ಶಿವಮೊಗ್ಗ: ಹದಿಹರೆಯದ ವಯಸ್ಸಿನಲ್ಲಿ ಅನೇಕ ಆಕರ್ಷಣೆಗಳು ಸಹಜವಾಗಿದ್ದು, ಅಂಧತ್ವದ ಆಕರ್ಷಣೆಗಳಿಗೆ ಬಲಿಯಾಗಬೇಡಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್ ಹೇಳಿದರು.
ಬದುಕಿನಲ್ಲಿ ಒಳಿತು ಕೆಡುಕುಗಳ ಅರಿವಿರಬೇಕು. ವಿದ್ಯಾರ್ಥಿಯ ಪ್ರತಿಯೊಂದು ಸಾಧನೆಯು, ವಿದ್ಯಾಸಂಸ್ಥೆಗೆ ಕೀರ್ತಿಯನ್ನು ನೀಡುತ್ತದೆ. ಕೀರ್ತಿ ಎಂಬುದನ್ನು ಗಳಿಸುವುದು ಎಷ್ಟು ಕಷ್ಟವೊ, ಅದನ್ನು ಉಳಿಸಿಕೊಳ್ಳುವುದು ಅಷ್ಟೇ ಕಷ್ಟ. ಹದಿಹರೆಯದ ವಯಸ್ಸಿನಲ್ಲಿ ಅನೇಕ ಆಕರ್ಷಣೆಗಳು ಸಹಜ. ಪ್ರೀತಿ ಪ್ರೇಮವೆಂಬ ಮೋಹ, ವೇಗವಾಗಿ ಆಕ್ರಮಿಸಿಕೊಂಡು ಬಿಡುತ್ತದೆ. ತನ್ನ ಜವಾಬ್ದಾರಿಗಳನ್ನು ತನಗೇ ತೆಗೆದುಕೊಳ್ಳಲಾಗದ ವಯಸ್ಸಿನಲ್ಲಿ, ಇತರರ ಜವಾಬ್ದಾರಿ ತೆಗೆದುಕೊಳ್ಳುತ್ತೇವೆಯೆ ಎಂಬುದು ಹದಿಹರೆಯದ ಹೃದಯದಲ್ಲಿ ಮೂಡಬೇಕಾದ ಪ್ರಶ್ನೆ ಎಂದರು.ಬದುಕಿನ ರೀತಿಯನ್ನು ಸೃಜನಶೀಲತೆಯೊಂದಿಗೆ ಕ್ರಮಬದ್ಧ ಗೊಳಿಸಿಕೊಳ್ಳಿ. ಬೆಳಗ್ಗೆ ಎದ್ದ ಕೂಡಲೇ, ಯಾವ ಕ್ರಿಯೆಗೆ ಹೆಚ್ಚು ಸಮಯ ನಿಗದಿ ಮಾಡಬೇಕು ಎಂಬ ಬಜೆಟ್ ರೂಪಿಸಿಕೊಳ್ಳಿ. ರಾತ್ರಿ ಮಲಗುವ ಮುಂಚೆ, ಯಾವ ಕೆಲಸಕ್ಕೆ ಹೆಚ್ಚು ಸಮಯ ನೀಡಿದೆ, ಅದರ ಅವಶ್ಯಕತೆಗಳ ಬಗ್ಗೆ ಸ್ವಯಂ ವಿಮರ್ಶೆ ಮಾಡಿಕೊಳ್ಳಿ. ನಿಮ್ಮಲ್ಲಿ ಒಳ್ಳೆಯ ವ್ಯಕ್ತಿತ್ವವಿದ್ದರೆ ಯಾವ ಶಿಫಾರಸ್ಸುಗಳ ಅವಶ್ಯಕತೆ ಇರುವುದಿಲ್ಲ. ದ್ವಂದ್ವಗಳಿಗೆ ಒಳಗಾಗದಂತೆ, ನಿಮ್ಮ ಪೋಷಕರು, ಶಿಕ್ಷಕರು ನೀಡುವ ಸಲಹೆಗಳನ್ನು ಆಧರಿಸಿ ಬದುಕಿನಲ್ಲಿ ಮುಂದಣ ಹೆಜ್ಜೆಯನ್ನು ಇಡಿ ಎಂದು ಹೇಳಿದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಪಿಯು ಕಾಲಘಟ್ಟದಲ್ಲಿ ಅಧ್ಯಯನದಲ್ಲಿ ತೊಡಗಿಸಿಕೊಂಡ ಬಗೆಯ ಆಧಾರದ ಮೇಲೆ, ಮುಂದಿನ ವಿದ್ಯಾಭ್ಯಾಸಕ್ಕೆ ಹಾದಿಯು ನಿರ್ಧಾರವಾಗುತ್ತದೆ. ಸಮಾಜದಲ್ಲಿ ಯಾವುದು ಉಚಿತವಾಗಿ ಸಿಗುವುದಿಲ್ಲ ಎಂಬ ಸತ್ಯವನ್ನು ಸ್ಪಷ್ಟವಾಗಿ ಮನದಟ್ಟು ಮಾಡಿಕೊಳ್ಳಿ. ಸರ್ವತೋಮುಖ ಬೆಳವಣಿಗೆಗಾಗಿ ಸಾಂಸ್ಕೃತಿಕವಾಗಿ ಕ್ರಿಯಾಶೀಲರಾಗಿ. ವಿದ್ಯಾರ್ಥಿ ಬದುಕಿನ ವೇದಿಕೆಗಳು ಜೀವನದ ಪಾಠವನ್ನು ಕಲಿಸಿಕೊಡುತ್ತದೆ ಎಂದು ಹೇಳಿದರು. ಅಂಕದ ಜೊತೆಗೆ ವಿಭಿನ್ನ ಕೌಶಲ್ಯತೆಗಳು ರೂಢಿಸಿಕೊಂಡಾಗ ಮಾತ್ರ ಸಮಾಜ ನಿಮ್ಮನ್ನು ಗುರುತಿಸುತ್ತದೆ. ಪೋಷಕರು ಇಟ್ಟುಕೊಂಡ ಆಶೋತ್ತರಗಳನ್ನು ಪೂರೈಸುವತ್ತ ಚಿತ್ತ ಹರಿಸಿ. ಪ್ರತಿಯೊಂದು ಸಾಧನೆಯ ಹಾದಿಯಲ್ಲಿ ಶ್ರದ್ಧೆ ಮತ್ತು ಆತ್ಮವಿಶ್ವಾಸ ನಿಮ್ಮದಾಗಲಿ ಎಂದು ಹಾರೈಸಿದರು.ಪ್ರಾಂಶುಪಾಲರಾದ ಆರ್.ಆದಿತ್ಯ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಯು ಚಂದ್ರಪ್ಪ. ಎಸ್.ಗುಂಡಪಲ್ಲಿ, ಎನ್ಇಎಸ್ ಆಜೀವ ಸದಸ್ಯರಾದ ರಾಮಪ್ರಾಸದ್ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.