ತಮ್ಮ ಹಕ್ಕು, ಕರ್ತವ್ಯಗಳ ಬಗ್ಗೆ ಅರಿಯಿರಿ

KannadaprabhaNewsNetwork |  
Published : Dec 11, 2025, 01:30 AM IST
ಪೊಟೋ: 10ಎಸ್‌ಎಂಜಿಕೆಪಿ01ಶಿವಮೊಗ್ಗದ ಡಿವಿಎಸ್ ಪಿಯು ಸ್ವತಂತ್ರ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸಿಇಒ ಎನ್‌.ಹೇಮಂತ್‌ ಉದ್ಘಾಟಿಸಿದರು. | Kannada Prabha

ಸಾರಾಂಶ

ಎಲ್ಲರನ್ನು ಸಮಾನವಾಗಿ ಕಾಣುವುದು ಕೂಡ ಮಾನವ ಹಕ್ಕಾಗಿದ್ದು, ನಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರ್ಥ ಮಾಡಿಕೊಂಡು ಬೇರೆಯವರ ಮಾನವ ಹಕ್ಕುಗಳನ್ನೂ ಗೌರವಿಸಬೇಕು ಎಂದು ಜಿಪಂ ಸಿಇಒ ಎನ್‌.ಹೇಮಂತ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಿವಮೊಗ್ಗ: ಎಲ್ಲರನ್ನು ಸಮಾನವಾಗಿ ಕಾಣುವುದು ಕೂಡ ಮಾನವ ಹಕ್ಕಾಗಿದ್ದು, ನಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರ್ಥ ಮಾಡಿಕೊಂಡು ಬೇರೆಯವರ ಮಾನವ ಹಕ್ಕುಗಳನ್ನೂ ಗೌರವಿಸಬೇಕು ಎಂದು ಜಿಪಂ ಸಿಇಒ ಎನ್‌.ಹೇಮಂತ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಇಲ್ಲಿನ ಡಿವಿಎಸ್ ಪಿಯು ಸ್ವತಂತ್ರ ಕಾಲೇಜಿನಲ್ಲಿ ಬೆಂಗಳೂರಿನ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಡಿವಿಎಸ್ ಪದವಿಪೂರ್ವ(ಸ್ವತಂತ್ರ) ಕಾಲೇಜು ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜೀವಿಸುವ ಹಕ್ಕು, ಉಚಿತ ಶಿಕ್ಷಣದ ಹಕ್ಕು. ದೌರ್ಜನ್ಯ ವಿರುದ್ಧ ಹಕ್ಕು, ಆರೋಗ್ಯ ಹಕ್ಕು, ಸಮಾನತೆಯ ಹಕ್ಕು ಸೇರಿದಂತೆ ಮಾನವ ಹಕ್ಕುಗಳ ವ್ಯಾಪ್ತಿ ಬಹು ವಿಸ್ತಾರವಾಗಿದೆ. ಎಲ್ಲರೂ ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳ ಬಗ್ಗೆ ತಿಳಿದುಕೊಂಡು ಇತರರ ಹಕ್ಕುಗಳನ್ನು ಗೌರವಿಸಬೇಕು ಎಂದ ಅವರು, ವಿದ್ಯಾರ್ಥಿಗಳು ತಮ್ಮ ತಮ್ಮ ಗುರಿ ಸಾಧನೆ ಮಾಡುವುದು ಕೂಡ ಒಂದು ಕರ್ತವ್ಯವಾಗಿದೆ ಎಂದರು.ವಿದ್ಯಾರ್ಥಿಗಳಾದ ನೀವು ನಿಮ್ಮ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಬಾಲ್ಯ ವಿವಾಹದ ಕುರಿತು ವಿಷಯ ತಿಳಿದಲ್ಲಿ, ಬಾಲ್ಯ ವಿವಾಹವಾಗುತ್ತಿರುವುದು ಕಂಡು ಬಂದಲ್ಲಿ ಸಂಸ್ಥೆಯ ಶಿಕ್ಷಕರು, ಮುಖ್ಯಸ್ಥರು ಹಾಗೂ ಯಾವುದೇ ಅಧಿಕಾರಿಗಳಿಗೆ ತಿಳಿಸಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಮಾತನಾಡಿ, ಪ್ರಸ್ತುತ ಜಗತ್ತಿನಲ್ಲಿ ಮಾಹಿತಿ ಸ್ಫೋಟವಾಗುತ್ತಿದೆ. ಒಂದು ವ್ಯವಸ್ಥೆಯಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇರುತ್ತದೆ. ಒಳ್ಳೆಯದಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಈಗಂತೂ ಸಾಮಾಜಿಕ ಮಾಧ್ಯಮಗಳಲ್ಲಿ ಕೆಟ್ಟ ವಿಷಯಗಳನ್ನು ಸಲೀಸಾಗಿ ಮತ್ತು ಅತಿ ಶೀಘ್ರವಾಗಿ ತಲುಪಿಸಬಹುದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಅತಿ ಎಚ್ಚರಿಕೆಯಿಂದ ಇರಬೇಕು ಎಂದು ಕಿವಿಮಾತು ಹೇಳಿದರು.ವಾಹನ ಪರವಾನಗಿ ಇಲ್ಲದೇ ವಾಹನ ಚಲಾವಣೆ ಮಾಡಬಾರದು. ತಂದೆ ತಾಯಿಯೊಂದಿಗೆ ಹಠ ಮಾಡಿ ನೋಯಿಸಬಾರದು. ಹೀಗೆ ನೋಯಿಸುವುದು ಕೂಡ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಗುರಿ ಸಾಧನೆಯೆಡೆ ಹೆಚ್ಚಿನ ಗಮನ ಹರಿಸಬೇಕೆಂದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ ಸ್ವಾಮಿ ಮಾತನಾಡಿ, ಎಲ್ಲ ನಾಗರಿಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ಶಿಕ್ಷಣದ ಹಕ್ಕಿನ ಬಗ್ಗೆ ಮುಖ್ಯವಾಗಿ ತಿಳಿದುಕೊಳ್ಳಬೇಕು. ಹಕ್ಕುಗಳೊಂದಿಗೆ ತಮ್ಮ ಕರ್ತವ್ಯಗಳ ಬಗ್ಗೆಯೂ ತಿಳಿದುಕೊಳ್ಳುವುದು ಅತಿ ಅವಶ್ಯಕ. ಮಾನವ ಹಕ್ಕುಳಗ ರಕ್ಷಣೆಗೆ ಅನೇಕ ಕಾನೂನುಗಳಿದ್ದು, ಅವುಗಳನ್ನು ತಿಳಿದುಕೊಳ್ಳಬೇಕು ಎಂದ ಅವರು, ನಮ್ಮ ಸಂವಿಧಾನವನ್ನು ಓದಿ ಅದರಂತೆ ನಡೆಯಬೇಕು ಎಂದರು.ಇದೇ ವೇಳೆ ಮಾನವ ಹಕ್ಕುಗಳ ಪ್ರತಿಜ್ಞಾ ವಿಧಿಬೋಧಿಸಲಾಯಿತು.ಎಎಸ್‌ಪಿ ರಮೇಶ್ ಕುಮಾರ್, ಡಿಡಿಪಿಯು ಚಂದ್ರಪ್ಪ ಎಸ್.ಗುಂಡಪಲ್ಲಿ,

ಡಿವಿಎಸ್ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ, ಕಾರ್ಯದರ್ಶಿ ಎಸ್.ರಾಜಶೇಖರ್, ಸಹ ಕಾರ್ಯದರ್ಶಿ ಡಾ.ಎ.ಸತೀಶ್ ಕುಮಾರ್ ಶೆಟ್ಟಿ, ಡಿವಿಎಸ್ ಸ್ವತಂತ್ರ ಕಾಲೇಜಿನ ಪ್ರಾಂಶುಪಾಲರಾದ ಸವಿತಾ ಎನ್.ರಾವ್, ಉಪನ್ಯಾಸಕ ಮಂಜುನಾಥ ಬಣಕಾರ್ ಮತ್ತಿತರರಿದ್ದರು.

2004ರಲ್ಲಿ ನಾನು ಇದೇ ಡಿವಿಎಸ್ ಸ್ವತಂತ್ರ ಕಾಲೇಜಿನಲ್ಲಿ ಪಿಯುಸಿ ಮಾಡಿದ್ದೆ. ಅತ್ಯಂತ ಉತ್ತಮವಾಗಿ, ಶ್ರದ್ಧೆಯಿಂದ ಪ್ರಾಮಾಣಿಕವಾಗಿ ಹಾಗೂ ಶಿಸ್ತುಬದ್ಧವಾಗಿ ಕಲಿಸುತ್ತಿದ್ದರು. ಟ್ಯೂಷನ್‌ಗೆ ಹೋಗುವ ಅವಶ್ಯಕತೆಯೇ ಇರಲಿಲ್ಲ. ಇಂತಹ ಸಂಸ್ಥೆಗಳಲ್ಲಿ ಎಲ್ಲ ವರ್ಗದ ವಿದ್ಯಾರ್ಥಿಗಳು ಬರುತ್ತಾರೆ, ಶಿಕ್ಷಕರು ಸಹ ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ. ಈ ಸಂದರ್ಭದಲ್ಲಿ ನನಗೆ ಪಾಠ ಮಾಡಿ ದಾರಿ ತೋರಿದ ಎಲ್ಲ ಗುರುಗಳನ್ನು ಸ್ಮರಿಸುತ್ತೇನೆ.ಎನ್.ಹೇಮಂತ್, ಜಿ.ಪಂ ಸಿಇಓ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತಿ ಗ್ಯಾರಂಟಿ ರಾಮಣ್ಣನವರಿಗೆ ಅಧಿಕೃತ ಆಹ್ವಾನ
ಬ್ಯಾಂಕ್ ಅಧಿಕಾರಿ, ಸಿಬ್ಬಂದಿ ಕನ್ನಡದಲ್ಲಿಯೇ ವ್ಯವಹರಿಸಿ