ಇತ್ತೀಚಿಗೆ ವಕೀಲರ ಮೇಲೆ ಹೆಚ್ಚುತ್ತಿರುವ ಹಲ್ಲೆ, ದೌರ್ಜನ್ಯ ಹಾಗೂ ಬೆದರಿಕೆ ಪ್ರಕರಣಗಳನ್ನು ಖಂಡಿಸಿ ರಾಜ್ಯ ವಕೀಲರ ಪರಿಷತ್ ಮತ್ತು ರಾಜ್ಯ ಸಂಘಟನೆಯ ನಿರ್ದೇಶನದ ಮೇರೆಗೆ ಮಂಗಳವಾರ ಜಿಲ್ಲಾದ್ಯಂತ ವಕೀಲರು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಹಾವೇರಿ:ಇತ್ತೀಚಿಗೆ ವಕೀಲರ ಮೇಲೆ ಹೆಚ್ಚುತ್ತಿರುವ ಹಲ್ಲೆ, ದೌರ್ಜನ್ಯ ಹಾಗೂ ಬೆದರಿಕೆ ಪ್ರಕರಣಗಳನ್ನು ಖಂಡಿಸಿ ರಾಜ್ಯ ವಕೀಲರ ಪರಿಷತ್ ಮತ್ತು ರಾಜ್ಯ ಸಂಘಟನೆಯ ನಿರ್ದೇಶನದ ಮೇರೆಗೆ ಮಂಗಳವಾರ ಜಿಲ್ಲಾದ್ಯಂತ ವಕೀಲರು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಎದುರು ಜಿಲ್ಲಾ ನ್ಯಾಯವಾದಿಗಳ ಸಂಘದ ನೇತೃತ್ವದಲ್ಲಿ ಜಮಾಯಿಸಿದ ವಕೀಲರು, ತಮ್ಮ ವೃತ್ತಿ ನಿರ್ವಹಣೆಗೆ ಅಡ್ಡಿಪಡಿಸುವ ಹಾಗೂ ಹಲ್ಲೆ ನಡೆಸುವ ಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ಎಲ್ಲ ನ್ಯಾಯಾಲಯಗಳ ನ್ಯಾಯವಾದಿಗಳು ಕಲಾಪಗಳಿಂದ ದೂರ ಉಳಿದು ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ವಕೀಲರ ವೃತ್ತಿಪರ ಸುರಕ್ಷತೆ ಮತ್ತು ಹಿತರಕ್ಷಣೆಗೆ ಸರ್ಕಾರ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಾರ್ವಜನಿಕರಿಗೆ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ನ್ಯಾಯವಾದಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯಾಯದಾನದ ಪ್ರಕ್ರಿಯೆಯಲ್ಲಿ ಸತ್ಯಾಂಶಗಳನ್ನು ಹೊರತರುವಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ. ಇಂತಹ ವೃತ್ತಿಯಲ್ಲಿ ತೊಡಗಿರುವವರ ಮೇಲೆಯೇ ಹಲ್ಲೆ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಹಲ್ಲೆ ನಡೆಸುವುದು, ಬೆದರಿಕೆ ಹಾಕುವುದು ಹಾಗೂ ನ್ಯಾಯಾಲಯದ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವ ಪ್ರಕರಣಗಳು ವಕೀಲರ ವಲಯದಲ್ಲಿ ಆತಂಕ ಮೂಡಿಸಿವೆ. ವಕೀಲರು ನಿರ್ಭೀತಿಯಿಂದ ವೃತ್ತಿ ನಿರ್ವಹಿಸಲು ಸೂಕ್ತ ರಕ್ಷಣೆ ಅಗತ್ಯವಾಗಿದೆ. ಹೀಗಾಗಿ ವಕೀಲರ ಮೇಲಿನ ಹಲ್ಲೆ ಮತ್ತು ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ವಕೀಲರ ರಕ್ಷಣೆಗೆ ಪ್ರತ್ಯೇಕ ಕಾನೂನು ರೂಪಿಸುವ ಮೂಲಕ ಅವರ ವೃತ್ತಿಪರ ಸುರಕ್ಷತೆಯನ್ನು ಖಚಿತಪಡಿಸಬೇಕು. ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ವಕೀಲರಿಗೆ ಯಾವುದೇ ರೀತಿಯ ಬೆದರಿಕೆ ಅಥವಾ ಅಡ್ಡಿ ಉಂಟಾಗದಂತೆ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ವಕೀಲರ ಹಿತರಕ್ಷಣೆಗೆ ಸಂಬಂಧಿಸಿದ ಬೇಡಿಕೆಗಳನ್ನು ಸರ್ಕಾರ ಶೀಘ್ರ ಈಡೇರಿಸಬೇಕು ಎಂದು ಒತ್ತಾಯಿಸಿ ತಮ್ಮ ಪ್ರತಿಭಟನೆಯ ಮೂಲಕ ಸರಕಾರದ ಗಮನ ಸೆಳೆದರು.

ಪ್ರತಿಭಟನೆಯಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್.ಸಿ. ಸಿದ್ದನಗೌಡ್ರ, ಉಪಾಧ್ಯಕ್ಷರಾದ ಎಸ್.ಸಿ. ಪಾಟೀಲ, ಕಾರ್ಯದರ್ಶಿ ಪಿ.ಎಸ್. ಹೆಬ್ಬಾಳ, ಜಂಟಿ ಕಾರ್ಯದರ್ಶಿ ಸಿ.ಎಸ್. ಹಿರೇಮಠ, ಖಜಾಂಚಿ ಸಿ.ಎಂ. ನೆಗಳೂರ, ಕಾರ್ಯಕಾರಿ ಸಮಿತಿ ಸದಸ್ಯರಾದ ಜಿ.ಬಿ. ಅಂದಾನಿಗೌಡ್ರ, ಎಸ್.ಸಿ. ಕುರವತ್ತಿಗೌಡ್ರ, ಸಿ.ವಿ. ಬಡಿಗೇರ, ಎಸ್.ಬಿ. ಹಳೆಮನಿ, ಜಿ.ಕೆ. ನಾಗನೂರ, ಎಸ್.ಸಿ. ಪೂಜಾರ, ಹಿರಿಯ ನ್ಯಾಯವಾದಿಗಳಾದ ಎ.ಸಿ. ನೀರಲಗಿ, ಸಿ.ಎಚ್. ಗುಡಗೂರ, ವಿ.ಜಿ. ದೊಡ್ಡಗೌಡರ, ಎನ್.ಎಸ್. ಪಾಟೀಲ, ಎಸ್.ಜಿ. ಹೊನ್ನಪ್ಪನವರ, ವಿ.ಜಿ. ಯಳಗೇರಿ, ಎಂ.ಸಿ. ಹೊಸಮನಿ, ಪಿ.ಸಿ. ಬಣಕಾರ, ಸಿ.ಎಂ. ಸುರಳಿಹಳ್ಳಿ ಸೇರಿದಂತೆ ಜಿಲ್ಲಾ ನ್ಯಾಯಾಲಯದ ಹಿರಿಯ, ಕಿರಿಯ ನ್ಯಾಯವಾದಿಗಳು ಪಾಲ್ಗೊಂಡಿದ್ದರು.