ಬೀದಿ ನಾಯಿಗಳ ಸಂತಾನೋತ್ಪತ್ತಿ ನಿಯಂತ್ರಿಸಲು ಪಾಲಿಕೆ 2018ರಲ್ಲಿಯೇ ಶಸ್ತ್ರಚಿಕಿತ್ಸೆ ಕಾರ್ಯ ಆರಂಭಿಸಿತ್ತು.

ಮಂಜುನಾಥ ಕೆ.ಎಂ. ಬಳ್ಳಾರಿ

ಬಳ್ಳಾರಿ ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಕೈಗೊಂಡಿರುವ ಸಂತಾನಹರಣ ಶಸ್ತ್ರಚಿಕಿತ್ಸೆ ಅಭಿಯಾನಕ್ಕೆ ಭಾರೀ ವೇಗ ದೊರೆತಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 6,286 ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಇದಕ್ಕಾಗಿ ಪಾಲಿಕೆ ₹90 ಲಕ್ಷಕ್ಕೂ ಅಧಿಕ ಹಣ ವ್ಯಯಿಸಿದೆ.

ನಾಯಿಗಳ ಸಂತಾನೋತ್ಪತ್ತಿ ನಿಯಂತ್ರಿಸುವುದರ ಜತೆಗೆ ರೇಬಿಸ್ ರೋಗ ತಡೆಗಟ್ಟುವ ಉದ್ದೇಶದಿಂದ ನಾಯಿಗಳಿಗೆ ಲಸಿಕೆ ಹಾಕುವ ಕಾರ್ಯ ಕೈಗೊಳ್ಳಲಾಗಿದೆ.

ನಗರದಲ್ಲಿ ಸುಮಾರು 18 ಸಾವಿರ ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ರಸ್ತೆಗಳು, ಬಡಾವಣೆ, ಶಾಲಾ-ಕಾಲೇಜುಗಳ ಆವರಣ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿರುವುದು ನಾಯಿ ಕಡಿತದ ಪ್ರಕರಣಗಳಿಗೂ ಕಾರಣವಾಗಿತ್ತು.ಈ ಹಿನ್ನೆಲೆ ಮಹಾನಗರ ಪಾಲಿಕೆ ಕಳೆದ 2025ರ ಮೇ 1ರಿಂದ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುವ ಕಾರ್ಯಕ್ಕೆ ಚಾಲನೆ ನೀಡಿದ್ದು, ನಿರಂತರವಾಗಿ ಅಭಿಯಾನ ಮುಂದುವರಿಸಿದೆ.

ಹಿಂದಿನ ಪ್ರಯತ್ನಗಳಿಗೆ ಹಿನ್ನಡೆ: ಬೀದಿ ನಾಯಿಗಳ ಸಂತಾನೋತ್ಪತ್ತಿ ನಿಯಂತ್ರಿಸಲು ಪಾಲಿಕೆ 2018ರಲ್ಲಿಯೇ ಶಸ್ತ್ರಚಿಕಿತ್ಸೆ ಕಾರ್ಯ ಆರಂಭಿಸಿತ್ತು. ಆದರೆ,ಈ ಜವಾಬ್ದಾರಿ ಹೊತ್ತಿದ್ದ ಏಜೆನ್ಸಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಪ್ರಾಣಿ ದಯಾ ಸಂಘದ ಆಕ್ಷೇಪದಿಂದ ಕಾರ್ಯಾಚರಣೆಗೆ ಹಿನ್ನಡೆಯಾಗಿತ್ತು. ಬಳಿಕ 2020-21ರಲ್ಲಿ ಸುಮಾರು 4 ಸಾವಿರ ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೆ ಟೆಂಡರ್ ಪಡೆದ ಏಜೆನ್ಸಿಯ ಒಂದು ವರ್ಷದ ಅವಧಿ ಮುಕ್ತಾಯಗೊಂಡ ನಂತರ ಕಾರ್ಯ ಸ್ಥಗಿತಗೊಂಡಿತು. ನಂತರ ಪಾಲಿಕೆ ಟೆಂಡರ್ ಆಹ್ವಾನಿಸಿದರೂ ಯಾವುದೇ ಏಜೆನ್ಸಿಗಳು ಭಾಗವಹಿಸದ ಕಾರಣ ಯೋಜನೆ ಮುಂದುವರಿಯಲು ಸಾಧ್ಯವಾಗಿರಲಿಲ್ಲ. ಇದೀಗ ಕಳೆದ ವರ್ಷದಿಂದ ಮತ್ತೆ ಕಾರ್ಯಾಚರಣೆಗೆ ವೇಗ ದೊರೆತಿದ್ದು, ಆರು ಸಾವಿರಕ್ಕೂ ಅಧಿಕ ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿರುವುದು ಗಮನಾರ್ಹ.

ಒಂದು ನಾಯಿಗೆ ₹1,650 ವೆಚ್ಚ: ಒಂದು ಬೀದಿ ನಾಯಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು ಪಾಲಿಕೆಯಿಂದ ₹1,450 ಹಾಗೂ ರೇಬಿಸ್ ನಿರೋಧಕ ಲಸಿಕೆ ನೀಡಲು ₹200 ವೆಚ್ಚ ಮಾಡಲಾಗುತ್ತಿದೆ. ಈ ಮೂಲಕ ಸಂತಾನೋತ್ಪತ್ತಿ ನಿಯಂತ್ರಣದ ಜತೆಗೆ ರೇಬಿಸ್ ಸೋಂಕಿನ ಅಪಾಯ ತಗ್ಗಿಸಲು ಕ್ರಮ ಕೈಗೊಳ್ಳಲಾಗಿದೆ. ಶಸ್ತ್ರಚಿಕಿತ್ಸೆಗೊಳಪಡಿಸಿದ ನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ ನೀಡುವುದರಿಂದ ರೋಗ ಹರಡುವ ಅಪಾಯ ತಗ್ಗಿಸಬಹುದು. ಅಲ್ಲದೆ, ಶಸ್ತ್ರಚಿಕಿತ್ಸೆಯ ನಂತರ ನಾಯಿಗಳ ಆಕ್ರಮಣಕಾರಿ ವರ್ತನೆ ಕಡಿಮೆಯಾಗುತ್ತದೆ. ಇದರಿಂದ ಸಾರ್ವಜನಿಕರ ಮೇಲೆ ನಾಯಿ ದಾಳಿಯ ಪ್ರಮಾಣ ನಿಯಂತ್ರಣಕ್ಕೆ ಬರಲು ಸಹಕಾರಿಯಾಗಿದೆ ಎಂಬುದು ಪಾಲಿಕೆ ಅಧಿಕಾರಿಗಳ ಅಭಿಪ್ರಾಯ.

ಮುಂದುವರಿಯಬೇಕಿದೆ ಅಭಿಯಾನ: ನಗರದಲ್ಲಿ ಅಂದಾಜು 18 ಸಾವಿರ ಬೀದಿ ನಾಯಿಗಳಿದ್ದು, ಈ ಪೈಕಿ 6,286 ನಾಯಿಗಳಿಗೆ ಮಾತ್ರ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಉಳಿದ ನಾಯಿಗಳಿಗೂ ಹಂತ ಹಂತವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ಲಸಿಕೆ ನೀಡುವ ಕಾರ್ಯ ಮುಂದುವರಿಸಬೇಕಿದೆ.

ಸಹಜವಾಗಿ ಬೀದಿ ನಾಯಿಗಳು ಮರಿ ಹಾಕಿದಾಗ ದಾಳಿ ಮಾಡುವುದು ಹೆಚ್ಚು. ನಾಯಿಗಳು ತಮ್ಮ ಮರಿಗಳಿಗೆ ಜನರು ತೊಂದರೆ ಕೊಡುತ್ತಾರೆ ಎಂಬ ಕಾರಣಕ್ಕೆ ದಾಳಿ ನಡೆಸುತ್ತವೆ. ಇನ್ನು ದೊಡ್ಡವರಿಗಿಂತ ಮಕ್ಕಳ ಮೇಲೆ ದಾಳಿಗೆ ಎರಗುವುದು ಹೆಚ್ಚು. ಬೇಸಿಗೆ ಕಾಲದಲ್ಲಿ ದಾಳಿಯ ಪ್ರಮಾಣ ತೀರಾ ಕಡಿಮೆ ಇರುತ್ತದೆ. ಶಸ್ತ್ರಚಿಕಿತ್ಸೆ ಬಳಿಕ ನಗರದಲ್ಲಿ ಬೀದಿ ನಾಯಿಗಳ ದಾಳಿ ಪ್ರಮಾಣ ಒಂದಷ್ಟು ಕುಸಿದಿದೆ ಎನ್ನುತ್ತಾರೆ ಪಾಲಿಕೆಯ ಅಧಿಕಾರಿಗಳು.

ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ನಿರಂತರವಾಗಿ ಮುಂದುವರಿಯಲಿದ್ದು, ಸಾರ್ವಜನಿಕರ ಒತ್ತಾಸೆಯಂತೆ ಎಲ್ಲ ಬೀದಿ ನಾಯಿಗಳಿಗೆ ಸುರಕ್ಷಿತವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿ ದಾಳಿಯ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು ಎಂದು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ತಿಳಿಸಿದ್ದಾರೆ.