಪವಿರುವ ದೇವಿ ಕೆರೆಯಿಂದ ಜಲವನ್ನು ತಂದು ಚಾಮುಂಡೇಶ್ವರಿ ದೇವಿಗೆ ಮಹನ್ಯಾಸಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕದ ನಂತರ ವಿಶೇಷ ಅಲಂಕಾರ, ಕುಂಕುಮಾರ್ಚನೆ ಹಾಗೂ ಸಹಸ್ರನಾಮಾರ್ಚನೆ ಮಾಡಿ ಷೋಡಶೋಪಚಾರ ಪೂಜೆ ನೆರವೇರಿಸಲಾಯಿತು. ಬೆಳಗ್ಗೆ 9.30ಕ್ಕೆ ದೇವಿಗೆ ಮಹಾ ಮಂಗಳಾರತಿ, ಸಂಜೆ 6 ರಿಂದ 7.30 ರವರೆಗೆ ಅಭಿಷೇಕ ನಡೆಯಿತು. ಬೆಳಗ್ಗೆ 5.30 ರಿಂದ ರಾತ್ರಿ 10 ರವರೆಗೂ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ವಿಜಯಲಕ್ಷ್ಮಿ ದರ್ಶನ್ ಭೇಟಿ:ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಈಗಾಗಲೇ ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಹೀಗಾಗಿ, ವಿಜಯಲಕ್ಷ್ಮಿ ಅವರು, ಸಂಕಷ್ಟ ಪರಿಹಾರಕ್ಕಾಗಿ ತಾಯಿ ಚಾಮುಂಡೇಶ್ವರಿಯ ಮೊರೆಯಿಟ್ಟರು. ನಟ ದರ್ಶನ್ ಆಷಾಢ ಶುಕ್ರವಾರಗಳಂದು ಪ್ರತಿ ವರ್ಷ ಕುಟುಂಬ ಸಮೇತ ಚಾಮುಂಡೇಶ್ವರಿ ದರ್ಶನ ಪಡೆಯುತ್ತಿದ್ದರು. ಅವರ ಅನುಪಸ್ಥಿತಿಯಲ್ಲಿ ವಿಜಯಲಕ್ಷ್ಮಿ ಚಾಮುಂಡೇಶ್ವರಿ ದರ್ಶನ ಪಡೆದರು. ಈ ವೇಳೆ ದರ್ಶನ್ ಅಕ್ಕನ ಮಗ ಚಂದನ್ ಇದ್ದರು.ಚಾಮುಂಡಿ ದರ್ಶನ ಪಡೆದ ರೇವಣ್ಣ:ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಆಷಾಢ ಶುಕ್ರವಾರದ ಹಿನ್ನೆಲೆ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದೇನೆ. ನಾಡಿಗೆ ಒಳ್ಳೆ ಮಳೆ ಬೆಳೆಯಾಗಲೆಂದು ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.ಸುಪ್ರೀಂಕೋರ್ಟ್‌ ನಿಂದ ನೋಟಿಸ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು. ರೇವಣ್ಣ ಟಾರ್ಗೆಟ್ ಆಗ್ತಿದ್ದಾರಾ ಎಂಬ ಪ್ರಶ್ನೆಗೆ, ಟೈಂ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಥಳೀಯ ಸಂಸ್ಥೆ ಚುನಾವಣೆಗೆ ಜೆಡಿಎಸ್ ಪೂರ್ವಸಿದ್ಧತೆ
ಅನಧೀಕೃತ ಶಾಲೆಗೆ ನೋಟಿಸ್‌!