ಹಸಿರು ಸ್ವಾಮೀಜಿ ಎಂದೆ ಪ್ರಸಿದ್ದರಾದ ಸ್ವರ್ಣವಲ್ಲಿ ಗಂಗಾಧರೇಂದ್ರ ಶ್ರೀಗಳ ಸಂಪೂರ್ಣ ಬೆಂಬಲ, ಆಶೀರ್ವಾದ ಹೋರಾಟಕ್ಕೆ ಭೀಮಬಲವನ್ನು ತಂದುಕೊಟ್ಟಿತು.
ವಸಂತಕುಮಾರ್ ಕತಗಾಲ
ಯಲ್ಲಾಪುರ: ಉತ್ತರ ಕನ್ನಡದ ನದಿಗಳ ಹರಿವನ್ನು ತಿರುಗಿಸುವ ಬೇಡ್ತಿ- ವರದಾ ಹಾಗೂ ಅಘನಾಶಿನಿ- ವೇದಾವತಿ ನದಿ ಜೋಡಣೆ ಯೋಜನೆಗಳ ವಿರುದ್ಧ ಯಲ್ಲಾಪುರದಲ್ಲಿ ಜನಾಕ್ರೋಶದ ಮಹಾಪೂರವೇ ಹರಿಯಿತು. ಹಳ್ಳಿ ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಹರಿದುಬಂದ ಜನರು, ಜಾಗಟೆಗಳ ಸದ್ದು, ಪರಿಸರ ಗೀತೆಗಳ ಮೊಳಗು, ಘೋಷಣೆಗಳ ಅಬ್ಬರದೊಂದಿಗೆ ಯೋಜನೆಗಳ ವಿರುದ್ಧ ರಣಕಹಳೆ ಮೊಳಗಿಸಿದರು.ಹತ್ತು ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದ ಬೃಹತ್ ಪ್ರತಿಭಟನೆ, ಜಿಲ್ಲೆಯ ಪರಿಸರ ಸಂರಕ್ಷಣೆಯ ಹೋರಾಟಕ್ಕೆ ಹೊಸ ಶಕ್ತಿ ತುಂಬಿತು.ಹಸಿರು ಸ್ವಾಮೀಜಿ ಎಂದೆ ಪ್ರಸಿದ್ದರಾದ ಸ್ವರ್ಣವಲ್ಲಿ ಗಂಗಾಧರೇಂದ್ರ ಶ್ರೀಗಳ ಸಂಪೂರ್ಣ ಬೆಂಬಲ, ಆಶೀರ್ವಾದ ಹೋರಾಟಕ್ಕೆ ಭೀಮಬಲವನ್ನು ತಂದುಕೊಟ್ಟಿತು.
ಯೋಜನೆಗಳ ವಿರುದ್ಧದ ಫಲಕಗಳನ್ನು ಹಿಡಿದು ಮಹಿಳೆಯರು ಸೇರಿದಂತೆ ಸಾವಿರಾರು ಹೋರಾಟಗಾರರು ಹೆದ್ದಾರಿಯ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಯಲ್ಲಾಪುರದಲ್ಲಿ ಹೆದ್ದಾರಿ ತಡೆ ನಡೆಸಿ, ನದಿ ಜೋಡಣೆ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಲು ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಿದರು.ಈ ಹೋರಾಟದ ವಿಶೇಷವೆಂದರೆ ರಾಜಕೀಯ ಪಕ್ಷಗಳ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಒಂದೇ ವೇದಿಕೆಯಲ್ಲಿ ಕೈಜೋಡಿಸಿದ್ದು. ರೈತರು, ಮಹಿಳೆಯರು, ಯುವಕರು, ಪರಿಸರ ಹೋರಾಟಗಾರರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರು ಸ್ವಯಂಪ್ರೇರಿತವಾಗಿ ಪಾಲ್ಗೊಂಡಿದ್ದರು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಶಿವರಾಮ ಹೆಬ್ಬಾರ್, ದಿನಕರ ಶೆಟ್ಟಿ, ಭೀಮಣ್ಣ ನಾಯ್ಕ, ಪ್ರಮುಖರಾದ ಬಿ.ಎಂ. ಕುಮಾರಸ್ವಾಮಿ, ನಾರಾಯಣ ಭಟ್ ಅಗ್ಗಾಶಿಕುಂಬ್ರಿ, ಅನಂತ ಹೆಗಡೆ ಅಶೀಸರ, ಹರಿಪ್ರಕಾಶ ಕೋಣೆಮನೆ, ಅನಂತಮೂರ್ತಿ ಹೆಗಡೆ ಸೇರಿದಂತೆ ಹಲವು ಗಣ್ಯರು, ಪರಿಸರವಾದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಯೋಜನೆಗಳ ವಿರುದ್ಧ ಧ್ವನಿ ಎತ್ತಿದರು.
ಸಂಕಲ್ಪ ಸಂಕೀರ್ಣದ ಎದುರು ಸಂಕಲ್ಪ: ಸಂಕಲ್ಪ ಸಂಕೀರ್ಣದ ಎದುರು ಹೆದ್ದಾರಿ ತಡೆ ನಡೆಸಿದ ಹೋರಾಟಗಾರರು, ನದಿ ಜೋಡಣೆ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಲು ಅವಕಾಶ ನೀಡುವುದಿಲ್ಲ ಎಂದು ಸಾಮೂಹಿಕ ಸಂಕಲ್ಪ ಮಾಡಿದರು. ಇದು ಕೇವಲ ಒಂದು ದಿನದ ಪ್ರತಿಭಟನೆಯಲ್ಲ, ನದಿಗಳ ಅಸ್ತಿತ್ವ, ಪರಿಸರ ಮತ್ತು ಮುಂದಿನ ಪೀಳಿಗೆಯ ಬದುಕನ್ನು ಉಳಿಸುವವರೆಗೂ ಹೋರಾಟ ಮುಂದುವರಿಯಲಿದೆ ಎಂಬ ಎಚ್ಚರಿಕೆಯೂ ಆಗಿತ್ತು.ಜಾಗಟೆ ಬಾರಿಸುತ್ತಾ ಪರಿಸರ ಗೀತೆಗಳನ್ನು ಹಾಡಿದ ಹೋರಾಟಗಾರರು, ನದಿಗಳ ಸಹಜ ಹರಿವನ್ನು ಬದಲಿಸುವುದರಿಂದ ಪಶ್ಚಿಮ ಘಟ್ಟದ ಜೀವವೈವಿಧ್ಯ, ಅರಣ್ಯ ಸಂಪತ್ತು, ಕೃಷಿ ಮತ್ತು ಸ್ಥಳೀಯ ಜನಜೀವನದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಹೆದ್ದಾರಿಯೇ ಹೋರಾಟದ ವೇದಿಕೆ: ಬೆಳಗ್ಗೆ ಡಿವಿಎಸ್ ಸುದರ್ಶನ ಮಾರ್ಕೆಟ್ ಬಳಿಯ ಮೈದಾನದಲ್ಲಿ ಬೆಳಗ್ಗೆ ಪ್ರತಿಭಟನಾ ಸಭೆ ನಡೆಸಿ, ಬಳಿಕ ಮೆರವಣಿಗೆಯಲ್ಲಿ ಸಂಕಲ್ಪ ಸಂಕಿರ್ಣದ ಬಳಿ ಅಗಮಿಸಿ ಹೆದ್ದಾರಿ ತಡೆ ಆರಂಭಿಸಿದರು.ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಮಹಿಳೆಯರು ಸೇರಿದಂತೆ ಹೋರಾಟಗಾರರು ನದಿ ಜೋಡಣೆ ಯೋಜನೆ ವಿರೋಧಿ ಫಲಕಗಳನ್ನು ಹಿಡಿದು ಹೆದ್ದಾರಿಯ ಮೇಲೆಯೇ ಕುಳಿತು ಘೋಷಣೆ ಕೂಗಿದರು. ಜನರ ಆಕ್ರೋಶದ ನಡುವೆ ಹೆದ್ದಾರಿ ತಡೆ ನಡೆಸಲಾಯಿತು. ಹಳ್ಳಿ ಹಳ್ಳಿಗಳಿಂದ ವಾಹನಗಳಲ್ಲಿ, ಗುಂಪು ಗುಂಪಾಗಿ ಆಗಮಿಸಿದ ಜನರ ಸಂಖ್ಯೆಯೇ ಹೋರಾಟದ ತೀವ್ರತೆಗೆ ಸಾಕ್ಷಿಯಾಗಿತ್ತು.ಉತ್ತರ ಕನ್ನಡ ಜಿಲ್ಲೆ ಈಗಾಗಲೇ ಸುಪಾ, ಕದ್ರಾ, ಕೊಡಸಳ್ಳಿ ಜಲವಿದ್ಯುತ್ ಯೋಜನೆಗಳು, ಕೈಗಾ ಅಣು ವಿದ್ಯುತ್ ಯೋಜನೆ, ಸೀಬರ್ಡ್ ನೌಕಾನೆಲೆ ಸೇರಿದಂತೆ ಹಲವು ಬೃಹತ್ ಯೋಜನೆಗಳ ಭಾರವನ್ನು ಹೊತ್ತಿದೆ. ಇಂತಹ ಸಂದರ್ಭದಲ್ಲಿ ಮತ್ತಷ್ಟು ನದಿ ತಿರುವು ಯೋಜನೆಗಳನ್ನು ಹೇರಿದರೆ ಜಿಲ್ಲೆಯ ಪರಿಸರ ಸಮತೋಲನಕ್ಕೆ ಧಕ್ಕೆಯಾಗಲಿದೆ ಎಂಬುದು ಹೋರಾಟಗಾರರ ಆತಂಕ.
ನದಿಗಳು ಕೇವಲ ನೀರಿನ ಮೂಲಗಳಲ್ಲ; ಅವು ಅರಣ್ಯ, ಕೃಷಿ, ಜೀವವೈವಿಧ್ಯ ಮತ್ತು ಜನರ ಬದುಕಿನ ಜೀವನಾಡಿಗಳು. ಅಭಿವೃದ್ಧಿಯ ಹೆಸರಿನಲ್ಲಿ ಅವುಗಳ ಸಹಜ ಅಸ್ತಿತ್ವವನ್ನೇ ಬದಲಿಸುವ ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ ಎಂಬ ಒಕ್ಕೊರಲಿನ ಸಂದೇಶ ಪ್ರತಿಭಟನೆಯಲ್ಲಿ ಮೊಳಗಿತು.ಯಲ್ಲಾಪುರದ ಈ ಬೃಹತ್ ಪ್ರತಿಭಟನೆ ಉತ್ತರ ಕನ್ನಡದ ಪರಿಸರ ಹೋರಾಟದಲ್ಲಿ ಮಹತ್ವದ ಮೈಲಿಗಲ್ಲಾಗಿ ಗುರುತಿಸಿಕೊಂಡಿತು. ರಾಜಕೀಯ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ನಿಂತಿದ್ದು, ಜನಸಾಮಾನ್ಯರು ಬೀದಿಗಿಳಿದಿದ್ದು ಯೋಜನೆಗಳ ವಿರುದ್ಧದ ಹೋರಾಟಕ್ಕೆ ಹೊಸ ಆಯಾಮ ನೀಡಿತು.