- ನ್ಯಾಯಾಲಯ ಕಲಾಪದಿಂದ ದೂರ ಉಳಿದು ಪ್ರತಿಭಟನೆ: ಸೂಕ್ತ ಭದ್ರತೆಗೆ ಆಗ್ರಹ
ಕನ್ನಡಪ್ರಭ ವಾರ್ತೆ ಜಗಳೂರು
ವಕೀಲರಿಗೆ ಸೂಕ್ತ ಭದ್ರತೆ ಇಲ್ಲದಿರುವುದು ಆತಂಕಕಾರಿ ಸಂಗತಿಯಾಗಿದೆ. ಹಾಡಹಗಲೇ ವಕೀಲರ ಮೇಲೆ ಕೊಲೆ ಹಾಗೂ ಮಾರಣಾಂತಿಕ ಹಲ್ಲೆಗಳು ನಡೆಯುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಗಳಾಗಿವೆ. ನ್ಯಾಯಕ್ಕಾಗಿ ಹೋರಾಡುವ ವಕೀಲರೇ ಭಯದ ವಾತಾವರಣದಲ್ಲಿ ಬದುಕುವಂತಾಗಿರುವುದು ದುರದೃಷ್ಟಕರ ಎಂದು ಜಗಳೂರು ವಕೀಲರ ಸಂಘದ ಅಧ್ಯಕ್ಷ ಡಿ.ವಿ.ನಾಗಪ್ಪ ಹೇಳಿದರು.ಬೆಂಗಳೂರಿನ ವೈಟ್‌ಫೀಲ್ಡ್‌ನ ವಕೀಲ ಮಂಜುನಾಥ್, ಅನ್ನಪೂರ್ಣೇಶ್ವರಿ ನಗರದ ವಕೀಲ ಶ್ರೀರಾಮ್ ಮತ್ತು ಮಂಜುನಾಥ್ ಅವರ ಹತ್ಯೆ ಹಾಗೂ ಗೌರಿಬಿದನೂರಿನ ವಕೀಲ ವೆಂಕಟರಮಣ ಸಣ್ಣಕ್ಕಿ ಮೇಲಿನ ಕೊಲೆ ಯತ್ನವನ್ನು ಖಂಡಿಸಿ ವಕೀಲರ ಸಂಘದ ಅಧ್ಯಕ್ಷ ಡಿ.ವಿ.ನಾಗಪ್ಪ ನೇತೃತ್ವದಲ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ನಂತರ ಅವರು ಮಾತನಾಡಿದರು.
ಸಂಘದ ಕಾರ್ಯದರ್ಶಿ ಬಿ.ಪಿ.ಓಂಕಾರಪ್ಪ ಮಾತನಾಡಿ, ವಕೀಲರ ಮೇಲಿನ ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ಕೃತ್ಯ ಎಸಗುವವರ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಬೇಕು ಎಂಬ ಉದ್ದೇಶದಿಂದ ಸಂಘದ ಸರ್ವ ಸದಸ್ಯರು ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
- - -