ಮಂಡ್ಯ: ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ..!

KannadaprabhaNewsNetwork |  
Published : Dec 11, 2025, 01:30 AM IST
ಎಚ್‌.ಡಿ.ಕುಮಾರಸ್ವಾಮಿ | Kannada Prabha

ಸಾರಾಂಶ

ಮಂಡ್ಯಕ್ಕೆ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಕೊಡುಗೆ ಏನು ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸುವ ಹೊತ್ತಿನಲ್ಲೇ ಕೇಂದ್ರ ಸರ್ಕಾರದಿಂದ ಟ್ರಾಮಾ ಕೇರ್ ಸೆಂಟರ್ ಮತ್ತು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ತರುವುದಕ್ಕೆ ಸಿದ್ಧನಿದ್ದು, ಜಾಗ ದೊರಕಿಸಿಕೊಡುವಂತೆ ಹೊಸ ರಾಜಕೀಯ ದಾಳವನ್ನು ಉರುಳಿಸಿದ್ದಾರೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯಕ್ಕೆ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಕೊಡುಗೆ ಏನು ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸುವ ಹೊತ್ತಿನಲ್ಲೇ ಕೇಂದ್ರ ಸರ್ಕಾರದಿಂದ ಟ್ರಾಮಾ ಕೇರ್ ಸೆಂಟರ್ ಮತ್ತು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ತರುವುದಕ್ಕೆ ಸಿದ್ಧನಿದ್ದು, ಜಾಗ ದೊರಕಿಸಿಕೊಡುವಂತೆ ಹೊಸ ರಾಜಕೀಯ ದಾಳವನ್ನು ಉರುಳಿಸಿದ್ದಾರೆ.

ಈ ಯೋಜನೆಗೆ ಕೇಂದ್ರ ಸರ್ಕಾರದಿಂದಲೇ ಸಂಪೂರ್ಣ ಅನುದಾನ ತರಲಾಗುತ್ತಿದೆ. ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲೇ ಟ್ರಾಮಾ ಸೆಂಟರ್, ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕೆಂಬುದು ಜನರ ಬಯಕೆಯಾಗಿದೆ. ಅದಕ್ಕೆ ರಾಜ್ಯ ಸರ್ಕಾರ ಸೂಕ್ತ ಜಾಗ ನೀಡಬೇಕು. ತುರ್ತಾಗಿ ಪ್ರಸ್ತಾವನೆಯೊಂದನ್ನು ಕಳುಹಿಸಿಕೊಡುವಂತೆ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ರಾಜಕೀಯ ತಂತ್ರಗಾರಿಕೆ ಪ್ರದರ್ಶಿಸಿದ್ದಾರೆ.

ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿದ್ದರೂ ಒಂದೂವರೆ ವರ್ಷದಿಂದ ಜಿಲ್ಲೆಗೆ ಒಂದು ಕೈಗಾರಿಕೆ ತರಲು ಸಾಧ್ಯವಾಗಲಿಲ್ಲ ಎಂಬ ಕಾಂಗ್ರೆಸ್ಸಿಗರ ಟೀಕೆಗೆ ಪ್ರತಿಯಾಗಿ ಎಚ್.ಡಿ.ಕುಮಾರಸ್ವಾಮಿ ಈ ದಾಳ ಉರುಳಿಸಿದ್ದಾರೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಕೈಗಾರಿಕೆ ಸ್ಥಾಪಿಸುವುದಾದರೆ ಎಲ್ಲ ರೀತಿಯಲ್ಲೂ ಸಹಕರಿಸಲು ಸಿದ್ಧ. ಮೊದಲು ಯಾವ ಉದ್ಯಮಿ ಯಾವ ಕೈಗಾರಿಕೆ ತರುತ್ತಾರೆ ಎಂಬ ಬಗ್ಗೆ ಮೊದಲು ಜಿಲ್ಲಾ ಕೈಗಾರಿಕಾ ಸಂಸ್ಥೆಯಲ್ಲಿ ಅರ್ಜಿ ಹಾಕಲಿ ಎಂದು ಕಾಂಗ್ರೆಸ್ಸಿಗರು ಅಣಕಿಸುತ್ತಿದ್ದರು. ಇದೀಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಟ್ರಾಮಾಕೇರ್ ಸೆಂಟರ್‌ಗೆ ಕುಮಾರಸ್ವಾಮಿ ಜಾಗ ಕೊಡಿಸುವಂತೆ ಸವಾಲನ್ನು ಮುಂದಿಟ್ಟು ಕಾಂಗ್ರೆಸ್ಸಿಗರಿಗೆ ತಿರುಗುಬಾಣ ಬಿಟ್ಟಿದ್ದಾರೆ.

ವಿವಾದದಲ್ಲಿ ಆಸ್ಪತ್ರೆ ಜಾಗ:

ಆಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲೋನಿ ಸೇರಿದಂತೆ ರಾಜಕೀಯ ಪ್ರಭಾವಿಗಳು ಹಲವು ದಶಕಗಳಿಂದ ಭದ್ರವಾಗಿ ನೆಲೆಯೂರಿದ್ದಾರೆ. ಆ ಜಾಗವನ್ನು ತೆರವುಗೊಳಿಸುವುದು ಅಧಿಕಾರಸ್ಥ ನಾಯಕರಿಗೆ ಸುಲಭದ ಮಾತಾಗಿಲ್ಲ. ಅದೊಂದು ದೊಡ್ಡ ಸವಾಲಿನ ಕೆಲಸ. ಆ ಸವಾಲನ್ನೇ ಈಗ ಕುಮಾರಸ್ವಾಮಿ ಕಾಂಗ್ರೆಸ್ಸಿಗರ ಎದುರು ಇಟ್ಟಿದ್ದಾರೆ.

ರಾಜಕೀಯ ಪ್ರಭಾವಿಗಳಿರುವ ಜಾಗದ ಮಾತು ಹಾಗಿರಲಿ. ತಮಿಳು ಕಾಲೋನಿ ಜನರನ್ನು ವಿವೇಕಾನಂದ ನಗರ ಬಡಾವಣೆಯಲ್ಲಿ ನಿರ್ಮಿಸಿರುವ ವಸತಿಗೃಹಗಳಿಗೆ ಸ್ಥಳಾಂತರಿಸುವ ಕಾರ್ಯ ಇದುವರೆಗೂ ಜಿಲ್ಲಾಡಳಿತದಿಂದ ಸಾಧ್ಯವಾಗಿಲ್ಲ. ತಮಿಳು ಕಾಲೋನಿ ನಿವಾಸಿಗಳ ಸ್ಥಳಾಂತರಕ್ಕೆ ಹೈಕೋರ್ಟ್ ಆದೇಶ ಮಾಡಿ ಒಂದೂವರೆ ವರ್ಷವಾದರೂ ತೆರವು ಕಾರ್ಯ ನಡೆದಿಲ್ಲ. ಎರಡು-ಮೂರು ಬಾರಿ ನಿವಾಸಿಗಳ ಜೊತೆ ನಡೆಸಿದ ಮಾತುಕತೆಯೂ ಫಲಪ್ರದವಾಗಿಲ್ಲ. ಬಲವಂತವಾಗಿ ತೆರವುಗೊಳಿಸಲು ಮುಂದಾದರೆ ರಾಜಕೀಯವಾಗಿ ನಷ್ಟ ಅನುಭವಿಸಬೇಕಾದಿತೆಂಬ ಭಯ ಸ್ಥಳೀಯ ನಾಯಕರನ್ನು ಕಾಡುತ್ತಿದೆ.

ಕಾಂಗ್ರೆಸ್ ನಾಯಕರಿಗೆ ಬಿಸಿತುಪ್ಪ:

ತಮಿಳು ಕಾಲೋನಿ ನಿವಾಸಿಗಳನ್ನು ತೆರವುಗೊಳಿಸುವುದಕ್ಕಿಂತ ಹೆಚ್ಚಾಗಿ ಆ ಜಾಗದಲ್ಲಿರುವ ಪ್ರಭಾವಿಗಳನ್ನು ತೆರವುಗೊಳಿಸುವುದು ಕಾಂಗ್ರೆಸ್ ನಾಯಕರಿಗೆ ಕಷ್ಟಸಾಧ್ಯವೆನಿಸಿದೆ. ಹೀಗಾಗಿ ತಮಿಳು ಕಾಲೋನಿ ವಿಷಯದಲ್ಲಿ ಮೃದು ಧೋರಣೆ ಅನುಸರಿಸುತ್ತಾ ಬರುತ್ತಿದ್ದಾರೆ. ತಮಿಳು ಕಾಲೋನಿ ನಿವಾಸಿಗಳ ಸ್ಥಳಾಂತರವನ್ನು ಮುಂದೂಡುತ್ತಲೇ ಇದ್ದಾರೆ. ಈಗ ಅದೇ ಅಸ್ತ್ರವನ್ನು ಹಿಡಿದುಕೊಂಡೇ ಕುಮಾರಸ್ವಾಮಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಜಾಗ ದೊರಕಿಸುವಂತೆ ರಾಜ್ಯಸರ್ಕಾರದ ಮುಂದೆ ಬಿಗಿಪಟ್ಟು ಹಿಡಿದಿದ್ದಾರೆ.

ಮಂಡ್ಯ ಜಿಲ್ಲೆಯ ಜನರೆದುರು ಎಚ್.ಡಿ.ಕುಮಾರಸ್ವಾಮಿ ವರ್ಚಸ್ಸನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿರುವರೋ ಅದೇ ಜನರೆದುರು ಕಾಂಗ್ರೆಸ್ ನಾಯಕರು ಮುಖಭಂಗಕ್ಕೊಳಗಾಗುವಂತೆ ಮಾಡುವ ರಾಜಕೀಯ ಕಲೆಗಾರಿಕೆ ಪ್ರದರ್ಶಿಸುತ್ತಿದ್ದಾರೆ. ಜಿಲ್ಲೆಗೆ ಕೈಗಾರಿಕೆ ತರುವುದಕ್ಕೆ ಸಾಧ್ಯವಾಗದಿದ್ದರೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್ ತರುವುದಕ್ಕೆ ಸಿದ್ಧನಿದ್ದೇನೆ. ಕಾಂಗ್ರೆಸ್ಸಿಗರು ಸೂಕ್ತ ಜಾಗ ದೊರಕಿಸಿಕೊಡುತ್ತಿಲ್ಲವೆಂಬ ಹಣೆಪಟ್ಟಿಯನ್ನು ಕಾಂಗ್ರೆಸ್ ತಲೆಗೆ ಕಟ್ಟಿ ಆಟ ಆಡಿಸುವುದು ಕುಮಾರಸ್ವಾಮಿ ಅವರ ರಾಜಕೀಯ ಲೆಕ್ಕಾಚಾರವಾಗಿದೆ.

ಟ್ರಾಮಾ ಕೇರ್ ಸೆಂಟರ್ ಮತ್ತು ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಂಗ್ರೆಸ್‌ನವರನ್ನು ಕುಗ್ಗಿಸುವುದಕ್ಕೆ ಉರುಳಿಸಿದ ದಾಳವೋ ಅಥವಾ ಯೋಜನೆಯನ್ನು ಕಾರ್ಯಗತಗೊಳಿಸಲು ಕುಮಾರಸ್ವಾಮಿ ಸಿದ್ಧರಾಗಿ ಹೇಳಿರುವ ಮಾತುಗಳೋ ಗೊತ್ತಿಲ್ಲ. ಆದರೆ, ಇದು ರಾಜಕೀಯವಾಗಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿರುವುದಂತೂ ಸತ್ಯ.

ಆಸ್ಪತ್ರೆ ತರುವ ನಿರೀಕ್ಷೆ ಇರಲಿಲ್ಲ:

ಮೈಷುಗರ್ ಪ್ರೌಢಶಾಲಾ ಶಿಕ್ಷಕರ ವೇತನಕ್ಕೆ ಕುಮಾರಸ್ವಾಮಿ ಅವರು ಸಂಸದರ ವೇತನದಿಂದ ೨೦ ಲಕ್ಷ ರು. ಹಣವನ್ನು ನೀಡುವ ಮೂಲಕ ಕಾಂಗ್ರೆಸ್‌ನವರ ಬಾಯಿ ಮುಚ್ಚಿಸಿದರು. ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿರುವ ಕುಮಾರಸ್ವಾಮಿ ಅವರು ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ತರುವರೆಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ದಿಢೀರನೆ ಪ್ರಸ್ತಾವನೆ ಕಳುಹಿಸುವಂತೆ ರಾಜ್ಯ ಸರ್ಕಾರವನ್ನು ಕೋರಿರುವುದು ಕೈ ನಾಯಕರನ್ನು ಸಹಜವಾಗಿಯೇ ವಿಚಲಿತರನ್ನಾಗಿ ಮಾಡಿದೆ ಎಂದು ಹೇಳಲಾಗಿದೆ.

ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಕುಮಾರಸ್ವಾಮಿ ತರಲು ಹೊರಟಿರುವ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಟ್ರಾಮಾಕೇರ್ ಸೆಂಟರ್ ಎಷ್ಟರಮಟ್ಟಿಗೆ ಕಾರ್ಯಗತಗೊಳ್ಳುವುದೋ ಗೊತ್ತಿಲ್ಲ. ಆದರೆ, ಉಭಯ ಪಕ್ಷಗಳ ಮುಖಂಡರು-ಕಾರ್ಯಕರ್ತರ ಬಾಯಿಗೆ ಇದೊಂದು ರಾಜಕೀಯ ಚರ್ಚಾ ವಿಷಯವಾಗಿ ಸಿಕ್ಕಂತಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತಿ ಗ್ಯಾರಂಟಿ ರಾಮಣ್ಣನವರಿಗೆ ಅಧಿಕೃತ ಆಹ್ವಾನ
ಬ್ಯಾಂಕ್ ಅಧಿಕಾರಿ, ಸಿಬ್ಬಂದಿ ಕನ್ನಡದಲ್ಲಿಯೇ ವ್ಯವಹರಿಸಿ