ಸಿಎಂ ಬದಲು ತಿಕ್ಕಾಟಕ್ಕೆ ಅಶೋಕ್‌ ಕಿಡಿ!

KannadaprabhaNewsNetwork |  
Published : Dec 11, 2025, 01:45 AM IST
ಅಶೋಕ್‌ ಭಾಷಣ | Kannada Prabha

ಸಾರಾಂಶ

ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ಉಂಟಾಗಿರುವ ಗೊಂದಲಗಳ ಬಗ್ಗೆ ಬುಧವಾರ ವಿಧಾನಸಭೆಯಲ್ಲಿ ತೀವ್ರ ಚರ್ಚೆಯಾಗಿದ್ದು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಕಿತ್ತಾಟ, ನಾಯಕತ್ವ ಕೊರತೆಯಿಂದ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ವಿಧಾನಸಭೆ

ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ಉಂಟಾಗಿರುವ ಗೊಂದಲಗಳ ಬಗ್ಗೆ ಬುಧವಾರ ವಿಧಾನಸಭೆಯಲ್ಲಿ ತೀವ್ರ ಚರ್ಚೆಯಾಗಿದ್ದು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಕಿತ್ತಾಟ, ನಾಯಕತ್ವ ಕೊರತೆಯಿಂದ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಹೇಳಿದ್ದಾರೆ.

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಬಣ ಕಿತ್ತಾಟದ ನಡುವೆ ಅಧಿಕಾರಿಗಳು ಮಜಾ ಮಾಡುತ್ತಿದ್ದಾರೆ. ನಾಯಕತ್ವ ಇಲ್ಲದಿದ್ದರೆ ರಾಜ್ಯದ ಅಭಿವೃದ್ಧಿ ಅಸಾಧ್ಯ. ಹೀಗಾಗಿ ಆದಷ್ಟು ಬೇಗ ಸಿಎಂ ಸ್ಥಾನದ ಬಗ್ಗೆ ಸೂಕ್ತ ತೀರ್ಮಾನ ಮಾಡಿಕೊಂಡು ಬನ್ನಿ ಎಂದು ಕರೆ ನೀಡಿದರು.

ಉತ್ತರ ಕರ್ನಾಟಕ ಕುರಿತ ಚರ್ಚೆ ವೇಳೆ ಈ ವಿಷಯ ಪ್ರಸ್ತಾಪಿಸಿದ ಅಶೋಕ್‌, ದಿನನಿತ್ಯ ಎರಡೂ ಬಣದವರು ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಸಿಎಂ ಹಾಗೂ ಡಿಸಿಎಂ ಅವರು ಇಡ್ಲಿ ವಡೆ ತಿಂದರೆ ಸಮಸ್ಯೆ ಬಗೆಹರಿಯುವುದಿಲ್ಲ. ಹಾದಿ ಬೀದಿಯಲ್ಲಿ ಸಿಎಂ ಬಗ್ಗೆ ಚರ್ಚಿಸುವುದು ಆ ಹುದ್ದೆಗೆ ಶೋಭೆ ತರಲ್ಲ. ನಿಮ್ಮ ಮನಸ್ಸುಗಳು ಒಂದಾಗಬೇಕು. ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ ನಿರ್ಧರಿಸಿ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಅವರು ಪುಣ್ಯಕೋಟಿ ಕತೆ ಹೇಳುತ್ತಾರೆ. ಇದರಲ್ಲಿ ಹುಲಿ ಯಾರು? ಗೋವು ಯಾರು? ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಆಸೆ ಹೊಂದಿದ್ದಾರೆ. ಆದರೆ, ಬೆಕ್ಕು ಹುಲಿ ಆಗಬೇಕಾದರೆ ಮೊದಲು ಇಲಿ ತಿನ್ನುವುದನ್ನು ಬಿಡಬೇಕು ಎಂದು ಅಶೋಕ್‌ ಮಾರ್ಮಿಕವಾಗಿ ನುಡಿದರು.

ಬೈರತಿ-ಅಶೋಕ್‌ ವಾಗ್ವಾದ:

ಮಾತು ಮುಂದುವರೆಸಿದ ಅಶೋಕ್‌, ಸಚಿವ ಬೈರತಿ ಸುರೇಶ್‌ ಅವರು ಕಿಂಗ್‌ ಈಸ್‌ ಅಲೈವ್‌ ಎನ್ನುತ್ತಾರೆ. ಸಿದ್ದರಾಮಯ್ಯ ಅವರು ಜೀವಂತವಾಗಿದ್ದಾರೆ. ಇಂಥ ವೇಳೆ ಇದನ್ನು ಹೇಳಿದರೆ ಅನುಮಾನ ಬರಲ್ಲವೇ? ಅವರ ಸ್ವಾಮಿ ನಿಷ್ಠೆಗೆ ನಮ್ಮ ಆಕ್ಷೇಪವಿಲ್ಲ. ಅದಕ್ಕೆ ತಕ್ಕ ಉಡುಗೊರೆ ಇರುತ್ತದೆ. ಆದರೆ ಇದರ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ಮಧ್ಯಪ್ರವೇಶಿಸಿದ ಸಚಿವ ಬೈರತಿ, ಸಿದ್ದರಾಮಯ್ಯ ಅವರು ಗಟ್ಟಿ ಮುಟ್ಟಾಗಿದ್ದಾರೆ. ನಾನು ಹೇಳಿರುವ ಅರ್ಥ ಬೇರೆ. ನನಗೆ ಈಗಾಗಲೇ ಸಚಿವ ಸ್ಥಾನದ ಕೊಡುಗೆಯನ್ನು ಸಿಎಂ ನೀಡಿದ್ದಾರೆ. ಮುಂದಿನದು ಹೈಕಮಾಂಡ್‌ ನಿರ್ಧರಿಸುತ್ತದೆ. ನನ್ನ ನಿಯತ್ತು ಕಾಂಗ್ರೆಸ್‌ ಪಕ್ಷಕ್ಕೆ ಎಂದರು.

ಇದೇ ವೇಳೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅಣ್ಣ-ತಮ್ಮಂದಿರ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಬೈರತಿ ಹೇಳಿದಾಗ ಬಿಜೆಪಿ ಸದಸ್ಯರು ಜೋರಾಗಿ ಕೂಗುತ್ತಾ ಛೇಡಿಸಿದರು.

ಇದಕ್ಕೆ ಆಕ್ರೋಶಗೊಂಡ ಬೈರತಿ, ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಅದನ್ನು ನೋಡಿಕೊಳ್ಳಿ. ಅಶೋಕ್‌ ಸ್ಥಾನಕ್ಕೆ ಬರಲು ಅಶ್ವತ್ಥನಾರಾಯಣ್ ಪೈಪೋಟಿ ನಡೆಸುತ್ತಿದ್ದಾರೆ ಎಂದರು.

ಈ ವೇಳೆ ಕೆಲ ಕಾಲ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆದಿದ್ದರಿಂದ ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಸ್ಪೀಕರ್ ಅವರು ಮಧ್ಯಪ್ರವೇಶಿಸಿ ಉತ್ತರ ಕರ್ನಾಟಕ ಕುರಿತು ಚರ್ಚಿಸುವಂತೆ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರೇಕೆರೆ ಒತ್ತುವರಿ ಆರೋಪ: ತುರ್ತು ಕ್ರಮಕ್ಕೆ ಸೂಚನೆ
ಕಾಂಗ್ರೆಸ್‌ ಸರ್ಕಾರ ದಿವಾಳಿಯಾಗಿದೆ: ಮಂಜುಳಾ ಆರೋಪ