ಕನ್ನಡಪ್ರಭ ವಾರ್ತೆ ವಿಜಯಪುರ
ಗಾಂಧಿನಗರ ಸ್ಟಾರ್ ಚೌಕ್ ಹತ್ತಿರ ಇಟ್ಟಂಗಿಭಟ್ಟಿ ಕಾರ್ಮಿಕರನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಆರೋಪಿಗಳಿಗೆ ಉಗ್ರ ಶಿಕ್ಷೆಗೆ ಒಳಪಡಿಸುವಂತೆ ಕಾರ್ಮಿಕ ಸಂಘಟನೆಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನ್ಯಾಯವಾದಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ನ್ಯಾಯವಾದಿ ದಾನೇಶ ಅವಟಿ ಮಾತನಾಡಿ, ವಿಜಯಪುರ ಜಿಲ್ಲೆ ಬರಗಾಲ ಪೀಡಿತ ಪ್ರದೇಶಗಳಲ್ಲಿ ಒಂದಾಗಿದ್ದು ಇಲ್ಲಿಯ ಕಾರ್ಮಿಕರು ಹೊಟ್ಟೆಪಾಡಿಗಾಗಿ ಬೇರೆ ಬೇರೆ ಕಡೆಗೆ ಕೆಲಸಕ್ಕಾಗಿ ಅಲೆಯುವುದು ಸರ್ವೇಸಾಮಾನ್ಯವಾಗಿದ್ದು. ಕೆಲವು ಕಡೆಗೆ ಕೂಲಿ ಕಾರ್ಮಿಕರ ಮೇಲೆ ದಬ್ಬಾಳಿಕೆ ಶೋಷಣೆ ಹಲ್ಲೆಗಳು ಮಿತಿ ಮೀರುತ್ತಿವೆ ಎಂದು ಕಿಡಿಕಾರಿದರು.ಜಿಲ್ಲಾ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಹಾಗೂ ಸಂಘಟಿತರ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರಕಾಶ ರಜಪೂತ ಮಾತನಾಡಿ, ಜಿಲ್ಲೆಯಲ್ಲಿ ಬಾಲಕಾರ್ಮಿಕತೆ ಹೆಚ್ಚಾಗುತ್ತಿದೆ. ಕೂಲಿಕಾರ್ಮಿಕರನ್ನು ಹಗಲಿರುಳು ದುಡಿಸಿಕೊಳ್ಳುವುದು, ಅವರ ಜೀವಕ್ಕೆ ಶರೀರಕ್ಕೆ ತೊಂದರೆ ಆಗದಂತೆ ಭದ್ರತೆ, ಇತರೆ ಸೌಕರ್ಯಗಳನ್ನು ಒದಗಿಸದಿರುವುದು. ರಜೆ ಹಾಗೂ ಪಗಾರ ಕೊಡದೇ ಶೋಷಿಸುವುದು ಹೆಚ್ಚಾಗಿರುವುದು ಕೇಳಿ ಬರುತ್ತಿದೆ. ಕಳೆದ ಒಂದು ವಾರದ ಹಿಂದೆ ಮಹಾತ್ಮ ಗಾಂಧಿ ನಗರದ ಸ್ಟಾರ್ ಚೌಕ್ ಹತ್ತಿರವಿರುವ ಖೇಮೂ ರಾಠೋಡ ಎಂಬ ವ್ಯಕ್ತಿಯ ಇಟ್ಟಂಗಿಭಟ್ಟಿಯಲ್ಲಿ ಹೊಟ್ಟೆ ಪಾಡಿಗಾಗಿ ಕೆಲಸಕ್ಕಿದ್ದ ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸನ ಕೂಲಿ ಕಾರ್ಮಿಕರಾದ ಸದಾಶಿವ ಮಾದರ, ಉಮೇಶ್ ಮಾದರ, ಸದಾಶಿವ ಬಾಬಲಾದಿ ಎಂಬ ಕಾರ್ಮಿಕರ ಮೇಲೆ ಕಬ್ಬಿಣದ ರಾಡು, ಪೈಪು, ಕಟ್ಟಿಗೆಯಿಂದ ಮಾಲೀಕ ಖೇಮು ರಾಠೋಡ ಹಾಗೂ ಮೂರ್ನಾಲ್ಕು ಜನ ಗೂಂಡಾಗಳು ಸೇರಿ ಎರಡ್ಮೂರು ದಿನ ಕೂಡಿಹಾಕಿ, ಕಣ್ಣಿಗೆ ಖಾರದ ಪುಡಿ ಎರಚಿ ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಿರುವು ದೃಶ್ಯಗಳನ್ನು ವಿಡಿಯೋ ಹಾಗೂ ದೃಶ್ಯ ಮಾದ್ಯಮಗಳಲ್ಲಿ ನೋಡಿದಾಗ ಮೈ ಜೂಮ್ ಎನಿಸಿ ಆಕ್ರೋಶ ಉಕ್ಕಿ ಹರಿಯುತ್ತಿದ್ದು, ಅವರು ಪ್ರಾಣ ಬೀಕ್ಷೆ ಬೇಡಿ ಕಾಲ ಮೇಲೆ ಬಿದ್ದರೂ ಅವರ ಎದೆ ಕುತ್ತಿಗೆ ಮೇಲೆ ಕಾಲಿಟ್ಟು ಗುಂಪಾಗಿ ಹಲ್ಲೆ ನಡೆಸುತ್ತಿರುವುದನ್ನು ಕಂಡಾಗ ಇವರು ಮಾನವ ರೂಪದ ರಾಕ್ಷಸರು ಎನಿಸುತ್ತದೆ. ಇದೊಂದು ನಾಗರೀಕ ಸಮಾಜ ತಲೆ ತಗ್ಗಿಸುವ ಹೇಯ ಕೃತ್ಯವಾಗಿದ್ದು, ರಾಜ್ಯಾದ್ಯಂತ ನಾಗರಿಕರು ಮಮ್ಮಲ ಮರುಗಿದರಲ್ಲದೇ ಹಿಡಿ ಶಾಪ ಹಾಕುತ್ತಿದ್ದಾರೆ ಎಂದರು. ವಿಜಯಪುರ ನಗರ ಕಟ್ಟಡ ಮತ್ತು ಅಸಂಘಟಿತ ಯೂನಿಯನ್‌ನಿ ರವಿ ದೊಡಮನಿ ಮಾತನಾಡಿ, ಹಲ್ಲೆಗೆ ಒಳಗಾದ ಅಮಾಯಕ ಅನಕ್ಷರಸ್ಥ.ದಲಿತ ಕುಟುಂಬದವರು ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದು.ಕೂಲಿ ನಾಲಿ ಮಾಡಿ ಜೀವನ ಸಾಗಿಸುವ ಜನ ಇಂದು ಅಕ್ಷರಶಃ ಬೀದಿಗೆ ಬಂದಿದ್ದಾರೆ. ಸರ್ಕಾರ ಅವರ ಕುಟುಂಬ ವರ್ಗದವರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಭದ್ರತೆ ನೀಡಬೇಕು. ತೆರೆಯ ಮರೆಯಲ್ಲಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುವವರಿಗೆ ಅವಕಾಶ ನೀಡದೆ.ದುಷ್ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯವಾದಿ ಬಾಬು ಹಿಪ್ಪರಗಿ, ಸಿದ್ದು ಅವಟಿ, ಕಿರಣ ಮಠಪತಿ, ಐಎನ್‌ಟಿಯುಸಿ ಜಿಲ್ಲಾಧ್ಯಕ್ಷ ಪರಸನಗೌಡ ಪಾಟೀಲ, ಸಮಾಜ ಸೇವಕ ಯಲ್ಲಪ್ಪ ಇರಕಲ್ಲ, ಬಸವರಾಜ ಆರ್.ಕೆ.ಸಂತೋಷ ಮುಂಜಣ್ಣಿ, ಈರಣ್ಣ ಡೆಂಗಿ, ಜಮೀರ್ ಕೊಡಗಾನೂರ, ಮಲ್ಲಿಕಾರ್ಜುಣ ದೊತ್ರೆ, ಆನಂದ ಹಿರೇಮಠ, ಶ್ರೀಶೈಲ ಗೊರನಾಳ, ಸಿದ್ದು ಅವಟಿ, ಕಿರಣ ಮಠಪತಿ, ಸತೀಶ ಯಂಕಟಿ, ಶ್ರೀಶೈಲ ಗೊರನಾಳ, ಗುರುನಾಥ ವಾಲಿಕಾರ ಮುಂತಾದವರು ಇದ್ದರು.