ಕನ್ನಡಪ್ರಭ ವಾರ್ತೆ ಮಂಡ್ಯ
ನೂತನ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ರವಿಕುಮಾರ್ ಮಾರ್ಗದರ್ಶನದಲ್ಲಿ ಈಗಾಗಲೇ ರೈತರೊಂದಿಗೆ ಮಾತುಕತೆ ಆರಂಭಿಸಲಾಗಿದೆ. ಶೀಘ್ರದಲ್ಲೇ ಸ್ಥಳದ ಮಾಹಿತಿ ನೀಡಲಾಗುವುದು. ಇದರ ಮೂಲಕ ನಗರಾಭಿವೃದ್ಧಿ ಪ್ರಾಧಿಕಾರ ನಾಗರಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಪ್ರಾಧಿಕಾರಕ್ಕೆ ಆರ್ಥಿಕ ಬಲ ತುಂಬಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು.
ಅಭಿವೃದ್ಧಿಯಲ್ಲಿ ಮಂಡ್ಯ ನಗರ ಸಂಪೂರ್ಣ ಹಿಂದುಳಿದಿದೆ. ನಗರ ವಿಸ್ತರಣೆಯಾಗದೆ ಸಂಕುಚಿತಗೊಂಡಿದೆ. ಇದರಿಂದ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ. ನಗರವನ್ನು ವಿಸ್ತರಿಸಿ ಅಭಿವೃದ್ಧಿಪಡಿಸಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ. ಈಗಾಗಲೇ ಸಾಹುಕಾರ್ ಚನ್ನಯ್ಯ ಬಡಾವಣೆಯನ್ನು ಹಸ್ತಾಂತರಿಸುವಂತೆ ಕ್ರಮ ವಹಿಸಲಾಗಿದೆ. ಸಾತನೂರು ಫಾರಂ ಬಡಾವಣೆಯನ್ನು ಗ್ರಾಪಂಗೆ ವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.ಹಲವಾರು ಕಾರಣಗಳಿಂದ ವಿವೇಕಾನಂದನಗರ ಬಡಾವಣೆಯ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು, ಇದೀಗ ಒಳಚರಂಡಿ ವ್ಯವಸ್ಥೆಯ ಕಾಮಗಾರಿ ಅಂತಿಮ ಹಂತ ತಲುಪಿದ್ದು ಈಗಿರುವ ಕಾನೂನು ಅಡೆತಡೆಗಳನ್ನು ನಿವಾರಿಸಿ ಬಡಾವಣೆ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಆಯುಕ್ತ ಎಂ.ಪಿ.ಕೃಷ್ಣಕುಮಾರ್ ನಿರ್ದೇಶಕರಾದ ಕಾರ್ತೀಕ್, ಮಹೇಶ್, ಕಮಲಮ್ಮ, ಇದ್ರೀಶ್‌ಖಾನ್ ಇದ್ದರು.ಸಿಬಿಐನಿಂದ ಮರು ತನಿಖೆ: ಎಂ.ಪಿ.ಕೃಷ್ಣಕುಮಾರ್ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ನಿವೇಶನ ಹಂಚಿಕೆ ಹಗರಣಗಳ ಕುರಿತಂತೆ ಸಿಬಿಐ ಮರು ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತ ಎಂ.ಪಿ.ಕೃಷ್ಣಕುಮಾರ್ ಹೇಳಿದರು.ಮುಡಾದಲ್ಲಿ ನಡೆದಿರುವ ೫ ಕೋಟಿ ರು. ನಾಪತ್ತೆ ಪ್ರಕರಣ, ವಿವೇಕಾನಂದ ನಗರ ಬಡಾವಣೆಯಲ್ಲಿರುವ ೧೦೮ ನಿವೇಶನ ಹಗರಣ, ವಿವಿಧ ಸ್ಕೀಂಗಳಲ್ಲಿ ನಡೆದಿರುವ ಅವ್ಯವಹಾರ ಎಲ್ಲವೂ ಸಿಬಿಐ ತನಿಖಾ ವ್ಯಾಪ್ತಿಯಲ್ಲಿವೆ. ತನಿಖೆಗಾಗಿ ಎಲ್ಲಾ ನಿವೇಶನಗಳ ಕಡತಗಳು ಸಿಬಿಐ ವಶದಲ್ಲಿರುವುದರಿಂದ ಬಡಾವಣೆಯಲ್ಲಿ ನಿವೇಶನ ಮಾರಾಟ, ಖಾತೆ, ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲದಕ್ಕೂ ತೊಂದರೆಯಾಗಿದೆ. ಸಿಬಿಐ ತನಿಖೆ ಮುಗಿದು ಎಲ್ಲಾ ಕಡತಗಳನ್ನು ವಾಪಸ್ ನೀಡಿದ ಬಳಿಕವಷ್ಟೇ ಎಲ್ಲಾ ಪ್ರಕ್ರಿಯೆಗಳಿಗೆ ಚಾಲನೆ ಕೊಡಲು ಸಾಧ್ಯ ಎಂದು ಪ್ರಶ್ನೆಯೊಂದಕ್ಕೆ ನುಡಿದರು.ಬೂದನೂರು ಬಳಿ ಬೈಪಾಸ್
ಮಂಡ್ಯ ನಗರದ ಹೊರವಲಯದಲ್ಲಿರುವ ಬೂದನೂರು ಬಳಿಯಿಂದ ಬಲಭಾಗಕ್ಕೆ ಬೈಪಾಸ್ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಸುಮಾರು ೧೧ ಕಿ.ಮೀ. ದೂರದವರೆಗೆ ಬೈಪಾಸ್ ಹಾದುಹೋಗಲಿದೆ. ಈ ರಸ್ತೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಹಾದುಹೋಗುವುದರಿಂದ ಎರಡೂ ಕ್ಷೇತ್ರದ ಶಾಸಕರು ಅಂತಿಮವಾಗಿ ಚರ್ಚಿಸಿ ನಿರ್ಧಾರಕ್ಕೆ ಬರಲಿದ್ದಾರೆ. ಸಂಸದ ಕುಮಾರಸ್ವಾಮಿ ಅವರೊಂದಿಗೂ ಯೋಜನೆ ಕುರಿತಂತೆ ಚರ್ಚಿಸಲಾಗುವುದು ಎಂದರು.ಎರಡು ದಶಕದ ಹಿಂದೆ ರೂಪಿಸಿದ್ದ ಬೈಪಾಸ್ ರಸ್ತೆಯ ಜಾಗದಲ್ಲಿ ಮನೆಗಳು ನಿರ್ಮಾಣಗೊಂಡಿವೆ. ಹಳೆಯ ನಕ್ಷೆಯ ಅನುಸಾರ ಬೈಪಾಸ್ ನಿರ್ಮಾಣ ಕಷ್ಟಸಾಧ್ಯವಾಗಿರುವುದರಿಂದ ಅಲ್ಲಿಂದ ಸ್ವಲ್ಪ ದೂರಕ್ಕೆ ಹೋಗಿ ಬೈಪಾಸ್ ರಸ್ತೆ ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು.
ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸುಮಾರು ೭ ಅಕ್ರಮ ಬಡಾವಣೆಗಳು ನಿರ್ಮಾಣಗೊಂಡಿವೆ. ಇಲ್ಲಿ ಸಿಎ ಜಾಗ ಬಿಡದೆ ೩೦ ಅಡಿ ರಸ್ತೆಗೆ ಜಾಗ ಮೀಸಲಿಡದೆ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಅವುಗಳಿಗೆ ನೋಟಿಸ್ ಜಾರಿಗೊಳಿಸುವ ಮೂಲಕ ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.