ಕನ್ನಡಪ್ರಭ ವಾರ್ತೆ ಬೇಲೂರು
ಪುರಸಭೆ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ಗೊತ್ತುವಳಿ ಸಭೆಯಲ್ಲಿ ಸದಸ್ಯರು ಮುಖ್ಯಾಧಿಕಾರಿ ವಿರುದ್ಧ ಹರಿಹಾಯ್ದರಲ್ಲದೆ ಕುರ್ಚಿಗಳನ್ನು ಪುಡಿ ಮಾಡಿದ್ದು ಇದನ್ನು ಸಂಸದರು ಹಾಗೂ ಶಾಸಕರು ಮೂಕಪ್ರೇಕ್ಷಕರಾಗಿ ನೋಡುವಂತಾಯಿತು.ಶುಕ್ರವಾರ ಮಧ್ಯಾಹ್ನ 12.30ಕ್ಕೆ ಉಪಾಧ್ಯಕ್ಷೆ ಉಷಾ ಅವರ ಅಧ್ಯಕ್ಷತೆಯಲ್ಲಿ ಅವಿಶ್ವಾಸ ನಿರ್ಣಯ ಸಭೆ ನಿಗದಿ ಮಾಡಲಾಗಿತ್ತು. ಸಭೆ ಆರಂಭಕ್ಕೂ ಮುನ್ನವೇ ಸ್ಥಳೀಯ ಶಾಸಕ ಬಿಜೆಪಿಯ ಎಚ್.ಕೆ.ಸುರೇಶ್, ಜೆಡಿಎಸ್‌ನ ಐವರು ಹಾಗೂ ಬಿಜೆಪಿಯ ಒಬ್ಬರು ಸದಸ್ಯರೊಂದಿಗೆ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಆಗಮಿಸಿದರು. ಇದಾದ ಬಳಿಕ ಸಂಸದ ಶ್ರೇಯಸ್ ಪಟೇಲ್ ಸಹ ಆಗಮಿಸಿ, ಎಲ್ಲರೂ ಕುರ್ಚಿಗಳಲ್ಲಿ ಆಸೀನರಾದರು.
ಕಾಂಗ್ರೆಸ್ ಸದಸ್ಯರಾದ ಅಶೋಕ್ ನಾಯಕ್, ಸೌಮ್ಯ ಸುಬ್ರಹ್ಮಣ್ಯ, ಜಮೀಲ್ ಮತ್ತು ದಿವ್ಯ ಗಿರೀಶ್ ನಾಲ್ವರು ಸಭೆಗೆ ಗೈರಾಗಿದ್ದರು.ಮುಖ್ಯಾಧಿಕಾರಿ ಸುಜಯ್ ಸಭೆಯ ನಡಾವಳಿಕೆ ಓದಲು ಆರಂಭಿಸುತ್ತಿದ್ದಂತೆಯೇ ಅವಿಶ್ವಾಸ ಮಂಡನೆಗೆ ದೂರು ನೀಡಿದ್ದ ಭರತ್, ಶಾಂತ್‌ಕುಮಾರ್, ದಾನಿ, ಗಿರೀಶ್, ಅಕ್ರಂ ಮೊದಲಾದವರು, ಮುಖ್ಯಾಧಿಕಾರಿಗೆ ಚುನಾವಣೆ ನಡೆಸುವ ಅಧಿಕಾರವಿಲ್ಲ ಎಂದು ಕಿಡಿಕಾರಿದರು. ನಾಮಿನಿ ಸದಸ್ಯರಾದ ಪರ್ವೇಜ್ ಮತ್ತು ಪ್ರಸನ್ನ ಅವರೂ ದನಿಗೂಡಿಸಿ ಸಭೆಯ ಮಾಹಿತಿ ತಮಗೆ ಸರಿಯಾಗಿ ತಿಳಿಸಿಲ್ಲ ಎಂದು ದೂರಲು ಆರಂಭಿಸಿದರು.
ಅವಿಶ್ವಾಸ ನಿರ್ಣಯ ಸಭೆಯಲ್ಲಿ ಮುಖ್ಯಾಧಿಕಾರಿ ಹಿಡಿದು ಎಳೆದಾಡಿದ ಕೈ ಸದಸ್ಯರು ಸಭೆ ನಡೆಸಲು ಮುಖ್ಯ ಅಧಿಕಾರಿಗೆ ಯಾವುದೇ ಅಧಿಕಾರವಿಲ್ಲ ಎಂದು ಆಕ್ರೋಶ ಹೊರ ಹಾಕಿದರು.ಕೆಲ ಕೈ ಸದಸ್ಯರು ವೇದಿಕೆಯತ್ತ ದೌಡಾಯಿಸಿ ಸುಜಯ್ ಅವರ ಕೊರಳಪಟ್ಟಿ ಹಿಡಿದು ಎಳೆದಾಡಿದರು. ಪುರಸಭೆ ಸಭಾಂಗಣದಿಂದ ಮುಖ್ಯಾಧಿಕಾರಿಯನ್ನು ಹೊರದಬ್ಬಿದರು. ಇನ್ನೂ ಕೆಲವರು ಕುರ್ಚಿ, ಮೇಜುಗಳನ್ನು ಎಳೆದಾಡಿ ಮುರಿದು ಹಾಕಿ ಮೈಕನ್ನು ಧ್ವಂಸಗೊಳಿಸಿದರು.
ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರ ಹರಸಾಹಸ ಪಡಬೇಕಾಯಿತು. ಇದನ್ನೇ ಕಾಯುತ್ತಿದ್ದ ಕಾಂಗ್ರೆಸ್ ಸದಸ್ಯರು ಸಭೆ ಬಹಿಷ್ಕರಿಸಿ ಹೊರ ನಡೆದರು. ಪಿಎಸ್‌ಐ ಎಸ್.ಜಿ. ಪಾಟೀಲ್, ಶೋಭಾ ಅವರು ಮುಖ್ಯಾಧಿಕಾರಿಯನ್ನು ಸದಸ್ಯರಿಂದ ಬಿಡಿಸಿ ಕೊಠಡಿಯೊಳಗೆ ಕರೆತಂದು ಕೂರಿಸಿದರು. ಈ ವೇಳೆ ಪೊಲೀಸ್ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಈ ಗಲಾಟೆಯಿಂದಾಗಿ ಅವಿಶ್ವಾಸ ಯಾರ ಪರ, ಯಾರ ವಿರುದ್ಧ ಎಂಬುದು ಗೊತ್ತಾಗಲಿಲ್ಲ. ಯಾವುದೇ ಫಲಿತಾಂಶ ಇಲ್ಲದೆ ಸಭೆ ಮುಂದೂಡಿರುವುದಾಗಿ ಉಪಾಧ್ಯಕ್ಷ ಸತೀಶ್ ಮಾಹಿತಿ ನೀಡಿದರು.*ಬಾಕ್ಸ್::;:: ಲೋಕಾಯುಕ್ತಕ್ಕೆ ದೂರು ನೀಡುವೆ:
ಶಾಸಕರ ವಿರುದ್ಧ ಶಾಂತಕುಮಾರ್ ಆಕ್ರೋಶಪುರಸಭೆ ಅಧ್ಯಕ್ಷನೊಂದಿಗೆ ಸೇರಿಕೊಂಡು ಮುಖ್ಯ ಅಧಿಕಾರಿ ವಿರುದ್ಧ ಧಿಕ್ಕಾರ ಕೂಗಿ ಭ್ರಷ್ಟಾಚಾರದಲ್ಲಿ ತೊಡಗಿರುವ ನಿನ್ನ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು. ಜೊತೆಗೆ ಜೈಲಿಗೆ ಕಳುಹಿಸುವವರೆಗೂ ಹೋರಾಟ ಮಾಡುತ್ತೇವೆ. ಕೋಟ್ಯಂತರ ರು. ಭ್ರಷ್ಟಾಚಾರ ಮಾಡಿರುವ ಪುರಸಭಾ ಅಧ್ಯಕ್ಷನಿಗೆ ಶಾಸಕರು ಸೇರಿದಂತೆ ಉಳಿದ ಸದಸ್ಯರು ಬೆಂಬಲ ನೀಡುತ್ತಿದ್ದು ಬೇಲೂರು ಪುರಸಭೆಯನ್ನು ಭ್ರಷ್ಟಾಚಾರದ ಕೂಪವಾಗಿಸಲು ಹೊರಟಿದ್ದಾರೆ ಎಂದು ಬೇಲೂರು ಪುರಸಭೆ ಮಾಜಿ ಅಧ್ಯಕ್ಷ ಜಿ.ಶಾಂತಕುಮಾರ್ ಹೇಳಿದರು.